ADVERTISEMENT

ಕಳೆಗುಂದುತ್ತಿರುವ ‘ಗೋಳಗುಮ್ಮಟ’ ಉದ್ಯಾನ

ವಿಜಯಪುರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ; ಮೂಲಸೌಕರ್ಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 11:25 IST
Last Updated 26 ಅಕ್ಟೋಬರ್ 2017, 11:25 IST
ಕಳೆಗುಂದುತ್ತಿರುವ ‘ಗೋಳಗುಮ್ಮಟ’ ಉದ್ಯಾನ
ಕಳೆಗುಂದುತ್ತಿರುವ ‘ಗೋಳಗುಮ್ಮಟ’ ಉದ್ಯಾನ   

ವಿಜಯಪುರ: ಇದೀಗ ಪ್ರವಾಸೋದ್ಯಮದ ಸಮಯ. ಫೆಬ್ರುವರಿ ತನಕವೂ ಲಕ್ಷ, ಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರು ನಗರದ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ತಂಡೋಪ ತಂಡವಾಗಿ ಭೇಟಿ ನೀಡುತ್ತಾರೆ.

61 ಎಕರೆ ವಿಸ್ತಾರದ ಪ್ರದೇಶದಲ್ಲಿ ಗೋಳಗುಮ್ಮಟ, ಮ್ಯೂಸಿಯಂ ಸೇರಿದಂತೆ 12 ಪ್ರಮುಖ ಉದ್ಯಾನಗಳು ಇಲ್ಲಿನ ವಿಶೇಷ ಆಕರ್ಷಣೆ. ಗೋಳ ಗುಮ್ಮಟ ಹತ್ತಿಳಿಯುವ ಅಪಾರ ಸಂಖ್ಯೆಯ ಪ್ರವಾಸಿಗರು ಇಲ್ಲಿನ ಉದ್ಯಾನಗಳಲ್ಲಿ ವಿಶ್ರಮಿಸಿಕೊಳ್ಳುವುದು ವಾಡಿಕೆ. ಇದರ ಜತೆಗೆ ಉದ್ಯಾನದ ಹಸಿರನ್ನು, ಆಗಾಗ್ಗೆ ಗೋಚರಿಸುವ ‘ಮಯೂರ’ ನರ್ತನವನ್ನು ಕಣ್ತುಂಬಿಕೊಳ್ಳುತ್ತಾರೆ.

ಆದರೆ ಈಚೆಗಿನ ವರ್ಷಗಳಲ್ಲಿ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ನಿರ್ವಹಣೆ ನಡೆಸದಿರುವುದರಿಂದ ಉದ್ಯಾನಗಳು ಆಕರ್ಷಣೆ ಕಳೆದುಕೊಳ್ಳಲಾರಂಭಿಸಿವೆ.

ADVERTISEMENT

ಇದರ ಜತೆಗೆ ಐತಿಹಾಸಿಕ ಸ್ಮಾರಕದ ವೈಭವವನ್ನು ಕಳೆಗುಂದಿಸುತ್ತಿವೆ. ಗೋಳಗುಮ್ಮಟದ ಸುತ್ತಲೂ ಇರುವ ನಾಲ್ಕು ಉದ್ಯಾನದ ನಿರ್ವಹಣೆಯೂ ಸಹ ಸಮರ್ಪಕವಾಗಿ ನಡೆಯುತ್ತಿಲ್ಲ. ಪಾರ್ಥೇನಿಯಂ ಕಸ ಮೊಳಕಾಲುದ್ದ ಬೆಳೆದಿದೆ. ಕೆಲವೆಡೆ ಹುಲ್ಲು ಬೆಳೆದಿದೆ. ಒಟ್ಟಾರೆ ಉದ್ಯಾನ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಹೆಸರು ಬಹಿರಂಗ ಪಡಿಸಲಿಚ್ಚಿಸದ ಮಾರ್ಗದರ್ಶಿಯೊಬ್ಬರು ತಿಳಿಸಿದರು.

‘ಮ್ಯೂಸಿಯಂ ಮುಂಭಾಗದ ಉದ್ಯಾನದಲ್ಲೇ ಪ್ರವಾಸಿಗರಿಗೆ ಊಟ–ಉಪಾಹಾರ ಮಾಡಲು ಅವಕಾಶ ನೀಡಲಾಗಿದೆ. ಪಿಕ್‌ನಿಕ್‌ ಸ್ಪಾಟ್‌ ಅಭಿವೃದ್ಧಿಪಡಿಸಿ ಅಲ್ಲಿಯೇ ಅವಕಾಶ ನೀಡಿ ಎಂಬ ಸ್ಥಳೀಯರ ಕೂಗು ಅರಣ್ಯ ರೋದನವಾಗಿದೆ.

