ADVERTISEMENT

ಕಣ್ಮನ ಸೆಳೆದ ಸಖಿ ಪಿಂಕ್‌ ಬೂತ್‌..!

ಮಧುವಣಗಿತ್ತಿಯಂತೆ ಸಿಂಗಾರ

​ಪ್ರಜಾವಾಣಿ ವಾರ್ತೆ
Published 13 ಮೇ 2018, 8:50 IST
Last Updated 13 ಮೇ 2018, 8:50 IST
ವಿಜಯಪುರ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿನ ಪಿಂಕ್‌ ಮತಗಟ್ಟೆಯಲ್ಲಿನ ಚಿತ್ರಣ
ವಿಜಯಪುರ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿನ ಪಿಂಕ್‌ ಮತಗಟ್ಟೆಯಲ್ಲಿನ ಚಿತ್ರಣ   

ವಿಜಯಪುರ: ಮಹಿಳಾ ಮತದಾರರ ಜಾಗೃತಿಗಾಗಿ, ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ ಗುಲಾಬಿ ವರ್ಣದ ಸಖಿ ಪಿಂಕ್‌ ಬೂತ್‌ಗಳು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಕಂಗೊಳಿಸಿದವು.

ಮತದಾರರನ್ನು ಆಕರ್ಷಿಸಲಿಕ್ಕಾಗಿಯೇ ಮತಗಟ್ಟೆಗಳನ್ನು ಗುಲಾಬಿ ಬಣ್ಣದಿಂದ ಸಿಂಗರಿಸಲಾಗಿತ್ತು. ಇಡೀ ಕೊಠಡಿಯೇ ಗುಲಾಬಿಮಯ ವರ್ಣ. ಹೊರ ಭಾಗದಲ್ಲೂ ಕಣ್ಣು ಕುಕ್ಕುವಂತೆ ಪಿಂಕ್‌ ಗೋಚರಿಸಿತು. ಬಣ್ಣದ ಬಲೂನುಗಳು ಸಹ ಪಿಂಕ್‌ ಬಣ್ಣದ್ದಾಗಿದ್ದವು.

ಸಖಿ ಪಿಂಕ್‌ ಬೂತ್‌ಗಳ ಒಳಗೆ ಎಲ್ಲೆಂದರಲ್ಲಿ ಜೋತು ಬಿಟ್ಟಿದ್ದ ಬಲೂನ್‌ಗಳು, ಪರಪರಿ, ಸಿಬ್ಬಂದಿಯ ಉಡುಗೆ, ನಾಮಫಲಕ, ಬ್ಯಾನರ್‌, ಮತಯಂತ್ರದ ಸ್ಟ್ಯಾಂಡ್‌, ಸಿಬ್ಬಂದಿ ಕೆಲಸಕ್ಕೆ ಬಳಸಿದ ಕುರ್ಚಿ, ಟೇಬಲ್‌ಗಳ ಮೇಲೆ ಹಾಸಿದ್ದ ಬಟ್ಟೆಯೂ ಪಿಂಕ್‌ ಬಣ್ಣದಾಗಿದ್ದು ಮಿಂಚುತ್ತಿತ್ತು. ಎತ್ತ ದೃಷ್ಟಿ ಹಾಯಿಸಿದರೂ ಪಿಂಕ್‌ ರಾರಾಜಿಸಿತ್ತು.

ADVERTISEMENT

ಬೋರ್ಡ್‌, ಬ್ಯಾನರ್‌ಗಳಲ್ಲಿ ಮಹಿಳೆಯ ಚಿತ್ರ ಬಿಡಿಸಿ ‘ಮತಗಟ್ಟೆಗೆ ಬನ್ನಿ, ನಿಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ಗೆಲ್ಲಿಸಿ, ಶೇ 100ರಷ್ಟು ಮತದಾನ, ಇದುವೇ ನಮ್ಮ ವಾಗ್ದಾನ. ನೈತಿಕ ಚುನಾವಣೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಪ್ರತಿ ಮಹಿಳಾ ಮತದಾರರು ಮತದಾನ ಮಾಡಿದರೆ ಪ್ರಜಾಪ್ರಭುತ್ವ ಗೆದ್ದಂತೆ...’ ಹೀಗೆ ಹತ್ತು ಹಲ ಬಗೆಯ ಸ್ಲೋಗನ್‌ಗಳು ಗೋಚರಿಸಿದವು.

‘ಮಹಿಳಾ ಮತದಾರರ ಜಾಗೃತಿಗಾಗಿ ಸಖಿ ಪಿಂಕ್‌ ಬೂತ್‌ ತೆರೆದಿರುವುದು ಒಳ್ಳೆಯ ಬೆಳವಣಿಗೆ. ಮತಗಟ್ಟೆಯಲ್ಲಿನ ಚುನಾವಣಾ ಸಲಕರಣೆಗಳು ಸೇರಿದಂತೆ ಸಿಂಗಾರಕ್ಕೆ ಬಳಸಿರುವ ಬಲೂನ್‌, ಪರಿಪರಿ, ಸಿಬ್ಬಂದಿ ಬಟ್ಟೆಗಳೆಲ್ಲ ಪಿಂಕ್‌ ಬಣ್ಣದಿಂದ ಕೂಡಿವೆ. ಇದರಿಂದ ಜನರಿಗೆ ಚುನಾವಣೆ ಬದಲೂ ಸಮಾರಂಭ ನಡೆಯುತ್ತಿದೆಯೇ ಎಂಬಷ್ಟು ಫೀಲ್‌ ಆಗುತ್ತಿದೆ’ ಎಂದು ನಗರದ ಪ್ರೇಮಾ ಬಿರಾದಾರ ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.