ADVERTISEMENT

ಅಧ್ಯಕ್ಷರ ಚುನಾವಣೆ ಇನ್ನಷ್ಟು ವಿಳಂಬ

ಗಣೇಶ ಚಂದನಶಿವ
Published 22 ಫೆಬ್ರುವರಿ 2012, 8:20 IST
Last Updated 22 ಫೆಬ್ರುವರಿ 2012, 8:20 IST

ವಿಜಾಪುರ: ಹಲವು ಕಾರಣಗಳಿಂದ ತೆರವಾಗಿರುವ ವಿಜಾಪುರ, ಬಾಗಲಕೋಟೆ, ಹಾವೇರಿ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಚುನಾವಣೆಯ ಮೇಲೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ `ಕರಿ ನೆರಳು~ ಬಿದ್ದಿದೆ!

ಉತ್ತರ ಪ್ರದೇಶದ ಚುನಾವಣೆಗೂ ಈ ಜಿಲ್ಲಾ ಪಂಚಾಯಿತಿಗಳಿಗೂ ಏನು ಸಂಬಂಧ ಎನ್ನುತ್ತೀರಾ? ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಬೇಕಾದ ಅಧಿಕಾರಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವೀಕ್ಷಕರಾಗಿದ್ದಾರೆ. ಇದರಿಂದಾಗಿ ಈ ಸಂಬಂಧ ತಳಕು ಹಾಕಿಕೊಂಡಿದ್ದು, ಹೊಸ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ.

ವಿಜಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಶಂಕ್ರುಬಾಯಿ ಚಲವಾದಿ ಅವರನ್ನು ಫೆ.4ರಂದು ಅವಿಶ್ವಾಸ ಗೊತ್ತುವಳಿ ಸ್ವೀಕರಿಸುವ ಮೂಲಕ ಅಧಿಕಾರದಿಂದ ಕೆಳಗಿಳಿಸಲಾಗಿದೆ. ಇದಕ್ಕಿಂತ ಮೊದಲೇ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಶೈಲಗೌಡ ಬಿರಾದಾರ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನವೂ ತೆರವಾಗಿದೆ. ನಿಯಮದಂತೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ನಾಡಗೌಡ ಈಗ ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷರಾಗಿದ್ದಾರೆ.

ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಓಲೇಕಾರ ಅವರನ್ನೂ ಸಹ ಅವಿಶ್ವಾಸ ಗೊತ್ತುವಳಿ ಸ್ವೀಕರಿಸುವ ಮೂಲಕ ಪದಚ್ಯುತಗೊಳಿಸಲಾಗಿದೆ. ಉಪಾಧ್ಯಕ್ಷೆ ಗದಿಗೆವ್ವ ಬಸನಗೌಡ ಹಂಗಾಮಿ ಅಧ್ಯಕ್ಷೆಯಾಗಿದ್ದಾರೆ.

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ದಡ್ಡೇನವರ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಅಲ್ಲಿಯ ಉಪಾಧ್ಯಕ್ಷ ಹೂವಪ್ಪ ರಾಠೋಡ ಹಂಗಾಮಿ ಅಧ್ಯಕ್ಷರಾಗಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ 20 ತಿಂಗಳು. ಎಲ್ಲರನ್ನೂ ತೃಪ್ತಿ ಪಡಿಸಲು ಹಾಗೂ ಬಣ ರಾಜಕೀಯಗಳ ಮೇಲಾಟದಿಂದ ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು ಮೊಟಕುಗೊಳಿಸಿ, ಹೊಸಬರವನ್ನು ಆ ಸ್ಥಾನದಲ್ಲಿ ಕೂಡಿಸುವ ಪರಿಪಾಠ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಹೀಗಾಗಿ 10 ತಿಂಗಳಾದ ನಂತರ ರಾಜೀನಾಮೆ, ಉಚ್ಚಾಟನೆ, ಪದಚ್ಯುತಿ ಸಾಮಾನ್ಯ ಎಂಬಂತಾಗಿವೆ.

ರಾಜೀನಾಮೆ ಅಥವಾ ಅವಿಶ್ವಾಸ ಗೊತ್ತುವಳಿಯಿಂದ ತೆರವಾಗುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತರೇ ನಡೆಸಬೇಕು ಎಂಬುದು ನಿಯಮ. ಈಗ ತೆರವಾಗಿರುವ ವಿಜಾಪುರ, ಬಾಗಲಕೋಟೆ, ಹಾವೇರಿ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ ಸ್ಥಾನಗಳಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಚುನಾವಣೆ ನಡೆಸಬೇಕು. ಚುನಾವಣೆ ದಿನಾಂಕ ನಿಗದಿ ಮಾಡುವುದೂ ಅವರೇ.

