ADVERTISEMENT

ಕೀಳರಿಮೆ ತೊರೆದು ಅಭ್ಯಾಸ ಮಾಡಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 5:00 IST
Last Updated 2 ಜುಲೈ 2012, 5:00 IST

ಮುದ್ದೇಬಿಹಾಳ: ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಬೌದ್ಧಿಕವಾಗಿ ಸಾಕಷ್ಟು ಶ್ರೀಮಂತರಾಗಿದ್ದಾರೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನವಿಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಲ್ಲಿ ಸೋಲುತ್ತಿದ್ದಾರೆ ಎಂದು ವಿಜಾಪುರ ಚಾಣಕ್ಯ ಕರಿಯರ್ ಅಕಾಡೆಮಿಯ ನಿರ್ದೇಶಕ ಎನ್.ಎಂ.ಬಿರಾದಾರ ಹೇಳಿದರು.

ಅವರು ಭಾನುವಾರ ತಮ್ಮ ಸಂಸ್ಥೆಯ ವತಿಯಿಂದ ತಾಲ್ಲೂಕಿನ ಬಿ.ಇಡಿ ಪದವೀಧರರಿಗೆ ಉಚಿತವಾಗಿ ಹಮ್ಮಿಕೊಂಡಿದ್ದ ಪರೀಕ್ಷಾರ್ಥ ಪರೀಕ್ಷೆಯ ನಂತರ ವಿದ್ಯಾರ್ಥಿಗಳ ನ್ನುದ್ದೇಶಿಸಿ ಮಾತನಾಡಿದರು.

ಉತ್ತರ ಕರ್ನಾಟಕದ ವಿದ್ಯಾರ್ಥಿ ಗಳಿಗೆ ಸಾಧನೆ ಮಾಡಬೇಕೆಂಬ ಮನಸ್ಸು ಬೇಕು. ಪರೀಕ್ಷೆ ಬಂದಾಗಲೇ ತಯಾರಿ ನಡೆಸುವುದು ಸರಿಯಲ್ಲ. ನನ್ನಿಂದ ಸಾಧ್ಯವಿಲ್ಲ ಎಂಬ ಕೀಳರಿಮೆ ತೊರೆದು ಪರೀಕ್ಷೆ ದೂರವಿರುವಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.

ನಮ್ಮಲ್ಲಿ ಐ.ಎ.ಎಸ್, ಕೆ.ಎ.ಎಸ್. ಬರೆದು ಪಾಸಾ ಗುವ ವಿದ್ಯಾರ್ಥಿಗಳು ಬಹಳ ಕಡಿಮೆ,  ಬೆಂಗಳೂರು, ಮೈಸೂರುಗಳಲ್ಲಿರುವ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವರ್ಷಗಟ್ಟಲೆ ತರಬೇತಿ ಸಿಗುವುದರಿಂದ ಅಲ್ಲಿಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗುತ್ತಾರೆ. ಅಂಥ ಕೊರತೆ ತುಂಬುವ ನಿಟ್ಟಿನಲ್ಲಿ ತಮ್ಮ ಸಂಸ್ಥೆ ಶ್ರಮಿಸುತ್ತಿದೆ ಎಂದವರು ಹೇಳಿದರು.

ರಾಜ್ಯದಾದ್ಯಂತ ಜುಲೈ 15 ರಂದು ಬಿ.ಇಡಿ ಪದವೀಧರರಿಗೆ ಪ್ರೌಢಶಾಲಾ ಶಿಕ್ಷಕ ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ 8 ಜಿಲ್ಲೆಗಳ ಆಯ್ದ 20 ಕೇಂದ್ರಗಳಲ್ಲಿ ಸುಮಾರು ಆರು ಸಾವಿರ ಬಿ.ಇಡಿ ಪದವೀಧರರಿಗೆ ಪರೀಕ್ಷೆ ನಡೆಸಿ ಅವರಿಗೆ ಸೂಕ್ತ ಮಾರ್ಗದರ್ಶನ ಇದರ ಉದ್ದೇಶ ಎಂದವರು ಹೇಳಿದರು.

ರಾಜ್ಯದ ಶ್ರೇಷ್ಠ ಶಿಕ್ಷಣ ತಜ್ಞರಿಂದ ರೂಪಿಸಿದ  ಸಾಮಾನ್ಯ ಜ್ಞಾನ, ಕಲಾ, ಕನ್ನಡ, ಹಿಂದಿ, ಇಂಗ್ಲಿಷ್ ಪ್ರಶ್ನೆ ಪತ್ರಿಕೆಯ ಮಾದರಿಗಳನ್ನು  ಸಂಪೂರ್ಣ ಉಚಿತವಾಗಿ ವಿತರಿಸಿ ಪರೀಕ್ಷೆ ಬರೆಸಲಾಯಿತು.
ನಂತರ ಅದರ ಉತ್ತರಗಳನ್ನು ಹೇಳುವ ಮೂಲಕ ಪರೀಕ್ಷಾರ್ಥಿಗಳು ಎಲ್ಲಿ ತಪ್ಪುವ ಸಾಧ್ಯತೆ ಇರುತ್ತದೆ ಎಂಬುದನ್ನು ಬಿರಾದಾರ ವಿವರಿಸಿದರು.

ಇದೇ ಸಮಯದಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಪರೀಕ್ಷೆಗಳಿಗೆ ಅಕಾಡೆಮಿಯ ವೆಂಕಟೇಶ ಬಿರಾದಾರ, ಮಹೇಶ ಅಡಾಳಿ, ಢವಳಗಿ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.