ADVERTISEMENT

ಅಮೆರಿಕ ಮಹಿಳಾ ವಿವಿಗಳ ಸುತ್ತ...

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 5:22 IST
Last Updated 11 ಜನವರಿ 2014, 5:22 IST

ವಿಜಾಪುರ: ‘ಅಮೆರಿಕದ ಮಹಿಳಾ ಕಾಲೇಜುಗಳು ಮತ್ತು ವಿಶ್ವ­ವಿದ್ಯಾಲಯ­ಗಳಲ್ಲಿ ಶೇ 2ರಷ್ಟು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಆದರೆ ಅಮೆರಿಕದ ಉನ್ನತ ಹುದ್ದೆ­ಗಳಲ್ಲಿ ಮಹಿಳಾ ವಿಶ್ವವಿದ್ಯಾಲಯ­ಗಳಿಂದ ಪದವಿ ಪಡೆದವರೇ ಇದ್ದಾರೆ ಎಂಬುದು ಗಮನಾರ್ಹ ಸಂಗತಿ’ ಎಂದು ಚನ್ನೈನ ಅಮೆರಿಕನ್ ಕಾನ್ಸು­ಲೇಟ್‌ ಸಾಂಸ್ಕೃತಿಕ ವ್ಯವಹಾರಗಳ ಅಧಿಕಾರಿ ಶಾನ್ ಸುರೇಂದ್ರ ಹೇಳಿದರು.

ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪತ್ರಿ­ಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬುಧವಾರ ಏರ್ಪಡಿಸಿದ್ದ ವಿಡಿಯೋ ಕಾನ್ಫ­ರೆನ್‌್ಸನಲ್ಲಿ ‘ಅಮೆರಿಕದಲ್ಲಿನ ಮಹಿಳಾ ಕಾಲೇಜುಗಳು, ವಿಶ್ವ­ವಿದ್ಯಾಲಯಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಅಮೆರಿಕದ 24 ರಾಜ್ಯಗಳಲ್ಲಿ ಒಟ್ಟು 60 ಮಹಿಳಾ ವಿಶ್ವವಿದ್ಯಾಲಯಗಳಿವೆ ಎಂದರು.

ಅಮೆರಿಕದ ಮಹಿಳಾ ವಿವಿಗಳಲ್ಲಿ ಅಧ್ಯಯನ ಮುಗಿಸಿರುವವರ ಪೈಕಿ ಬೆನಜೀರ್ ಭುಟ್ಟೋ, ಹಿಲರಿ ಕ್ಲಿಂಟನ್ ಮುಂತಾ­ದವರು ಅಂತಾರರಾಷ್ಟ್ರೀಯ ಮಟ್ಟದ ನಾಯಕರಾಗಿ ರೂಪುಗೊಂಡಿದ್ದಾರೆ ಎಂದರು.

ಅಮೆರಿಕದ ಮಹಿಳಾ ವಿಶ್ವವಿದ್ಯಾ­ಲಯ­ಗಳಲ್ಲಿ ಓದುತ್ತಿರುವ ವಿದ್ಯಾರ್ಥಿ­ಗಳಿಗೆ ಗರಿಷ್ಠ ಪ್ರಮಾಣದ ಭದ್ರತೆ ಒದಗಿಸಲಾಗುತ್ತಿದೆ. ವಿಶ್ವವಿದ್ಯಾಲ­ಯಗಳು ವಿದ್ಯಾರ್ಥಿಗಳ ರಕ್ಷಣೆಗೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ ಇದೆ. ಎಲ್ಲ ಕಡೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಹೀಗಾಗಿ ಇಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದರು.

ಅಮೆರಿಕನ್ ಕಾನ್ಸುಲೇಟ್ ಅಧಿಕಾರಿ ಜೆಪ್ರಿ ರಿಡೆನೋರ್ ಮಾತನಾಡಿ, ಅಮೆರಿಕದ ಮಹಿಳಾ ವಿವಿಗಳೀಗೆ ಭವ್ಯ ಇತಿಹಾಸವಿದೆ. ಅಮೆರಿಕದ ಸಾಮಾಜಿಕ ಬದಲಾವಣೆಯಲ್ಲಿ ಈ ಮಹಿಳಾ ವಿಶ್ವವಿದ್ಯಾಲಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಮತ್ತೊಬ್ಬ ಅಮೆರಿಕನ್ ಕಾನ್ಸು­ಲೇಟ್ ಅಧಿಕಾರಿ ಶ್ರವಣ ಸುರೇಂದ್ರ ಮಾತನಾಡಿ, ಅಮೆರಿಕದ ಮಹಿಳಾ ವಿಶ್ವವಿದ್ಯಾಲಯಗಳು ಅತ್ಯಂತ ಸುಸಜ್ಜಿತವಾಗಿದ್ದು ಕಲಿಕೆ ಮತ್ತು ಬೋಧನೆಗೆ ಎಲ್ಲ ಬಗೆಯ ತಂತ್ರಜ್ಞಾನ ಹೊಂದಿವೆ. ಅಲ್ಲಿಯ ಮಹಿಳಾ ವಿವಿಗಳಲ್ಲಿ ಪ್ರವೇಶ ಪಡೆಯಲು ಇಚ್ಚಿಸುವ ಭಾರತೀಯ ವಿದ್ಯಾರ್ಥಿನಿ­ಯರಿಗೆ ಅಗತ್ಯ ಮಾಹಿತಿಯನ್ನು ಚನ್ನೈನ ಅಮೆರಿಕನ್ ಕಾನ್ಸುಲೇಟ್ ಒದಗಿಸುತ್ತದೆ ಎಂದು ಅವರು ಹೇಳಿದರು. ಕಾನ್ಸುಲೇಟ್‌ ಮಾಹಿತಿ ವಿಭಾಗದ ಸಂಪಾದಕ ಭರ­ತ್ಕುಮಾರ್ ಸ್ವಾಗತಿ­ಸಿದರು. ಪತ್ರಿ­ಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.