`ಬೆಳಗಾವಿ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಅವರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವೀಕ್ಷಕರಾಗಿ ತೆರಳಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ಹುದ್ದೆಯ ಪ್ರಭಾರವನ್ನು ಅವರು ತಮ್ಮ ಕಚೇರಿಯ ಹೆಚ್ಚುವರಿ ಆಯುಕ್ತರಿಗೆ ನೀಡಿದ್ದಾರೆ. ಆದರೆ, ಪ್ರಭಾರ ಪ್ರಾದೇಶಿಕ ಆಯುಕ್ತರಿಗೆ ನಿತ್ಯದ ಆಡಳಿತ ನೋಡಿಕೊಂಡು ಹೋಗುವ ಅಧಿಕಾರ ಮಾತ್ರ ಇದೆಯೇ ಹೊರತು ಚುನಾವಣೆ ನಡೆಸುವ ಅಧಿಕಾರ ಅವರಿಗೆ ಇಲ್ಲ. ಇದು ಸಮಸ್ಯೆಯ ಮೂಲವಾಗಿದೆ~ ಎನ್ನುತ್ತಾರೆ ಅಧಿಕಾರಿಯೊಬ್ಬರು.

`ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆ ಮಾರ್ಚ್ 4ರಂದು ನಡೆಯಲಿದೆ. ಇಡೀ ಚುನಾವಣಾ ಪ್ರಕ್ರಿಯೆ ಮುಗಿಸಲು ಮಾರ್ಚ್ 9 ಕೊನೆಯ ದಿನ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊಣೆಗಾರಿಕೆಯಿಂದ ಗಂಗಾರಾಮ ಬಡೇರಿಯಾ ಮುಕ್ತರಾಗಿ ವಾಪಸ್ಸು ಬೆಳಗಾವಿಗೆ ಬಂದು ಪ್ರಾದೇಶಿಕ ಆಯುಕ್ತರ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಮಾರ್ಚ್ 12ರ ನಂತರವೇ~ ಎಂಬುದು ಕಚೇರಿ ಮೂಲಗಳು ನೀಡುವ ಮಾಹಿತಿ.

`ಪ್ರಾದೇಶಿಕ ಆಯುಕ್ತರು ಕರ್ತವ್ಯಕ್ಕೆ ಹಾಜರಾದ ನಂತರ ಈ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಲು ಅವರೇ ದಿನಾಂಕ ನಿಗದಿ ಮಾಡಬೇಕು. ಆ ನಂತರ ಅವರೇ ಖುದ್ದಾಗಿ ಇಲ್ಲಿಗೆ ಆಗಮಿಸಿ ಚುನಾವಣೆ ನಡೆಸಬೇಕು. ನಿಯಮದಂತೆ ನಿಗದಿತ ಕಾಲಾವಧಿ ನೀಡಿ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಸಭೆಯ ತಿಳಿವಳಿಕೆ ಪತ್ರ ನೀಡಬೇಕು. ಈ ಎಲ್ಲ ಕಾರ್ಯಗಳೂ ತುರ್ತಾಗಿ ನಡೆದರೂ ಈ ಮೂರು ಜಿಲ್ಲಾ ಪಂಚಾಯಿತಿಗಳಿಗೆ ಹೊಸ ಅಧ್ಯಕ್ಷರು ಬರುವುದು ಮಾರ್ಚ್ 15ರ ನಂತರವೇ~ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿಯವರು.

`ಉತ್ತರ ಪ್ರದೇಶ ಚುನಾವಣೆಯ ಕರ್ತವ್ಯದಲ್ಲಿರುವ ಗಂಗಾರಾಮ ಬಡೇರಿಯಾ ಬಿಡುವಿದ್ದಾಗ ಬಂದು ಚುನಾವಣೆಯ ದಿನಾಂಕ ನಿಗದಿ ಮಾಡಿ ಹೋಗಬೇಕು. ಇಲ್ಲವೆ ಅವರ ಸ್ಥಾನಕ್ಕೆ ಬೇರೊಬ್ಬರನ್ನು ಸರ್ಕಾರ ವರ್ಗಾಯಿಸಬೇಕು. ಅಂದರೆ ಮಾತ್ರ ಈ ಚುನಾವಣೆಗಳು ಬೇಗ ನಡೆಯಬಹುದು. ಇಲ್ಲದಿದ್ದರೆ ವಿಳಂಬ ಖಚಿತ~ ಎನ್ನುತ್ತಾರೆ ಮತ್ತೊಬ್ಬ ಅಧಿಕಾರಿ.

`ಇನ್ನುಳಿದ ಹತ್ತು ತಿಂಗಳಾದರೂ ಈ ಕುರ್ಚಿಯಲ್ಲಿ ಕೂಡ್ರಬೇಕು ಎಂದು ಕನಸು ಕಾಣುತ್ತಿರುವವರು ಇನ್ನಷ್ಟು ದಿನ ನಿದ್ರೆಗೆಡಬೇಕಾಗಿದೆ. ಇತ್ತ ಬಯಸದೇ ಬಂದ ಹಂಗಾಮಿ ಅಧ್ಯಕ್ಷ ಸ್ಥಾನ ವಹಿಸಿಕೊಂಡವರು ಮತ್ತಷ್ಟು ದಿನ ಅಧಿಕಾರ ಚಲಾಯಿಸಲಿದ್ದಾರೆ~ ಎನ್ನುತ್ತಾರೆ ಜಿ.ಪಂ. ಸದಸ್ಯರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.