ADVERTISEMENT

ಕನ್ನಡಕ್ಕಾಗಿ ನಿರಂತರ ಹೋರಾಟ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 5:10 IST
Last Updated 21 ಏಪ್ರಿಲ್ 2012, 5:10 IST

ಸಿಂದಗಿ: ಎಲ್ಲೆಲ್ಲಿ ಕನ್ನಡಿಗರಿಗೆ ಅವಮಾನವಾಗುತ್ತದೆಯೇ ಅಲ್ಲಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತ್ಯಕ್ಷರಾಗಿ ಹೋರಾಟ ನಡೆಸುತ್ತಾರೆ. ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ಹೋರಾಟ ನಡೆಸಲು ಕರವೇ ಕಾರ್ಯಕರ್ತರು ಸದಾ ಸಿದ್ಧ. ನಾಡಿನಲ್ಲೆಲ್ಲ ಕನ್ನಡ ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬ ಕನ್ನಡಿಗ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಆಶ್ರಯದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ 2ನೇ ಸ್ವಾಭಿಮಾನಿ ಕನ್ನಡಿಗರ ಜಾಗೃತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದೇ ಪದೇ ಕಾಲು ಕೆದರಿ ಜಗಳಕ್ಕೆ ಮುಂದಾಗುತ್ತಿರುವ ಶಿವಸೇನೆ ಬಾಳ ಠಾಕ್ರೆ ಹಾಗೂ ಎಂಇಎಸ್ ಕಾರ್ಯಕರ್ತರ ದುರಭಿಮಾನ ಹೇಳಿಕೆಗಳು ಕನ್ನಡಗರ ಸ್ವಾಭಿಮಾನವನ್ನು ಕೆರಳುಸುತ್ತಿದೆ. ಕನ್ನಡಿಗರ ಆಕ್ರೋಶ ತಾರಕಕ್ಕೇರಿದರೆ ಅವರ ಅಳಿವು ಶತಸಿದ್ದ ಎಂದು ನಾರಾಯಣಗೌಡ ಎಚ್ಚರಿಕೆ ಗಂಟೆ ಬಾರಿಸಿದರು.
ಕನ್ನಡ ನೆಲದಲ್ಲಿ ಕನ್ನಡವೇ ಅಗ್ರ. ಇಲ್ಲಿ ಕನ್ನಡಿಗನೇ ಪ್ರಭು ಎಂದು ತಿಳಿಸಿದರು.

ಸಮಾವೇಶದ ರೂವಾರಿ ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾವೇಶಕ್ಕೆ ರಾಜಕೀಯ ಹಿನ್ನಲೆ ಇದೆ ಎಂಬ ವದಂತಿ ಅತ್ಯಂತ ದುರದೃಷ್ಟಕರ ಸಂಗತಿ. ಕನ್ನಡ ಮಾತೆ ಭುವನೇಶ್ವರಿ ಧ್ವಜ ಎಲ್ಲೆಡೆ ಕಂಗೊಳಿಸಬೇಕು. ಕರ್ನಾಟಕ-ಕನ್ನಡ-ಕನ್ನಡಿಗ ಮಂತ್ರವಾಗಬೇಕು ಎಂಬುದಷ್ಟೇ ಆಶಯ ಎಂದರು.

ಹರಿಹರದ ಪಂಚಮಸಾಲಿ ಪೀಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಂ.ಸಿ. ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಹೈಕೋರ್ಟ್ ವಕೀಲ ಎನ್.ಎಸ್. ಹಿರೇಮಠ, ಕರವೇ ಜಿಲ್ಲಾ ಘಟಕ ಅಧ್ಯಕ್ಷ ಶೇಷರಾವ ಮಾನೆ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರೇಷ್ಮಾ ಪಡೇಕನೂರ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಗುರನಗೌಡ ಪಾಟೀಲ ನಾಗಾವಿ, ಎಂ.ಎನ್. ಕಿರಣರಾಜ್, ರಾಜಶೇಖರ ಕೂಚಬಾಳ, ಯಶವಂತರಾಯಗೌಡ ರೂಗಿ, ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ, ಪ್ರಕಾಶ ದಸ್ಮಾ, ಸಿದ್ದಣ್ಣ ಚೌಧರಿ, ವೆಂಕಟೇಶ ಗುತ್ತೇದಾರ, ಯು.ಐ. ಶೇಖ ಉಪಸ್ಥಿತರಿದ್ದರು.

ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಸಮಾವೇಶದ ನೇತೃತ್ವ ವಹಿಸಿದ್ದರು. ಶಿವಾಜಿ ಮೆಟಗಾರ ಸ್ವಾಗತಿಸಿದರು. ಸಿದ್ದು ಬುಳ್ಳಾ ನಿರೂಪಿಸಿದರು. ತನ್ವೀರ್ ಭೈರಾಮಡಗಿ ವಂದಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.