ADVERTISEMENT

‘ಕಬ್ಬಲಿಗರು ಲಿಂಗಾಯತರಲ್ಲ’

ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಯುವ ವೇದಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 8:37 IST
Last Updated 7 ಡಿಸೆಂಬರ್ 2017, 8:37 IST

ಸಿಂದಗಿ: ‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಇದೇ 10 ರಂದು ವಿಜಯಪುರದಲ್ಲಿ ನಡೆಸುತ್ತಿರುವ ರ‍್ಯಾಲಿಯ ಕರಪತ್ರದಲ್ಲಿ ಲಿಂಗಾಯತ ಕಬ್ಬಲಿಗರು ಲಿಂಗಾಯತ ಧರ್ಮದ ಒಳಪಂಗಡ ಎಂದು ಬಳಕೆ ಮಾಡಿಕೊಂಡಿರುವುದು ಆಕ್ಷೇಪಾರ್ಹ ಕಾರ್ಯ’ ಎಂದು ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಯುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಶಿವಾಜಿ ಮೆಟಗಾರ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ಕಬ್ಬಲಿಗ, ಕೋಲಿ, ಗಂಗಾಮತ ಒಳಗೊಂಡು 39 ಪರ್ಯಾಯ ಪದದ ದೊಡ್ಡ ಸಮುದಾಯ ನಮ್ಮದಾಗಿದೆ. ಸಮುದಾಯಕ್ಕೆ ನಮ್ಮದೇ ಆದ ಗುರುಗಳು ಇದ್ದಾರೆ. ಜನಪ್ರತಿನಿಧಿಗಳು, ಮುಖಂಡರು ಇದ್ದಾರೆ. ಅವರ ಜೊತೆ ಚರ್ಚಿಸದೇ ಲಿಂಗಾಯತ ಧರ್ಮದಲ್ಲಿ ಕಬ್ಬಲಿಗ ಸಮುದಾಯ ಒಳಗೊಂಡಿದೆ ಎಂದು ಹೇಳುವುದು ಸಮಂಜಸವೇ’ ಎಂದು ಶಿವಾಜಿ ಪ್ರಶ್ನಿಸಿದ್ದಾರೆ.

‘ಕಬ್ಬಲಿಗ ಸಮುದಾಯ ತನ್ನದೇ ಆದ ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಮಹಾಭಾರತ ರಚಿಸಿದ ವೇದವ್ಯಾಸರು ಇದೇ ಸಮುದಾಯದವರು. ಈ ದೇಶಕ್ಕೆ ಕಬ್ಬಲಿಗರು ಪೂರ್ವಜರಾಗಿ ಅಪಾರ ಕೊಡುಗೆ ನೀಡಿದ್ದಾರೆ. ಆದಾಗ್ಯೂ ಈ ವರೆಗೂ ನಮ್ಮನ್ನು ಅಸ್ಪೃಶ್ಯರಂತೆ ನಡೆಸಿಕೊಂಡಿರುವುದು ದುರದೃಷ್ಟಕರ ಸಂಗತಿ’ ಎಂದು ವಿಷಾದಿಸಿದ್ದಾರೆ.

ADVERTISEMENT

‘12ನೇ ಶತಮಾನದಲ್ಲಿ ಬಸವಣ್ಣನವರ ಒಡನಾಡಿಯಾದ ನಿಜ ಶರಣ ಅಂಬಿಗರ ಚೌಡಯ್ಯನವರು ಮೌಢ್ಯ ಮತ್ತು ಸಮಾಜದಲ್ಲಿನ ಅಜ್ಞಾನ, ಅಂಧಕಾರದ ವಿರುದ್ಧ ಧ್ವನಿ ಎತ್ತಿದವರು. ಅಲ್ಲಿಂದ ಇಲ್ಲಿಯವರೆಗೆ ಕಬ್ಬಲಿಗ ಸಮುದಾಯ ಲಿಂಗಾಯತರ ಜೊತೆಗೆ ಇದ್ದೇವೆ. ಆದರೆ ನಮಗೆ ನೀವು ಸಮಾನತೆಯಿಂದ ಕಂಡಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.

ಕ್ರಿಶ್ಚಿಯನ್, ಮುಸ್ಲಿಂ ಧರ್ಮದಲ್ಲಿ ಹೇಗೆ ಸಮಾನತೆ ಇದೆ. ಹಾಗೇ ಲಿಂಗಾಯತ ಧರ್ಮದಲ್ಲಿ ನಮಗೆ ಸಮಾನತೆ ನೀಡಿದ್ದೀರಾ? . ಬೇಕಾದಾಗ ಬಳಸಿಕೊಂಡು ಬೇಡವಾದಾಗ ತೆಗೆದು ಹಾಕಲು ಇದೇನು ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯೇ’ ಎಂದು ಸಚಿವ ಎಂ.ಬಿ.ಪಾಟೀಲರಿಗೆ ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

‘ಲಿಂಗಾಯತ ಧರ್ಮ ಸ್ಥಾಪನೆಗೆ ಮುಂದಾದ ರೂವಾರಿಗಳಿಂದಲೇ ಜಿಲ್ಲೆಯಲ್ಲಿ ಕಬ್ಬಲಿಗ ಸಮುದಾಯಕ್ಕೆ ರಾಜಕೀಯವಾಗಿ ಭಾರಿ ಅನ್ಯಾಯವಾಗಿದೆ’ ಎಂದೂ ಆರೋಪಿಸಿದ್ದಾರೆ.

‘ಯಾರೂ ಬೇಕಾದರೂ ಯಾವ ಧರ್ಮವನ್ನಾದರೂ ಸ್ವೀಕರಿಸಬಹುದು. ಆದರೆ ಹೇಳದೇ ಕೇಳದೇ ಕಬ್ಬಲಿಗ ಸಮುದಾಯವನ್ನು ನಿಮ್ಮ ಜೊತೆ ತಳಕು ಹಾಕಿಕೊಂಡಿದ್ದು ನಿಜಕ್ಕೂ ಅಸಾಂವಿಧಾನಿಕ. ಲಿಂಗಾಯತ ಧರ್ಮ ದಲ್ಲಿನ ಒಳಪಂಗಡದಲ್ಲಿ ಕಬ್ಬಲಿಗ ಪದವನ್ನು ತೆಗೆದು ಹಾಕದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಕೋಲಿ, ಕಬ್ಬಲಿಗ ಸಮುದಾಯ ವನ್ನು ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆ ಮಾಡುವಂತೆ ತೀವ್ರ ಹೋರಾಟ ನಡೆಸಿರುವ ಹಿನ್ನೆಲೆಯಲ್ಲಿ ಹೋರಾಟವನ್ನು ಅಶಕ್ತಗೊಳಿಸುವ ಹುನ್ನಾರ ಇದಾಗಿದೆ’ ಎಂದು ಶಿವಾಜಿ ಮೆಟಗಾರ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.