ADVERTISEMENT

ಆಶ್ರಯ ಮನೆ ನೀಡದ ಸರ್ಕಾರ:ಟೀಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 10:10 IST
Last Updated 16 ಜೂನ್ 2011, 10:10 IST

ವಿಜಾಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಮೂರು ವರ್ಷವಾದರೂ ಆಶ್ರಯ ಯೋಜನೆಯಡಿ ಬಡವರಿಗೆ ಒಂದೇ ಒಂದು ಸೂರು ಒದಗಿಸಿಲ್ಲ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಆರೋಪಿಸಿದರು.

ತಾಲ್ಲೂಕಿನ ತಿಕೋಟಾ ಗ್ರಾಮದಲ್ಲಿ ಬುಧವಾರ ನಡೆದ ಬಬಲೇಶ್ವರ ವಿಧಾನಸಭಾ ಮತ ಕ್ಷೇತ್ರದ `ಕಾಂಗ್ರೆಸ್ ನಡಿಗೆ-ಜನರ ಬಳಿಗೆ~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಡವರಿಗೆ ಆಶ್ರಯ ಮನೆ ಒದಗಿಸದ ಬಿಜೆಪಿ ಸರ್ಕಾರ, ದಾನಿಗಳು ನೀಡಿದ ಆಸರೆ ಮನೆಗಳನ್ನು ಹಂಚುತ್ತ ಅದುವೇ ತನ್ನ ಸಾಧನೆ ಎಂದು ಬಿಂಬಿಸುತ್ತಿದೆ.
 
ಸುಳ್ಳು ಭರವಸೆ, ವ್ಯಾಪಕ ಪ್ರಚಾರ, ಅಗ್ಗದ ಗಿಮಿಕ್‌ಗಷ್ಟೇ ಸೀಮಿತವಾಗಿದೆ. ವಿರೋಧ ಪಕ್ಷಗಳ ಶಾಸಕರಿಂದ ರಾಜೀನಾಮೆ ಕೊಡಿಸಿದ್ದು, ಮಂತ್ರಿಮಂಡಳದ ಸದಸ್ಯರು ಸ್ಪರ್ಧೆಗಿಳಿದಂತೆ ರೈತರ ಭೂಮಿ ಸ್ವಾಧೀನ ಪಡೆಸಿಕೊಳ್ಳುತ್ತಿರುವುದು ಹಾಗೂ ಭ್ರಷ್ಟಾಚಾರ ಎಲ್ಲೆಡೆ ವ್ಯಾಪಿಸುವಂತೆ ಮಾಡಿದ್ದೇ ಈ ಸರ್ಕಾರದ ಸಾಧನೆಯಾಗಿದೆ ಎಂದು ದೂರಿದರು.
 
ಎರಡು ತಿಂಗಳ ಕಾಲ ಪ್ರತಿ ಗ್ರಾಮಗಳಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ನಡಿಗೆ-ಜನರ ಬಳಿಗೆ ಕಾರ್ಯಕ್ರಮದ ಮೂಲಕ ಪಕ್ಷದ ಬೆಳವಣಿಗೆಗೆ ಒತ್ತು ನೀಡುವುದರ ಜೊತೆಗೆ ಆತ್ಮಾವಲೋಕನ ಮಾಡಿಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.

ಪ್ರತಿ ಗ್ರಾಮಗಳಲ್ಲಿ ಬೂತ್ ಮಟ್ಟದ ಕಮಿಟಿ ರಚಿಸಬೇಕು. ಸರ್ಕಾರದ ವೈಫಲ್ಯಗಳ ಕುರಿತು ಕಾರ್ಯಕರ್ತರಿಗೆ ಮನದಟ್ಟು ಮಾಡಿ, ಅವರ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ಗ್ರಾಮಸ್ಥರಾದ ಮೊಹ್ಮದ್ ಅಲಿ ಮುಜಾವರ, ರಮೇಶ ಮಲಕನವರ, ಸಾತಲಿಂಗಯ್ಯ ಹಿರೇಮಠ, ಸಂಜಯ ಪರನಾಕರ, ಶಿವಪ್ಪ ಮಾಳಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಕೊಲ್ಹಾರ, ಗಣ್ಯರಾದ ಪಿ.ಸಿ. ಧಡೇಕರ, ಗಂಗಪ್ಪ ಕರಜಗಿ, ಲಕ್ಕಪ್ಪ ಮೆಟಗುಡ್ಡ, ಧರೆಪ್ಪ ಗುಲಗಂಜಿ, ಸಾಬು ನರಸಿ, ಬಿ.ಬಿ. ಪಾಟೀಲ, ಎಂ.ಎಸ್. ಜತ್ತಿ, ನಾರಾಯಣ ಪರಮಾಜ, ಅಪ್ಪಣ್ಣ ಬೀಳೂರ, ಬಸಗೊಂಡ ಗುರಕಿ, ತಿಪ್ಪಣ್ಣ ಚೌಧರಿ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.