ADVERTISEMENT

ಆಲಮಟ್ಟಿ: ದಾಖಲೆ ಪ್ರಮಾಣದ ನೀರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2013, 6:14 IST
Last Updated 26 ಜುಲೈ 2013, 6:14 IST
ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯದ ಎಲ್ಲಾ 26 ಗೇಟ್‌ಗಳನ್ನು ತೆರೆದು ಈ ವರ್ಷದ ದಾಖಲೆಯ 2,0,6,028 ಕ್ಯೂಸೆಕ್ ನೀರನ್ನು ಹೊರಬಿಡಲಾಯಿತು.
ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯದ ಎಲ್ಲಾ 26 ಗೇಟ್‌ಗಳನ್ನು ತೆರೆದು ಈ ವರ್ಷದ ದಾಖಲೆಯ 2,0,6,028 ಕ್ಯೂಸೆಕ್ ನೀರನ್ನು ಹೊರಬಿಡಲಾಯಿತು.   

ಆಲಮಟ್ಟಿ: ಇಲ್ಲಿಯ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರಕ್ಕೆ ಬುಧವಾರ ರಾತ್ರಿಯಿಂದ ದಾಖಲೆ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಎಲ್ಲ 26 ಗೇಟ್‌ಗಳನ್ನು ತೆರೆದು 2 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ಹೊರಬಿಡಲಾಗುತ್ತಿದೆ.

ಇದರಿಂದಾಗಿ ಆಲಮಟ್ಟಿ ಮುಂಭಾ ಗದ ನಾರಾಯಣಪುರ ಹಿಂಭಾಗದ, ಬಸವನಬಾಗೇವಾಡಿ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲ್ಲೂ ಕಿನ ಕೃಷ್ಣಾ ತೀರದ ಗ್ರಾಮಗಳಿಗೆ ನೆರೆಯ ಹಾವಳಿ ಉಂಟಾಗಲಿದ್ದು, ಅದನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಗುರುವಾರ ಬೆಳಿಗ್ಗೆ ಜಲಾಶಯದ ಎಲ್ಲ 26 ಗೇಟ್‌ಗಳು ಮತ್ತು ಕೆಪಿಸಿಎಲ್ ಮೂಲಕ 1,50,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಸಂಜೆ 5ರ ನಂತರ ಹೊರಹರಿವನ್ನು 2,06,028 ಕ್ಯೂಸೆಕ್‌ಗೆ ಹೆಚ್ಚಿಸ ಲಾಯಿತು.

ಹೀಗಾಗಿ ಆಲಮಟ್ಟಿಯ ಮುಂಭಾ ಗದ ಕೃಷ್ಣಾ ತೀರದ ಪ್ರದೇಶದ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಏತನ್ಮಧ್ಯೆ ನಾರಾಯಣ ಪುರದ ಬಸವಸಾಗರ ಜಲಾಶಯ ದಿಂದಲೂ 2 ಲಕ್ಷ ಕ್ಯೂಸೆಕ್ ನೀರು ಬಿಡುತ್ತಿರುವುದರಿಂದ ಪ್ರವಾಹದ ಅಬ್ಬರ ಕಡಿಮೆ ಎನ್ನಲಾಗಿದೆ.

ಮಹಾರಾಷ್ಟ್ರ ರಾಜ್ಯದ ಕೃಷ್ಣಾ ಕೊಳ್ಳದ ಪಶ್ಚಿಮ ಘಟ್ಟದಲ್ಲಿ ಮಳೆಯ ಅಬ್ಬರ ತೀವ್ರವಾಗಿದ್ದು, ಅಲ್ಲಿಯ ಜಲಾಶಯಗಳು ಭರ್ತಿಯಾಗಿದ್ದರಿಂದ ಮುಂದಿನ ನಾಲ್ಕೈದು ದಿನಗಳ ಕಾಲ ದಾಖಲೆ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇದೆ. ಸಂಜೆಯೂ ಒಳಹರಿವು ಹೆಚ್ಚಾದರೇ, ಹೊರಹರಿವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಹೇಳಿದರು.

ನೆರೆ ಹಾವಳಿ ಎದುರಿಸಲು ಸಜ್ಜು
ಆಲಮಟ್ಟಿ:
ಬಸವನಬಾಗೇವಾಡಿ ತಾಲ್ಲೂಕಿನ ಅರಳದಿನ್ನಿ, ಮುದ್ದೇಬಿಹಾಳ ತಾಲ್ಲೂಕಿನ ಕಾಶೀನಕುಂಟಿ, ಯಲಗೂರ, ಯಲ್ಲಮ್ಮನಬೂದಿಹಾಳ, ಹೊಳೆ ಮಸೂತಿ ಗ್ರಾಮಗಳ ಜಮೀನುಗಳು ಜಲಾವೃತಗೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇವೆರಡೂ ತಾಲ್ಲೂಕುಗಳ ಅಧಿಕಾರಿಗಳು ಪ್ರವಾಹ ಎದುರಿಸಲು ಸನ್ನದ್ಧರಾದರು.

ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳದಿಂದ ಬಂದ ಎರಡು ಬೋಟ್‌ಗಳನ್ನು ಕೃಷ್ಣಾ ನದಿ ದಂಡೆಯ ಮೇಲೆ ಓಡಿಸಲಾಯಿತು. ಅಲ್ಲದೇ 24 ತೆಪ್ಪಗಳನ್ನು ಅರಳದಿನ್ನಿ, ಆಲಮಟ್ಟಿಯ ಈಜುಗಾರರ ನೆರವಿನಿಂದ ಕೃಷ್ಣಾ ನದಿಯಲ್ಲಿ ಒಂದು ಸುತ್ತು ಹಾಕಲಾಯಿತು.
ಬಸವನಬಾಗೇವಾಡಿ ತಹಶೀಲ್ದಾರ್ ಅಪರ್ಣಾ ಪಾವಟೆ ಪ್ರವಾಹಕ್ಕೆ ಮುನ್ನ ಮಾಡಿಕೊಳ್ಳಲಾದ ಸಿದ್ಧತೆಗಳನ್ನು ಪರಿಶೀಲಿಸಿದರು.

ಮುದ್ದೇಬಿಹಾಳ ತಹಶೀಲ್ದಾರ್ ಸಿ. ಲಕ್ಷ್ಮಣ, ಅಗ್ನಿಶಾಮಕ ದಳದ ಪಿ.ಎಸ್.ಐ. ಬಸವರಾಜ ಬಿ.ಕೆ. (ಎಸ್.ಐ), ಎಸ್.ಎಚ್. ನದಾಫ, ಕಾಂಗ್ರೆಸ್ ಮುಖಂಡ ಬಸವರಾಜ ಬಾಗೇವಾಡಿ ಸೇರಿದಂತೆ, ನಿಡಗುಂದಿ, ಆಲಮಟ್ಟಿ ಠಾಣೆಯ ಪೊಲೀಸರು, ಬಸವನಬಾಗೇವಾಡಿ, ಮುದ್ದೆಬಿಹಾಳದ ಅಗ್ನಿಶಾಮಕ ದಳದ ಸಿಬ್ಬಂದಿ  ಇದ್ದರು.

ಕೃಷ್ಣೆಯ ರುದ್ರ ನರ್ತನ
ಬನಹಟ್ಟಿ:
ಕೃಷ್ಣೆಯ ರುದ್ರ ನರ್ತನ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಅಲ್ಲಿಯ ಜಲಾಶಯಗಳಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಕೃಷ್ಣೆಯ ರುದ್ರ ನರ್ತನ ಆರಂಭವಾಗಿ  ನಿಧಾನವಾಗಿ ನದಿ ತೀರದ ಹೊಲಗಳಿಗೆ ಮತ್ತು ತೋಟಗಳಿಗೆ ನೀರು ನುಗ್ಗತ್ತಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳು ಸದ್ಯ ನೀರಿನಲ್ಲಿ ನಿಂತಿವೆ. ಇನ್ನಷ್ಟು ಮಳೆ ಸುರಿದರೆ ಕೃಷ್ಣಾ ನದಿಯ ಹಿನ್ನೀರು ಹೆಚ್ಚಾಗಿ ಮತ್ತಷ್ಟು ಬೆಳೆಗಳು ಅಪಾಯದ ಸ್ಥಿತಿಯಲ್ಲಿ ಸಿಲುಕಲಿವೆ.

ಸದ್ಯ ಕೃಷ್ಣಾ ನದಿಯ ನೀರನ್ನು ಎಲ್ಲಿಯೂ ತಡೆದಿಲ್ಲ. ಆದ್ದರಿಂದ ಪ್ರವಾಹದ ಭೀತಿ ಕಡಿಮೆ. ಅದರೂ ಪ್ರವಾಹದಿಂದಾಗುವ ಅಪಾಯಗಳನ್ನು ಎದುರಿಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ ಎಂದು ಜಮಖಂಡಿ ತಹಶೀಲ್ದಾರ್ ಆರ್.ವಿ.ಕಟ್ಟಿ ತಿಳಿಸಿದರು.

ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
ವಿಜಾಪುರ:
ಅಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದು, ಜಲಾಶಯದ ಎಲ್ಲ 26 ಗೇಟ್‌ಗಳ ಮೂಲಕ 2,48,961 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಕೆಳಭಾಗದ ತಗ್ಗು ಪ್ರದೇಶದಲ್ಲಿರುವ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಸೂಚನೆ ನೀಡಿದ್ದಾರೆ.

ಜಲಾಶಯದ ಎಲ್ಲ 26 ಗೇಟ್‌ಗಳ ಮೂಲಕ 2,06,961 ಕ್ಯೂಸೆಕ್, ವಿದ್ಯುತ್ ಘಟಕಗಳ ಮೂಲಕ 42,000 ಕ್ಯೂಸೆಕ್ ಸೇರಿದಂತೆ ಒಟ್ಟು 2,48,961 ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.