ADVERTISEMENT

ಅತಾಲಟ್ಟಿಗೆ ನೆರವು: ಜರ್ಮನಿ ತಂಡ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 9:00 IST
Last Updated 28 ಅಕ್ಟೋಬರ್ 2011, 9:00 IST

ವಿಜಾಪುರ: ಜರ್ಮನಿಯ ಹರ್ಮನ್-ಗುಂಡ್ಹರ್ಟ್ ಸೊಸೈಟಿಯ ಮೋನಿಕಾ ಲಾಂಡ್‌ಗ್ರಾಫ್ ನೇತೃತ್ವದ ನಿಯೋಗವೊಂದು ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿತ್ತು. 

 ಮಹಿಳಾ ವಿವಿಯ ದತ್ತು ಗ್ರಾಮ ಅತಾಲಟ್ಟಿಯಲ್ಲಿ ಶೌಚಾಲಯ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡುವುದಾಗಿ ಈ ನಿಯೋಗದ ಸದಸ್ಯರು ಭರವಸೆ ನೀಡಿದರು.

ಅತಾಲಟ್ಟಿ ಗ್ರಾಮಕ್ಕೆ ಈ ನಿಯೋಗ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಸಾಂಪ್ರದಾಯಿಕ ಸ್ವಾಗತ ಕೋರಿದರು. ನಂತರ ಗ್ರಾಮದ ವಿವಿಧ ಓಣಿಗಳಲ್ಲಿ ಸಂಚರಿಸಿದ ನಿಯೋಗದ ಸದಸ್ಯರು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.


ಗ್ರಾಮೀಣ ಪ್ರದೇಶದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗೆಗೆ ವಿಶೇಷ ಆಸ್ಥೆ ವಹಿಸಿ ಮಾಹಿತಿ ಸಂಗ್ರಹಿಸಿದ ಜರ್ಮನ್ ನಿಯೋಗದ ಸದಸ್ಯರು, ಶಾಲಾ ಶಿಕ್ಷಣ ವ್ಯವಸ್ಥೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. 
ಮಹಿಳಾ ವಿವಿ ಜ್ಞಾನಶಕ್ತಿ ಆವರಣದಲ್ಲಿರುವ ಪೇಪರ್ ಪುನರ್ ಉತ್ಪಾದನಾ ಘಟಕ, ಆಹಾರ ಸಂಸ್ಕರಣ ಘಟಕ, ಜೈವಿಕ ಇಂಧನ ಘಟಕ, ಜ್ಞಾನವಾಹಿನಿ ಮೀಡಿಯಾ ಸೆಂಟರ್‌ಗಳನ್ನೊಳಗೊಂಡ ಮಹಿಳಾ ತಂತ್ರಜ್ಞಾನ ಪಾರ್ಕಿಗೆ ಭೇಟಿ ನೀಡಿದರು.

ಕುಲಪತಿ ಪ್ರೊ.ಗೀತಾ ಬಾಲಿ ಅವರೊಂದಿಗೆ ಚರ್ಚೆ ನಡೆಸಿದ ಈ ತಂಡದ ಸದಸ್ಯರು, ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಕ್ರಮಗಳು, ವಿಶಿಷ್ಟ ಪಠ್ಯಕ್ರಮ, ಕ್ರಿಯಾತ್ಮಕ ಯೋಜನೆಗಳ ಬಗ್ಗೆ ಚರ್ಚಿಸಿದರು.

`ಮಹಿಳಾ ವಿವಿ ಅತ್ಯಂತ ವಿಶಿಷ್ಟವಾದ ಪಠ್ಯಕ್ರಮ ಹೊಂದಿದ್ದು ವಿದ್ಯಾರ್ಥಿನಿಯರು ತಾವು ಓದುತ್ತಿರುವ ಕೋರ್ಸ್‌ಗಳ ಜತೆಗೆ ಬೇರೊಂದು ಉಪಯುಕ್ತ ವಿಷಯವನ್ನು ಆಯ್ಕೆ ಮಾಡಿಕೊಂಡು ಓದುವ ಅವಕಾಶ ಕಲ್ಪಿಸಲಾಗಿದೆ. ಎರಡು ವರ್ಷದ ಸ್ನಾತಕೋತ್ತರ ಕೋರ್ಸ್‌ಗಳನ್ನು ಓದುವಾಗಲೇ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಏಕಕಾಲಕ್ಕೆ ಓದುವ ಅವಕಾಶ ಇಲ್ಲಿದೆ. ಇದರಿಂದ ಎರಡು ವರ್ಷಗಳಲ್ಲಿ ಮೂರು ಪದವಿ ಪಡೆಯಬಹುದಾಗಿದೆ~ ಎಂದು ಕುಲಪತಿ ವಿವರಿಸಿದರು.

ಕುಲಸಚಿವ ಪ್ರೊ. ಜಿ. ಆರ್. ನಾಯಿಕ, ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ. ಎಸ್. ಎ. ಖಾಜಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಪಿ. ಜಿ. ತಡಸದ, ಡಾ. ಆರ್. ಸುನಂದಮ್ಮ, ಡಾ.ಓಂಕಾರ ಕಾಕಡೆ ಮತ್ತಿತರರು ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT