ADVERTISEMENT

ಕಬ್ಬಿಗೆ ಸೂಕ್ತ ಬೆಲೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 9:51 IST
Last Updated 11 ಅಕ್ಟೋಬರ್ 2017, 9:51 IST

ವಿಜಯಪುರ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ದುದ್ದಗಿ ಮಾತನಾಡಿ ‘ಜಿಲ್ಲೆಯಲ್ಲಿ ವಾಣಿಜ್ಯ ಬೆಳೆ ಕಬ್ಬನ್ನು ಈ ವರ್ಷ ರೈತರು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದ್ದಾರೆ. ಆದರೆ ವೈಜ್ಞಾನಿಕ ಬೆಲೆ ನಿಗದಿ ಪಡಿಸದೆ ಸರ್ಕಾರ ಕಾಲಹರಣ ಮಾಡುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಐದು ವರ್ಷಗಳಿಂದ ರೈತರು ಬೆಳೆದ ಕಬ್ಬಿಗೆ ಸೂಕ್ತವಾದ ಬೆಲೆ ನೀಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಗಗನಕ್ಕೇರಿದೆ. ಪ್ರತಿ ಕ್ವಿಂಟಲ್ ಸಕ್ಕರೆಗೆ ₹ 4200 ದರವಿದೆ. 2017–18ನೇ ಸಾಲಿನ ಕಬ್ಬಿಗೆ ಸರ್ಕಾರ ಒಂದು ಟನ್‌ಗೆ ಕನಿಷ್ಠ ₹ 3500 ನಿಗದಿ ಪಡಿಸಬೇಕು’ ಎಂದು ಇದೇ ಸಂದರ್ಭ ಒತ್ತಾಯಿಸಿದರು.

ADVERTISEMENT

‘2015–16ನೇ ಸಾಲಿನ ಬಾಕಿ ಉಳಿದ ಪ್ರತಿಯೊಂದು ಟನ್ ಕಬ್ಬಿಗೆ ಇನ್ನೂ ₹ 100 ನೀಡಬೇಕು. ಇನ್ನೂ ಕೆಲ ಸಕ್ಕರೆ ಕಾರ್ಖಾನೆಗಳು ಬಾಕಿ ಹಣ ನೀಡಿಲ್ಲ. 2016–17ನೇ ಸಾಲಿನಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ 1 ಟನ್ ಕಬ್ಬಿಗೆ ₹ 3025 ನೀಡಿದ್ದು, ಇದೇ ಮಾದರಿಯಲ್ಲಿ ಜಿಲ್ಲೆಯ ಉಳಿದ ಸಕ್ಕರೆ ಕಾರ್ಖಾನೆಗಳು ನೀಡಬೇಕು’ ಎಂದು ಒತ್ತಾಯಿಸಿದರು.

ಗುಜರಾತ್‌ನಲ್ಲಿ 2017–18ನೇ ಸಾಲಿನಲ್ಲಿ ಒಂದು ಟನ್‌ ಕಬ್ಬಿಗೆ ₹ 4000 ಬೆಲೆ ನಿಗದಿಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ 1ಟನ್ ಕಬ್ಬಿಗೆ ₹ 2750 ನೀಡಿದ್ದಾರೆ. ಅದರಂತೆ ರಾಜ್ಯದಲ್ಲೂ 1ಟನ್ ಕಬ್ಬಿಗೆ ₹ 3500 ಬೆಲೆ ನಿಗದಿ ಪಡಿಸಬೇಕು. ಒಂದು ವೇಳೆ ಕಬ್ಬಿಗೆ ಈ ದರ ನಿಗದಿ ಪಡಿಸದಿದ್ದಲ್ಲಿ ಜಿಲ್ಲೆಯ ಯಾವ ಕಾರ್ಖಾನೆಗೂ ಕಬ್ಬನ್ನು ನುರಿಸು ವುದಕ್ಕೆ ಬಿಡುವುದಿಲ್ಲ’ ಎಂದು ಇದೇ ಸಂದರ್ಭ ಎಚ್ಚರಿಸಿದರು.

ಬಾಬು ಕೊತ್ತಂಬರಿ, ಬಸನಗೌಡ ಧರ್ಮಗೊಂಡ, ಕಾಶಿಂಸಾಬ್ ಸಾಲೋಟಗಿ, ರಾಮಣ್ಣ ಗೌಂಡಿ, ರೇವಣಸಿದ್ದ ಬಿರಾದಾರ, ಸೋಮಶೇಖರ ನಂದಿ, ಯಲ್ಲಾಲಿಂಗ ಉಳ್ಳಿ, ಮನೋಹರ ತಳಕೇರಿ, ಗೋವಿಂದ ವಡ್ಡರ, ಕಾಶೀನಾಥ ಸಿಂಧನೂರ, ಅಶೋಕ ಕಿಣಗಿ, ಬಾಬುಗೌಡ ಬಿರಾದಾರ, ಶ್ರೀಶೈಲ ಕಂಟೇಕೂರ, ತುಕಾರಾಮ ನಲವಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.