ADVERTISEMENT

`ಕೀಳು ರಾಜಕೀಯ ಮಾಡಿಲ್ಲ'

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:28 IST
Last Updated 5 ಡಿಸೆಂಬರ್ 2012, 6:28 IST

ಆಲಮೇಲ: ಪಟ್ಟಣದ ಪ್ರಮುಖ ರಸ್ತೆ ಸುಧಾರಿಸಲು ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ರೂ 1.80 ಕೋಟಿ ಮಂಜೂರು ಮಾಡಲಾಗಿದ್ದು ಸದ್ಯದಲ್ಲಿಯೆ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಅವರು ಸೋಮವಾರ ಪಟ್ಟಣದಲ್ಲಿ ನಡೆದ ಟಿಪ್ಪು ಸುಲ್ತಾನರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾವು ಕೋಮು ಗಲಭೆಯಂತಹ ಕೀಳು ರಾಜಕೀಯಕ್ಕೆ ಇಳಿದಿಲ್ಲ ಎಂದು ಪ್ರತಿಪಕ್ಷದ ನಾಯಕರ ತಮ್ಮ ಕುರಿತು ಮಾಡಿದ ಹೇಳಿಕೆಯನ್ನು ಖಂಡಿಸಿದರು.  

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ, `ಸಿಂದಗಿ ತಾಲ್ಲೂಕಿನಲ್ಲಿ ಕೊಮು ಗಲಭೆಗಳು ಆಗುತ್ತಿದ್ದು. ಅಧಿಕಾರಕ್ಕಾಗಿ ಕೆಲವರು ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು, ಅದಕ್ಕೆ ಪ್ರಚೋದನೆಯೂ ಸಲ್ಲದು ಎಂದರು.

ಮೈಬೂಬ ಸಿಂದಗಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಸುಣಗಾರ, ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕ ಸುಭಾಸ ನಾಯ್ಕೋಡಿ, ಮಾಜಿ ಸಚಿವ ಎಂ.ಸಿ. ಮನಗೂಳಿ, ಡಾ. ಸಂದೀಪ ಪಾಟೀಲ, ಸಿ.ಪಿ.ಐ ವಿ.ಎಂ ಚಿದಂಬರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಮ್. ಪಾಟೀಲ ಗಣಿಹಾರ ಡಾ. ದಸ್ತಗೀರ ಮುಲ್ಲಾ, ರೇಷ್ಮಾ ಪಡೇಕನೂರ ಮುಂತಾದವರು ಮಾತನಾಡಿದರು.

ಇಂಡಿಯ ಮೌಲಾನ ಶಾಕೀರ್ ಹುಸೇನ್ ಕಾಸ್ಮಿ, ವಿರಕ್ತಮಠದ ಜಗದೇವ ಮಲ್ಲಿಭೂಮ್ಮಯ್ಯ ಸ್ವಾಮೀಜಿ, ನಿತ್ಯಾನಂದ ಆರೂಢ ಮಠದ ಶರಣಬಸವ ಶರಣರು ಸಾನ್ನಿಧ್ಯ ವಹಿಸಿದ್ದರು.

ಜಿ.ಪಂ. ಸದಸ್ಯ ಮಲ್ಲಪ್ಪ ತೋಡಕರ. ಮಾಜಿ ಜಿ.ಪಂ. ಉಪಾಧ್ಯಕ್ಷ ಸಿದ್ದಾರಾಮ ಪಾಟೀಲ, ರೀಯಾಜ್ ಬಿಳವಾರ, ಮಲೀಕ್ ಖತೀಬ, ಡಾ. ಜಿ.ಎ. ಪಾಟೀಲ, ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ, ಮಹಿಬೂಬ ಅರಬ, ಅಬ್ದುಲ್ ರಜಾಕ್ ದುಧನಿ, ಸಾಹಿತಿ ಸಿದ್ದಾರಾಮ ಉಪ್ಪಿನ, ರಿಯಾಜ್ ಸಿಂಬಡ, ರಜಾಕ್ ಮುಜಾವರ, ಎಮ್. ಎಮ್. ನಾಯ್ಕೋಡಿ, ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷ ಯೂಸೂಫ್ ಬೆಣ್ಣೆಶಿರೂರ, ಪರೀಧಸಾಬ ಸುಂಬಡ, ರಾಜಹ್ಮದ್ ಬೆಣ್ಣೆಶಿರೂರ, ರಂಗನಾಥ, ಶೌಕತ್‌ಅಲಿ ಸುಂಬಡ ಇತರರಿದ್ದರು.

ಯಾಶಿನ್ ಸಂಗಡಿಗರಿಂದ ಕವಾಲಿ ಹಾಗೂ ಕಲಾವಿದ ಭೀಮ ಯಂಪೂರೆ ಅವರ ತಂಡದಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಜಯಂತಿ ಕಮಿಟಿಯ ಅಧ್ಯಕ್ಷ ಸಾಧಿಕ ಸುಂಬಡ ಸ್ವಾಗತಿಸಿದರು. ಉಪಾಧ್ಯಕ್ಷ ಮಕಸುದ್ ಚೌಧರಿ ವಂದಿಸಿದರು. ಶ್ರೀಶೈಲ ಮಠಪತಿ, ಶಿವು ಗುಂದಗಿ ಕಾರ್ಯಕ್ರಮ ನಿರೂಪಿಸಿದರು.

`ವಿವಿಗೆ ಟಿಪ್ಪು ಹೆಸರಿಡಲು ಸಿದ್ಧ'
ಇಂಡಿ:
  ದೇಶದಲ್ಲಿಯ ಅಲ್ಪ ಸಂಖ್ಯಾತರ ಶಿಕ್ಷಣ ಅಭಿವೃದ್ಧಿಗಾಗಿ ಕೇಂದ್ರ ಸರಕಾರ 5 ವಿಶ್ವ ವಿದ್ಯಾಲಯಗಳನ್ನು ತೆರೆಯಲು ನಿರ್ಧಾರ ಮಾಡಿದ್ದು, ರಾಜ್ಯದ ಶ್ರೆರಂಗಪಟ್ಟಣದಲ್ಲಿ ತೆರೆಯಲು ಉದ್ದೇಶಿಸಿರುವ ಹೊಸ ವಿಶ್ವ ವಿದ್ಯಾಲಯಕ್ಕೆ ಟಿಪ್ಪು ಸುಲ್ತಾನ್ ವಿಶ್ವ ವಿದ್ಯಾಲಯ ಎಂದು ಹೆಸರಿಡಲು ಸರ್ವಾನುಮತದ ಒಪ್ಪಿಗೆ ಇದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು.

ಅವರು ಸೋಮವಾರ ಪಟ್ಟಣದಲ್ಲಿ ಶೇರ್ ಎ-ಮೈಸೂರ ಟಿಪ್ಪು ಸುಲ್ತಾನ ಕಮಿಟಿ ಇಂಡಿ, ಡಾ. ಎಪಿಜೆ ಅಬ್ದುಲ್ ಕಲಾಂ ಯುವಕ ಸಂಘ ಇಂಡಿ ಇವರ ಆಶ್ರಯದಲ್ಲಿ ಅಂಜುಮನ್ ಶಾದಿ ಮಹಲ್‌ದಲ್ಲಿ ಏರ್ಪಡಿಸಿದ್ದ ಹಜರತ್ ಟಿಪ್ಪು ಸುಲ್ತಾನರ 262ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಟಿಪ್ಪು ಸುಲ್ತಾನರು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗ್ದ್ದಿದರು. ಇಂತಹ ನೂರಾರು ಜನ ರಾಜರ, ಹೋರಾಟಗಾರರ ಪ್ರಾಣ ತ್ಯಾಗದಿಂದ ನಮಗೆ ಇಂದು ಸ್ವಾತಂತ್ರ್ಯ ದೊರೆತಿದೆ ಎಂದು ಹೇಳಿದ ಅವರು ಇಂತವರ ಹೆಸರು ಮಾಸದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವಾದ ಮಾಡಿದ್ದಾದರೆ ಸರಕಾರದ ವತಿಯಿಂದ ಟಿಪ್ಪು ಸುಲ್ತಾನರ ಜಯಂತ್ಯುತ್ಸವ ಆಚರಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡ ಯಶವಂತ್ರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಜಾಪುರ ಕಾಶಿಮಪೀರ್ ದರ್ಗಾ, ಸೈಯದ್ ಮಹಮ್ಮದ್ ತನವೀರ್ ಕಾಶ್ಮಿ ಸಾನ್ನಿಧ್ಯ ವಹಿಸಿದ್ದರು. ಪ್ರೊ. ಎ.ಪಿ. ಕಾಗ್ವಾಡಕರ, ಪ್ರಾಚಾರ್ಯ ಎಸ್.ಬಿ. ಬರಗುಂಡಿ, ಮೌಲಾನಾ ಶಾಕೀರ ಹುಸೇನ್ ಕಾಶ್ಮೆ ಮೌಲಾನ್ ಇಸ್ಮಾಯಿಲ್ ಇನಾಮದಾರ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯಾ ದೇಸಾಯಿ, ಕಲ್ಲು ದೇಸಾಯಿ, ಮೈಬೂಬ ಅರಬ, ಕಲ್ಲನಗೌಡ ಬಿರಾದಾರ, ಗುರನಗೌಡ ಪಾಟೀಲ, ಜಾವೀದ ಮೋಮಿನ, ಎಂ.ಬಿ. ಮಾಣಿಕ, ಸುಭಾಷ ಬಾಬರ, ಮಹೇಶ ಬಿರಾದಾರ, ಮಲ್ಲು ಹಾವಿನಾಳಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.