ADVERTISEMENT

ಆಲಮಟ್ಟಿ ಸುತ್ತ ಚಿಕುನ್ ಗುನ್ಯಶಂಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 8:35 IST
Last Updated 13 ಅಕ್ಟೋಬರ್ 2012, 8:35 IST

ಆಲಮಟ್ಟಿ: ಕಳೆದೊಂದು ವಾರದಿಂದ ಕೃಷ್ಣಾ ತೀರದ ಪುನರ್ವಸತಿ ಕೇಂದ್ರಗಳಾದ ಬೇನಾಳ ಆರ್.ಎಸ್, ಮರಿಮಟ್ಟಿ, ಆಲಮಟ್ಟಿ, ಚಿಮ್ಮಲಗಿ ಭಾಗ-1ಎ, ಚಿಮ್ಮಲಗಿ ಭಾಗ -2 ಹಾಗೂ  ಗುಡದಿನ್ನಿ, ಹುಣಶ್ಯಾಳ ಮೊದಲಾದ ಗ್ರಾಮಗಳಲ್ಲಿ ಚಿಕುನ್ ಗುನ್ಯ, ಮಲೇರಿಯಾ ವ್ಯಾಪಕವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಬೇನಾಳ ಆರ್.ಎಸ್. ಮತ್ತು ಗುಡದಿನ್ನಿ ಗ್ರಾಮಗಳಲ್ಲಿ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ.

ಇದನ್ನು ನಿಯಂತ್ರಿಸಬೇಕಾದ ಆಲಮಟ್ಟಿ ಗ್ರಾ.ಪಂ ಹಾಗೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದರಿಂದ ಸಂತ್ರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 

ಚಿಕುನ್ ಗುನ್ಯಾ ಪೀಡಿತ ಬೇನಾಳ ಆರ್.ಎಸ್.ನಲ್ಲಿ 20ಕ್ಕೂ ಅಧಿಕ ಜನರು ಕೀಲು ನೋವು, ಸೊಂಟು ನೋವು ತೀವ್ರವಾದ ಜ್ವರದಿಂದ ಬಳಲುತ್ತಿದ್ದು, ನಿತ್ರಾಣಗೊಂಡಿದ್ದಾರೆ. ಸುದ್ದಿ ತಿಳಿದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ ಬೇನಾಳ ಆರ್.ಎಸ್. ಕೇಂದ್ರದ ಅನಾರೋಗ್ಯ ಪೀಡಿತರ ಕೆಲ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. 

ಸಂಬಂಧಿಸಿದ  ಗ್ರಾಪಂ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಯೊಂದಿಗೆ ಮಾತನಾಡಿ, ಫಾಗಿಂಗ್ ಹಾಗೂ ಇನ್ನಿತರ ಸೊಳ್ಳೆ ನಿಯಂತ್ರಣ ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳು ವುದಾಗಿ ತಿಳಿಸಿದರು. ಅಲ್ಲದೇ ಬೇನಾಳ ಆರ್‌ಎಸ್‌ನ ಪರಿಶಿಷ್ಟ ಜನಾಂಗದವರು ವಾಸಿಸುವ (ಹರಿಜನ ಕೇರಿಯಲ್ಲಿ )10 ಕ್ಕೂ ಅಧಿಕ ಜನರು ಈ ರೋಗದಿಂದ ಬಳಲುತ್ತಿದ್ದಾರೆ.

ಆಲಮಟ್ಟಿ ಸುತ್ತಮುತ್ತ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿದ್ದರೂ ಗ್ರಾ.ಪಂ. ಹಾಗೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇತ್ತೀಚೆಗಷ್ಟೇ ಆಲಮಟ್ಟಿ ಯಲ್ಲಿ ಡೆಂಗಿ ಜ್ವರಕ್ಕೆ ಒಬ್ಬ ಬಾಲಕ ಬಲಿಯಾದರೂ, ಸೊಳ್ಳೆ ನಿಯಂತ್ರಣ ಹಾಗೂ ಸ್ವಚ್ಛತೆಗೆ ಗ್ರಾಪಂ ಗಮನ ಹರಿಸಿಲ್ಲ ಎಂದು ಬಿ.ಎಚ್. ಗಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೇನಾಳ ಆರ್.ಎಸ್. ಕೇಂದ್ರದಲ್ಲಿ ಚಿಕುನ್ ಗುನ್ಯಾ,  ತೀವ್ರತರದ ಜ್ವರ ಮತ್ತು ಮಲೇರಿಯಾದಿಂದ ನಿಲೇಶ ಬೇನಾಳ, ತಿಮ್ಮಣ್ಣ ಚಲವಾದಿ, ರೇಣುಕಾ ಚಲವಾದಿ, ಶೇಖಪ್ಪ ಭಗವತಿ, ಶಿವಪ್ಪ ಚಲವಾದಿ, ಕನಕಲಕ್ಷ್ಮಿ ಚಲ ವಾದಿ, ಚಂದ್ರಪ್ಪ ಚಲವಾದಿ, ಇಂದ್ರವ್ವ ಚಲವಾದಿ, ಗ್ಯಾನಪ್ಪ ಚಲ ವಾದಿ, ಸೋಮವ್ವ ತಳವಾರ, ಬಾವಾಸಾಬ ತಳವಾರ, ಮುಚಖಂಡೆವ್ವ ತಳವಾರ ಹಾಗೂ ಗುಡದಿನ್ನಿ ಗ್ರಾಮದ 10 ಕ್ಕೂ ಅಧಿಕ ಜನರು ಸೇರಿದಂತೆ ಸುಮಾರು 30ಕ್ಕೂ ಅಧಿಕ ಜನ ಬಳಲುತ್ತಿದ್ದಾರೆ.

ಕೂಡಲೇ ಈ ಗಂಭೀರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಆಲ ಮಟ್ಟಿ ಗ್ರಾ.ಪಂನ ಅಧ್ಯಕ್ಷ ಹಾಗೂ ಸದಸ್ಯರು ಮತ್ತು ಪಿಡಿಓ ಸೇರಿ, ಆರೋಗ್ಯ ಇಲಾಖೆಯ ಸಹಭಾಗಿತ್ವ ದೊಂದಿಗೆ ಸೊಳ್ಳೆ ನಿಯಂತ್ರಣ ಹಾಗೂ ಸ್ವಚ್ಛತೆಗೆ ತುರ್ತು ಕ್ರಮ ಕೈಗೊಳ್ಳಲು ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಜನರು  ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.