ADVERTISEMENT

ಕಸಬರಿಗೆ ಹಿಡಿದ ಎಕ್ಕಾ ಗಾಡಿ ಚಾಲಕರು !

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 6:32 IST
Last Updated 16 ಜುಲೈ 2013, 6:32 IST

ಮುದ್ದೇಬಿಹಾಳ: ಗ್ರಾಮಸ್ಥರ ಹಲವು ಮನವಿಗಳ ನಡುವೆಯೂ ವ್ಯವಸ್ಥೆ ಸುಧಾರಿಸದ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ವ್ಯಾಪಾರಸ್ಥರೇ ಪಟ್ಟಿ (ಚಂದಾ) ಹಣ ಹಾಕಿ ಗ್ರಾಮದ ಮುಖ್ಯ ಬೀದಿ ಸ್ವಚ್ಛ ಮಾಡಿದ ಘಟನೆ ತಾಲ್ಲೂಕಿನ ನಾಲತವಾಡ ಗ್ರಾಮದಲ್ಲಿ ಈಚೆಗೆ ನಡೆಯಿತು.

ವ್ಯಾಪಾರಸ್ಥರ ಸ್ವಚ್ಛತಾ ಕೆಲಸಕ್ಕೆ  ನಿಮ್ಮ ಜೊತೆ ನಾವೂ ಕೈಜೋಡಿಸುತ್ತೇವೆ ಎಂದು ಎಕ್ಕಾ ಗಾಡಿ ಮಾಲೀಕರೂ ಸಹ ತಮ್ಮ ಅಳಿಲು ಸೇವೆ ಸಲ್ಲಿಸಲು  ಕಸಬರಿಗೆ, ಸಲಿಕೆ ಹಿಡಿದು ರಸ್ತೆ  ಸ್ವಚ್ಛ ಮಾಡಿ, ಅದನ್ನು ತಮ್ಮ ಗಾಡಿಗಳಿಗೇ ಎತ್ತಾಕಿಕೊಂಡು ಹೋಗಿ ಕಸ ವಿಲೇವಾರಿ ಮಾಡಿದರು.

ರಸ್ತೆ ಮೇಲೆ ಕಸ ಬಿದ್ದು, ಚರಂಡಿ ತುಂಬಿದ್ದು ಮಳೆ ಬಂದು ರಸ್ತೆಯ ಮೇಲೆ ಗಲೀಜು ನೀರು ಹರಿದರೂ ಪಂಚಾಯಿತಿ ಯವರು ಗಂಭೀರವಾಗಿ ಪರಿಗಣಿಸಿಲ್ಲ. ಪಂಚಾಯ್ತಿ ನಿರ್ಲಕ್ಷ್ಯದಿಂದ ಬೇಸರವಾಗಿ ನಾವೇ ತಲಾ ್ಙ50 ಚಂದಾ ಹಣ ಸೇರಿಸಿ ಸ್ವಚ್ಛ ಮಾಡುವ ವರಿಗೆ ಕೊಟ್ಟಿದ್ದೇವೆ ಎಂದು ರಾಜು ಚಿನಿವಾರ ತಿಳಿಸಿದರು.

ಇವರೊಂದಿಗೆ ಜಗದೀಶ ಹೂಗಾರ, ಬಸವರಾಜ ಚೌಧರಿ, ಕಸಾಬ ಮೆಡಿಕಲ್ಸ್‌ನವರು, ಬಸವರಾಜ ಇಲಕಲ್ಲ, ಜಗದೀಶ ಜಾಲ ಹಳ್ಳಿ ಮೊದಲಾದವರು (ಪಂಚಾಯ್ತಿ ಯವರನ್ನು ಶಪಿಸುತ್ತಲೇ) ತಲಾ  ಐವತ್ತು ರೂಪಾಯಿ ನೀಡಿದ್ದಾರೆ.

ಇಲ್ರಿ, ಚರಂಡಿ ತೆಗಿಲಾರದಕ ಹೊಲಸು, ಕಸ ಕಡ್ಡಿ, ಪ್ಲಾಸ್ಟಿಕ ಚೀಲಾ ರಸ್ತಾ ಮ್ಯಾಗ ಬಿದ್ದಿದ್ವು, ನೋಡಾಕ ನಮಗೂ ಅಸಹ್ಯ ಅನಿಸ್ತಿತ್ತು,  ಅದರಾಗ ಈ ದೊಡ್ಡ ದೊಡ್ಡ ಜಡ್ಡು, ಸೊಳ್ಳಿ ಕಡದರ ಬರ‌್ತಾವಂತ ತಿಳಿದ ಸ್ವಚ್ಛ ಮಾಡಿವ್ರಿ ಅಂತ ಅಂದವರು ಎಕ್ಕಾ ಗಾಡಿಯ ಮಾಲೀಕ ಗುರಪ್ಪ ಲೋಳ ಸರ. ಗ್ರಾಮದ ಎಕ್ಕಾ ಗಾಡಿ ಮಾಲೀಕ ರಾದ ಬಸಪ್ಪ ಮೆಣಸಿನಗಡ್ಡಿ, ಮದ್ದುಸಾ ಚಿಲಮಖೋರ, ಮೌಲಾಸಾ ಮುಲ್ಲಾ, ಪ್ರಕಾಶ ದೇಸಾಯಿ ಮೊದಲಾದವರು ರಸ್ತೆಯ ಮೇಲಿನ ಗಲೀಜು ಸ್ವಚ್ಛ ಗೊಳಿಸುವ ಮೂಲಕ ಪಂಚಾಯ್ತಿ ಯವರು ನಾಚಿಕೆಪಟ್ಟುಕೊಳ್ಳುವಂತೆ ಕಾರ್ಯ ಮಾಡಿದರು.

ಅಚ್ಚರಿ ಎಂದರೆ ಸಾರ್ವಜನಿಕರೇ ಇಷ್ಟೆಲ್ಲ ಕಾರ್ಯ ಮಾಡುತ್ತಿದ್ದರೂ ಅವರೊಂದಿಗೆ ಕೈ ಜೋಡಿಸುವ ಅಥವಾ ಒಂದೇ ಒಂದು ಮೆಚ್ಚುಗೆಯ ಮಾತನ್ನು ಆಡುವ ಗೋಜಿಗೆ  ಹೋಗದ ಪಂಚಾಯ್ತಿ ಯವರ ಕಾರ್ಯವೈಖರಿ ಗ್ರಾಮಸ್ಥರ ವ್ಯಾಪಕ ಟೀಕೆಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT