ADVERTISEMENT

ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 5:44 IST
Last Updated 22 ಡಿಸೆಂಬರ್ 2017, 5:44 IST

ಬಸವನಬಾಗೇವಾಡಿ: ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಗಲ್ಲಿಗೆ ಏರಿಸಬೇಕು ಎಂದು ಆಗ್ರಹಿಸಿ ಗುರುವಾರ ರಾಷ್ಟ್ರೀಯ ಬಸವ ಸೈನ್ಯ, ಎಬಿವಿಪಿ, ದಲಿತ ಸಂಘರ್ಷ ಸಮಿತಿ, ರಾಷ್ಟ್ರೀಯ ಜನಶಕ್ತಿ ವೇದಿಕೆ, ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಪಟ್ಟಣದ ವಿವಿಧ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಶಿರಸ್ತೇದಾರ ಶ್ರೀನಿವಾಸ ಕಲಾಲ ಅವರಿಗೆ ಎರಡು ಸಂಘಟನೆಗಳಿಂದ ಪ್ರತ್ಯೇಕ ಮನವಿ ಸಲ್ಲಿಸಲಾಯಿತು. ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡ ಸಂಗಮೇಶ ಓಲೇಕಾರ, ಮಲ್ಲಿಕಾರ್ಜುನ ದೇವರಮನಿ, ರಾಜು ಪಟ್ಟಣಶೆಟ್ಟಿ ಮಾತನಾಡಿದರು.

ADVERTISEMENT

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ರಾಷ್ಟ್ರೀಯ ಜನಶಕ್ತಿ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಗಲ್ಲಿಗೆರಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು. ದಸಂಸ ಜಿಲ್ಲಾ ಸಂಚಾಲಕ ಸುರೇಶ ಮಣ್ಣೂರ, ಮುಖಂಡರಾದ ಮುತ್ತಣ್ಣ ಚಲವಾದಿ, ಗುರು ಗುಡಿಮನಿ, ಪ್ರಶಾಂತ ಚಲವಾದಿ ಇದ್ದರು.

ಹೆದ್ದಾರಿ ಬಂದ್: ವಿದ್ಯಾರ್ಥಿನಿಯ ಆಕ್ರೋಶ

ದೇವರ ಹಿಪ್ಪರಗಿ: ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಖಂಡಿಸಿ, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರು ಹಾಗೂ ಅಂಬೇಡ್ಕರ್ ಸೈನ್ಯದ ವತಿಯಿಂದ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಗುರುವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಅಂಬೇಡ್ಕರ್ ಸೇನೆ ಕಾರ್ಯಕರ್ತರು, ಸರ್ಕಾರ ಮತ್ತು ಅತ್ಯಾಚಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತ ರಾಷ್ಟ್ರೀಯ ಹೆದ್ದಾರಿ ಮೂಲಕ ಮೊಹರೆ ಹಣಮಂತ್ರಾಯ ವೃತ್ತದವರೆಗೆ ಮೆರವಣಿಗೆ ನಡೆಸಿ ರಾಷ್ಟ್ರೀಯ ಹೆದ್ದಾರಿ–218 ರ ಮೇಲೆ ಮೇಲೆ ಒಂದು ಗಂಟೆಯವರೆಗೆ ಧರಣಿ ಕುಳಿತು ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡ ಶೇಖರ ಮಲ್ಲಾರಿ, ಪಟ್ಟಣ ಪಂಚಾಯ್ತಿ ಸದಸ್ಯ ಗುರುರಾಜ ಗಡೇದ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮೆಲ್ಲ ಸಭೆ ಸಮಾರಂಭ ಮುಗಿಸಿಕೊಂಡು ಮೃತಳ ಮನೆಗೆ ಭೇಟಿ ನೀಡಿ ಪರಿಹಾರ ಘೋಷಣೆ ಮಾಡಿದರೆ ಸಾಲದು, ಸಂಬಂಧ ಪಟ್ಟ ಸಚಿವರು, ಇಲಾಖೆಯ ಅಧಿಕಾರಿಗಳಿಗೆ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯಾವುದೇ ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪಕ್ಕೆ ಒಳಗಾಗದೆ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಪತ್ತೆ ಹಚ್ಚಬೇಕು. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತ ಅಮಾನವೀಯ ಕೃತ್ಯ ನಮ್ಮ ಜಿಲ್ಲೆಯಲ್ಲಿ ನಡೆದಿರುವುದು ಅತ್ಯಂತ ಖೇದಕರ ಇಂತಹ ಹೀನ ಕೃತ್ಯಕ್ಕೆ ಕಾರಣರಾದ ಆರೋಪಿಗಳನ್ನು ಗುರುತಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆ.ಡಿ.ಎಸ್ ಅಧ್ಯಕ್ಷ ರಿಯಾಜ್ ಯಲಗಾರ, ದಲಿತ ಮುಖಂಡ ಕಾಶೀನಾಥ ತಳಕೇರಿ ಮಾತನಾಡಿದರು. ನಂತರ ಉಪತಹಶೀಲ್ದಾರ್ ಇಂದಿರಾ ಬಳಗಾನೂರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಬಿಎಸ್‌ಪಿ ಮುಖಂಡ ದಸ್ತಗೀರ ಮುಲ್ಲಾ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಭಾಸ್ಕರ ಗುಡಿಮನಿ, ಪ್ರದೀಪ ಮಲ್ಲಾರಿ ಮಾತನಾಡಿದರು.

ಸಿದ್ದು ಮೇಲಿನಮನಿ, ವಿಠ್ಠಲ ಮಲ್ಲಾರಿ, ರೇವಣಸಿದ್ಧ ತಳಕೇರಿ, ಸುನಿಲ ದೊಡಮನಿ, ಮುನ್ನಾ ಮಳಖೇಡ, ವಿಲಾಸ ಮಲ್ಲಾರಿ, ರಾವುತ ಗುಡಿಮನಿ, ಸದ್ದಾಂ ನದಾಫ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.