ಇದರ ಪರಿಣಾಮ ಉದ್ಯಾನಗಳು ಹೊಲಸು ತುಂಬಿಕೊಂಡಿರುತ್ತವೆ. ಸಂಬಂಧಿಸಿದ ವಿಭಾಗದ ಸಿಬ್ಬಂದಿ ಸ್ವಚ್ಛತೆಗೆ ಮುಂದಾಗದಿರುವುದು ಸ್ಮಾರಕದ ಅಂದವನ್ನೇ ಕಳೆಗುಂದಿಸಿದೆ. ಬಹುತೇಕ ಪ್ರವಾಸಿಗರು ಅನೈರ್ಮಲ್ಯ ತಾಂಡವವಾಡುತ್ತಿರುವುದಕ್ಕೆ ನಮ್ಮ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ’ ಎಂದು ಅವರು ಹೇಳಿದರು.

‘ಗೋಳಗುಮ್ಮಟ ಕಣ್ತುಂಬಿ ಕೊಳ್ಳುತ್ತಿದ್ದಂತೆ ಮನಸ್ಸು ಆನಂದಮಯ ವಾಗುತ್ತದೆ. ಆದರೆ ಉದ್ಯಾನದತ್ತ ಕಣ್ಣು ಹೊರಳಿ ಸುತ್ತಿದ್ದಂತೆ ಅಸಹ್ಯ ಭಾವನೆ ಮೂಡುತ್ತದೆ ಎಂದು ಪ್ರವಾಸಿ ಆನಂದ ಕಿತ್ತೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆವರಣದಲ್ಲಿ ಭದ್ರತಾ ಸಿಬ್ಬಂದಿ ಎತ್ತ ನೋಡಿದರೂ ಕಂಡು ಬರುತ್ತಾರೆ. ಹತ್ತು ಮಾರಿಗೊಂದು ಕಸದ ಬುಟ್ಟಿಯಿದೆ. ಜನರು ಜಾಗೃತರಾಗಿ ಕಸದ ಬುಟ್ಟಿಗೆ ತ್ಯಾಜ್ಯ ಹಾಕಬೇಕು. ಈ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿ ಸೂಚಿಸಬೇಕು. ಆದರೆ ಸಿಬ್ಬಂದಿಗೆ ಇದರ ಪರಿವೆ ಇರುವುದಿಲ್ಲ. ಅಧಿಕಾರಿಗಳು ಸೂಚಿಸಿದ ಕೆಲಸವನ್ನಷ್ಟೇ ಮಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

***
ಯಾವುದೇ ಉತ್ತರ ನೀಡಲಿಲ್ಲ

ಉದ್ಯಾನಗಳ ಸ್ಥಿತಿಗತಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಸಂಪರ್ಕಕ್ಕೆ ಯತ್ನಿಸಿದರೂ ಲಭ್ಯವಾಗಲಿಲ್ಲ. ಉಳಿದ ವಿಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದರೂ ಯಾವುದೇ ಉತ್ತರ ನೀಡಲಿಲ್ಲ. ಉದ್ಯಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಪ್ರಶ್ನಿಸಿದರೆ, ನಾವು ನಮ್ಮ ಕೆಲಸ ನಡೆಸುತ್ತಿದ್ದೇವೆ. ಸಿಬ್ಬಂದಿ ಕೊರತೆ ಸಾಕಷ್ಟಿದೆ. ಮೆಷಿನರಿಗಳು ಇದ್ದರೂ, ಆಪರೇಟರ್‌ ಇಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು.

***

ಪ್ರವಾಸಿಗರನ್ನು ಆಕರ್ಷಿಸುವಂತೆ ಉದ್ಯಾನ ನಿರ್ವಹಣೆ ಮಾಡಬೇಕಿದ್ದ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ
ಆನಂದ ಕಿತ್ತೂರ, ಪ್ರವಾಸಿ

***

ಗೋಳಗುಮ್ಮಟದ ಆವರಣದಲ್ಲಿ ಕಸದ ಬುಟ್ಟಿ ಇಟ್ಟಿದ್ದರೂ ಪ್ರಯೋಜನವಿಲ್ಲ. ಉದ್ಯಾನ ಹೊಲಸು ತುಂಬಿದೆ. ಮನಸ್ಸಿಗೆ ಭಾಳ ಬೇಸರವಾಯ್ತು
ದರ್ಶನ ಕಿತ್ತೂರ, ಪ್ರವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.