ವಿಜಾಪುರ: ‘ನೀರು ಹಂಚಿಕೆ ವಿಷಯದಲ್ಲಿ ಕಾವೇರಿಯಲ್ಲಿ ಆಗಿರುವಂತೆ ಕೃಷ್ಣೆಯ ರೈತರಿಗೂ ಅನ್ಯಾಯ ಆಗುವುದು ಬೇಡ. ಕೃಷ್ಣಾ ಎರಡನೆಯ ನ್ಯಾಯಮಂಡಳಿಯ ತೀರ್ಪಿನ ಬಾಧಕ ಅಂಶಗಳ ಬಗ್ಗೆ ನ್ಯಾಯ ಪಡೆಯಲು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಬೇಕು. ಈ ತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಬಾರದು’ ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದರು.
‘ಕೃಷ್ಣಾ ಎರಡನೆಯ ನ್ಯಾಯ ಮಂಡಳಿಯ ತೀರ್ಪು ಬಂದ ನಂತರ ಹಿಂದಿನ ಸರ್ಕಾರ ನ್ಯಾಯಮಂಡಳಿಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದೇ ತಪ್ಪು. ನೀರಾವರಿ ವಿಷಯದಲ್ಲಿ ಪರಿಣಿತರಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಸಲಹೆ ಪಡೆಯಬೇಕಿತ್ತು’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕಾವೇರಿ ವಿಷಯದಲ್ಲಿ ದೇವೇಗೌಡರು ನೀಡಿದ ಸಲಹೆಯನ್ನು ನಮ್ಮ ಸರ್ಕಾರ ಪರಿಗಣಿಸಲಿಲ್ಲ. ನ್ಯಾಯಮಂಡಳಿಗೆ ನಾವೇ ಹಗ್ಗ ನೀಡಿ ನಮ್ಮ ರೈತರ ಕತ್ತು ಬಿಗಿಸಿದಂತೆ ಆಯಿತು. ಕೃಷ್ಣೆಯ ವಿಷಯದಲ್ಲಿಯೂ ಹೀಗೆ ಆಗುವುದು ಬೇಡ. ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು. ಸರ್ಕಾರಕ್ಕೆ ಬದ್ಧತೆ ಇಲ್ಲ. ಅನ್ಯಾಯ ಸರಿಪಡಿಸಿಕೊಳ್ಳುವ ಚಿಂತನೆಯೂ ಇಲ್ಲ. ಅವರ ಚಿತ್ತ ಏನಿದ್ದರೂ ಕೇವಲ ಲೋಕಸಭಾ ಚುನಾವಣೆಯ ಮೇಲಿದೆ’ ಎಂದು ದೂರಿದರು.
‘ಆಲಮಟ್ಟಿ ಜಲಾಶಯ ಆಂಧ್ರ ಪ್ರದೇಶಕ್ಕೆ ನೀರು ಬಿಡುವ ಸಂಗ್ರಹಾಗಾರ ಆಗಬಾರದು. ಅಲ್ಲಿ ಸಂಗ್ರಹವಾಗುವ ನೀರು ನಮ್ಮ ರೈತರ ಜಮೀನಿಗೆ ಹರಿಯಬೇಕು. ಕೃಷ್ಣಾ ಜಲ ವಿವಾದದ ವಿಷಯದಲ್ಲಿ ನ್ಯಾಯ ಪಡೆಯಲು ಇನ್ನೂ ಅವಕಾಶ ಇದ್ದು, ಲಭ್ಯವಿರುವ ಮಾರ್ಗೋಪಾಯಗಳನ್ನು ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಈ ಜಿಲ್ಲೆಯ ಜನರಿಗೆ ಮುಂದೆ ದೊಡ್ಡಮಟ್ಟದಲ್ಲಿ ಪೆಟ್ಟು ಬೀಳಲಿದೆ’ ಎಂದರು.
