ಸಿಂದಗಿ: ಗುಟ್ಕಾ ಮಾರಾಟ ಮಾಡುತ್ತಿರುವ ಮತ್ತು ಸಂಗ್ರಹಣೆ ಮಾಡಿಟ್ಟುಕೊಂಡಿರುವ ಅಂಗಡಿಗಳ ಮೇಲೆ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಠಾತ್‌ನೇ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಗುಟ್ಕಾ ಮತ್ತು ತಂಬಾಕು ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.
ತಾಲ್ಲೂಕು ದಂಡಾಧಿಕಾರಿ ಅಶ್ವಥನಾರಾಯಣ ಶಾಸ್ತ್ರೀ ನೇತೃತ್ವದ ತಂಡ ದಾಳಿ ನಡೆಸಿದ್ದರು. ತಂಡದಲ್ಲಿ ತಹಶೀಲ್ದಾರ ಗ್ರೇಡ್-2 ಜಿ.ಎಸ್.ಮಳಗಿ, ತಾಲ್ಲೂಕು ಆರೋಗ್ಯಾಧಿಕಾರಿ ಆರ್.ಎಂ.ಬರಗಿ, ಪುರಸಭೆ ಮುಖ್ಯಾಧಿಕಾರಿ ಎನ್.ಆರ್. ಮಠ, ಕಂದಾಯ ಇಲಾಖೆಯ ಮಹಿಪತಿ ದೇಸಾಯಿ, ಆರೋಗ್ಯ ಇಲಾಖೆಯ ಜಹಾಂಗೀರ ಸಿಂದಗಿಕರ, ಶಹಾಪೂರ, ಸನಗೊಂಡ ಇದ್ದರು.
ಗುಟ್ಕಾ ಸಾಮಗ್ರಿಗಳು ದೊರೆತ ಹಳೇ ಎಸ್‌ಬಿಐ ರಸ್ತೆಯಲ್ಲಿನ ಸಿದ್ದೇಶ್ವರ ಜನರಲ್ ಸ್ಟೋರ್ಸ್, ದೇವಿ ಕಿರಾಣಾ ಸ್ಟೋರ್ಸ್, ಇರ್ಫಾನ್ ಪಾನ್‌ಶಾಪ್, ಅಬ್ದುಲಸಮದ್ ಸೌದಾಗರ ಪಾನ್ ಶಾಪ್ ಮತ್ತಿತರ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ನಗರದಾದ್ಯಂತ ಮತ್ತೆ ದಾಳಿ ನಡೆಸಿದ ಸಂದರ್ಭದಲ್ಲಿ ಗುಟ್ಕಾಗಳು ದೊರತರೆ ಪೊಲೀಸ್ ಪ್ರಕರಣ ದಾಖಲಿಸಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಎಚ್ಚರಿಕೆ ನೀಡಿದರು.
ವಶಪಡಿಸಿಕೊಂಡಿರುವ ಎಲ್ಲ ತಂಬಾಕು ವಸ್ತುಗಳನ್ನು ಜಿಲ್ಲಾ ಸಮೀಕ್ಷಾ ಘಟಕಕ್ಕೆ ಒಪ್ಪಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.