ADVERTISEMENT

ಒಬ್ಬರಿಗೆ ನಿತ್ಯ ಕೇವಲ 6 ಲೀಟರ್ ನೀರು!

​ಪ್ರಜಾವಾಣಿ ವಾರ್ತೆ
Published 4 ಮೇ 2012, 8:50 IST
Last Updated 4 ಮೇ 2012, 8:50 IST
ಒಬ್ಬರಿಗೆ ನಿತ್ಯ ಕೇವಲ 6 ಲೀಟರ್ ನೀರು!
ಒಬ್ಬರಿಗೆ ನಿತ್ಯ ಕೇವಲ 6 ಲೀಟರ್ ನೀರು!   

ವಿಜಾಪುರ: ಬೇಸಿಗೆಯ ಪ್ರಖರತೆ ಹೆಚ್ಚಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗುತ್ತಿದೆ. ಜಿಲ್ಲೆಯ 91 ಗ್ರಾಮಗಳ 145 ಜನವಸತಿಗಳಿಗೆ ಸರ್ಕಾರ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ.

ಟ್ಯಾಂಕರ್ ಮೂಲಕ ಗ್ರಾಮೀಣ ಪ್ರದೇಶದ ಜನತೆಗೆ ಪೂರೈಸುತ್ತಿರುವ ನೀರಿನ ಪ್ರಮಾಣ  ಒಬ್ಬರಿಗೆ ದಿನಕ್ಕೆ ಕೇವಲ 6 ಲೀಟರ್ ನೀರು ಮಾತ್ರ!ಅಚ್ಚರಿಯಾದರೂ ಇದು ಸತ್ಯ. `ಜಿಲ್ಲೆಯಲ್ಲಿ 660 ಗ್ರಾಮಗಳಿವೆ. ಆ ಪೈಕಿ 91 ಗ್ರಾಮಗಳ 145 ಜನ ವಸತಿಗಳ 4,10,331 ಜನರಿಗೆ 232 ಟ್ಯಾಂಕರ್ ಬಳಸಿ 541 ಟ್ರಿಪ್ ನೀರು ಪೂರೈಸಲಾಗುತ್ತಿದೆ~ ಎಂಬುದು ಜಿಲ್ಲಾ ಆಡಳಿತದ ಮಾಹಿತಿ.

`ಗ್ರಾಮೀಣ ಪ್ರದೇಶಕ್ಕೆ ನೀರು ಪೂರೈಸಲು ಹೆಚ್ಚಾಗಿ ಟ್ರ್ಯಾಕ್ಟರ್ ಚಾಲಿತ ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದೆ. ಒಂದು ಟ್ಯಾಂಕರ್‌ನ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 4,000 ರಿಂದ 5,000 ಲೀಟರ್ ಮಾತ್ರ~ ಎನ್ನುತ್ತಾರೆ ಟ್ಯಾಂಕರ್‌ಗಳ ತಯಾರಕ ಗಂಗಾಧರ.

`ಜಿಲ್ಲಾ ಆಡಳಿತದ ಲೆಕ್ಕ ಬಹಳ ವಿಚಿತ್ರವಾಗಿದೆ. ಒಂದು ಟ್ಯಾಂಕರ್‌ನಲ್ಲಿ ಸರಾಸರಿ 4,500 ಲೀಟರ್‌ನಂತೆ  ನಿತ್ಯ 541 ಟ್ರಿಪ್ ನೀರು ಕೊಟ್ಟರೆ ಪೂರೈಕೆಯಾಗುವ ನೀರು 24.35 ಲಕ್ಷ ಲೀಟರ್. ಈ ನೀರನ್ನು 4.10 ಲಕ್ಷ ಜನಸಂಖ್ಯೆಗೆ ಕೊಟ್ಟರೆ ಪ್ರತಿಯೊಬ್ಬರಿಗೆ ದೊರೆಯುತ್ತಿರುವುದು ನಿತ್ಯ ಅಂದಾಜು 6 ಲೀಟರ್‌ನಷ್ಟು ನೀರು ಮಾತ್ರ~ ಎಂದು ಗ್ರಾಮೀಣ ಪ್ರದೇಶದ ಜನತೆ ಲೆಕ್ಕಹಾಕಿ ಹೇಳುತ್ತಾರೆ.

`ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ನಗರ-ಪಟ್ಟಣ ಪ್ರದೇಶಗಳ ಜನರಿಗೆ ನಿತ್ಯ ತಲಾ 135 ಲೀಟರ್ ಹಾಗೂ ಗ್ರಾಮೀಣ ಪ್ರದೇಶದ  ಒಬ್ಬರಿಗೆ ನಿತ್ಯ 55ರಿಂದ 70 ಲೀಟರ್ ನೀರು ಪೂರೈಸಬೇಕು. ಆದರೆ ತುಪ್ಪ ಬಳಸಿದ ಹಾಗೆ ನೀರು ಬಳಸುವ ಪರಿಸ್ಥಿತಿ ಬಂದಿದೆ. ಟ್ಯಾಂಕರ್ ಮೂಲಕ ಪೂರೈಕೆಯಾಗುವ ನೀರು ಏತಕ್ಕೂ ಸಾಲದು~ ಎನ್ನುತ್ತಾರೆ ಇಂಡಿ ತಾಲ್ಲೂಕು ರೂಗಿ ಗ್ರಾಮದ ನಿಂಗವ್ವ, ಬಾಳವ್ವ, ರತ್ನಾಬಾಯಿ ಮತ್ತಿತರರು.

`ನಮ್ಮ ಪ್ರದೇಶಕ್ಕೆ ನಾಲ್ಕು ದಿನಕ್ಕೊಮ್ಮೆ ಟ್ಯಾಂಕರ್ ದರ್ಶನವಾಗುತ್ತದೆ. ಟ್ಯಾಂಕರ್ ನೀರು ಪಡೆಯಲು ನಿತ್ಯ ಜಗಳ ಸಾಮಾನ್ಯ. ನಮ್ಮ ಪ್ಲಾಸ್ಟಿಕ್ ಕೊಡಗಳು ಬಿಸಿಲಿಗೆ ಸುಟ್ಟು ಹೋಗಿವೆ. ದಿನನಿತ್ಯದ ಕಾರ್ಯಗಳನ್ನೆಲ್ಲ ಬಿಟ್ಟು ನೀರಿಗಾಗಿ ಕಾಯುತ್ತ ಕೂಡಬೇಕಾಗಿದೆ~ ಎಂಬುದು ಸಿಂದಗಿ ತಾಲ್ಲೂಕು ಕೆರೂಟಗಿಯ ತಾಯವ್ವ, ಮಹಾದೇವಿ, ತಾರವ್ವ ಅವರ ಅಳಲು.

`ನಮ್ಮಲ್ಲಿ ನೀರಿನ ಸಮಸ್ಯೆ ವಿಪರೀತ. ಒಂದು ಕೊಡ ಕುಡಿಯುವ ಸಿಹಿ ನೀರಿಗೆ 5 ರೂಪಾಯಿ. ಬಳಕೆ ಮಾಡುವ ಒಂದು ಕೊಡ ಸವಳು ನೀರಿಗೆ ಎರಡು ರೂಪಾಯಿ ಕೊಟ್ಟು ಖಾಸಗಿಯವರಿಂದ ಖರೀದಿಸುತ್ತಿದ್ದೇವೆ~  ಎನ್ನುತ್ತಾರೆ ದೇವರ ಹಿಪ್ಪರಗಿಯ ಲಕ್ಷ್ಮಿಬಾಯಿ.

ತೋಟದ ಕೊಳವೆ ಬಾವಿಗಳಿಂದ, ಗ್ರಾಮದಲ್ಲಿರುವ ಕೈಪಂಪುಗಳಿಂದ ಪ್ರಯಾಸ ಪಟ್ಟು ನೀರು ತರುವ ದೃಶ್ಯ ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಸಾಮಾನ್ಯವಾಗಿದೆ.`ಟ್ಯಾಂಕರ್ ಮೂಲಕ ಪೂರೈಸುವ ನೀರು ಹೆಚ್ಚುವರಿ ಮಾತ್ರ. ಆ ಗ್ರಾಮಸ್ಥರು ಟ್ಯಾಂಕರ್ ನೀರಿನ ಮೇಲೆಯೇ ಅವಲಂಬಿತರಾಗಿರುವುದಿಲ್ಲ. ಪರ್ಯಾಯ ಮೂಲಗಳಿಂದಲೂ ಅವರು ನೀರು ಪಡೆಯುತ್ತಾರೆ~ ಎಂಬುದು ಅಧಿಕಾರಿಗಳ ಸಮರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.