‘ನೀರಾವರಿಯೇ ನಮ್ಮ ಆದ್ಯತೆ ಎಂದು ಹೇಳಿಕೊಂಡು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಜಿಲ್ಲೆಯವರೇ ಜಲಸಂಪನ್ಮೂಲ ಸಚಿವರಾಗಿದ್ದಾರೆ. ಕಳೆದ ಬಜೆಟ್‌ನಲ್ಲಿ ನೀರಾವರಿಗೆ ಮೀಸಲಿಟ್ಟ ₨9,000 ಕೋಟಿ ಅನುದಾನದಲ್ಲಿ ಈ ಭಾಗದ ನೀರಾವರಿ ಯೋಜನೆಗಳಿಗೆ ಎಷ್ಟು ವಿನಿಯೋಗಿಸಲಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು’ ಎಂದು ಆಗ್ರಹಿಸಿದರು.
‘ನೀರಾವರಿಗೆ ವರ್ಷಕ್ಕೆ ₨10,000 ಕೋಟಿ ಹಣ ಕೊಡುತ್ತೇವೆ ಎಂದು ಹೇಳಿದರೆ ಸಾಲದು. ಬಿ ಸ್ಕೀಂನಲ್ಲಿ ಲಭ್ಯವಿರುವ ನೀರು ಬಳಸಿಕೊಳ್ಳಲು ಬೇಕಿರುವ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನ ಗೊಳಿಸುವ ಬದಲು ದುಡ್ಡು ಹೊಡೆಯುವ ದಂಧೆ ಮಾಡಿದರೆ ನೀರು ಬಳಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.
ತೆರಿಗೆಯ ಹಣ ದುರುಪಯೋಗ: ರಾಜ್ಯ ಸರ್ಕಾರ ಜನತೆಯ ತೆರಿಗೆಯ ಹಣವನ್ನು ಸ್ವೇಚ್ಛಾಚಾರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಭಿವೃದ್ಧಿ ಮತ್ತು ಸರ್ಕಾರಿ ಆಸ್ತಿ ವೃದ್ಧಿಗೊಳಿಸುವ ಯೋಜನೆಗಳ ಬದಲು ಕೆಲ ಜನಪ್ರಿಯ ಯೋಜನೆಗಳಿಗೆ ಹೆಚ್ಚು ಹಣ ವ್ಯಯಿಸುತ್ತಿದೆ. ಕೇವಲ ಜನಪ್ರಿಯ ಯೋಜನೆಗಳಿಂದ ಆ ವರ್ಗಗಳ ಅಭಿವೃದ್ಧಿ ಸಾಧ್ಯವಿಲ್ಲ. ಅವರಿಗೆ ಶಾಶ್ವತ ಯೋಜನೆ ರೂಪಿಸಬೇಕು ಎಂದರು.
ಮತ್ತೊಂದು ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿಗಳು ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಇನ್ನೂ ಶೇ.52ರಷ್ಟು ಹಣ ಬಿಡುಗಡೆ ಮಾಡಿಲ್ಲ. ಬಜೆಟ್ ಪುಸ್ತಕಕ್ಕೆ ಸೀಮಿತ ಆಗಬಾರದು ಎಂದರು.
ರೈತರ ಸಮಸ್ಯೆಗಳ ಕುರಿತು ತಮ್ಮ ಪಕ್ಷ ವಿಧಾನ ಸಭೆಯ ಒಳಗೆ ಸಮರ್ಥ ಹೋರಾಟ ಮಾಡಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ ಬೀದಿಗಿಯುವುದೂ ಅನಿವಾರ್ಯವಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ಮಾಜಿ ಸಚಿವ ಎಂ.ಸಿ. ಮನಗೂಳಿ, ಜೆಡಿಎಸ್ ಮುಖಂಡರಾದ ವಿಜುಗೌಡ ಪಾಟೀಲ, ರಾಜೇಶ ದೇವಗಿರಿ, ಚಂದ್ರಕಾಂತ ಹಿರೇಮಠ, ರೇಷ್ಮಾ ಪಡೇಕನೂರ, ದಾನಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಯಂಡಿಗೇರಿ, ಸಿದ್ದು ಕಾಮತ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.