ಆಲಮಟ್ಟಿ: ಗೊಳಸಂಗಿಯ ನೇಕಾರರ ಕಾಲೊನಿಯ ಮಾದರಿ ಬಡಾವಣೆಯಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದೇ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಬಡಾವಣೆಯ ನಿವಾಸಿಗಳು, ತಮ್ಮ ಮಕ್ಕಳೊಂದಿಗೆ ಖಾಲಿ ಕೊಡ ಹೊತ್ತು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಂತರ ಗ್ರಾಮ ಪಂಚಾಯಿತಿಗೆ ಆಗಮಿಸಿ ಆಡಳಿತ ಮಂಡಳಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಖಾಲಿ ಕೊಡ ಹಾಗೂ ಹಲಗೆ ಬಾರಿಸುತ್ತಾ ಮೆರವಣಿಗೆ ನಡೆಸಿದ ಗ್ರಾಮಸ್ಥರು, ನೀರು ಪೂರೈಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಆರು ವರ್ಷದ ಹಿಂದೆ ಮಾದರಿಯಾಗಿ ಸಿದ್ಧಗೊಂಡಿದ್ದ ಬಡವಣೆಗೆ ಮೀಸಲಿದ್ದ ನೀರನ್ನು ಗ್ರಾಮದ ಕೆಲ ಬೀದಿಗಳಲ್ಲಿ ತಾತ್ಕಾಲಿಕವಾಗಿ ಪೂರೈಸಲಾಗಿತ್ತು. ನಂತರ ಇತರ ಬಡಾವಣೆಗಳಿಗೂ ವಿಸ್ತರಣೆಯಾಗಿ, ಇಡೀ ಊರಿನ ಜನರಿಗೆ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ಆಡಳಿತ ಮಂಡಳಿ ಕೆಲ ವರ್ಷಗಳ ಬಳಿಕ ಜಲ ನಿರ್ಮಲ ಯೋಜನೆಯಡಿ ಗ್ರಾಮಕ್ಕೆ ಬಂದಂತ ಕೃಷ್ಣಾ ನದಿ ನೀರನ್ನು ಬಡಾವಣೆಗೆ ಬಿಡದೆ ಮಲತಾಯಿ ಧೋರಣೆ ಅನುಸರಿಸಿದರು.
ಗೊಳಸಂಗಿ ಗ್ರಾ.ಪಂ.ನ 17 ಜನ ಸದಸ್ಯರಲ್ಲಿ 8 ಜನ ಸದಸ್ಯರ ಆಯ್ಕೆಗೆ ಬಡಾವಣೆಯ ನಿವಾಸಿಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಆದರೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ಇನ್ನೂ ಈಡೇರಿಲ್ಲ ಎಂದು ನೇಕಾರ ಸಹಕಾರಿ ಸಂಘದ ಸದಸ್ಯ ಚನ್ನಮಲ್ಲ ಉಳ್ಳಿ ವಿಷಾದ ವ್ಯಕ್ತಪಡಿಸಿದರು. ಗೋಪಾಲ ಗುಳೇದಗುಡ್ಡ ಮಾತನಾಡಿ, ಮಾದರಿ ಬಡಾವಣೆಯಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯವನ್ನೂ ನಿರ್ಮಿಸಿಲ್ಲ ಎಂದು ಆರೋಪಿಸಿದರು.
ಭಾರತಿ ಹಂಗರಗಿ, ರೇಣುಕಾ ಗುಡ್ಡದ ಮಾತನಾಡಿದರು. ನೀರು ಪೂರೈಕೆಗಾಗಿ ಆಗ್ರಹಿಸಿ ಬಡಾವಣೆಯ ಶಾಲಾ ಮಕ್ಕಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಶ್ರೀಧರ ಸ್ವಾಮಿ ದೇವಾಂಗಮಠ, ಗುರುರಾಜ ಕೂಚಬಾಳ, ಗುರುಲಿಂಗ ಜೇವರಗಿ, ಪರಪ್ಪ ಕಾಳಗಿ, ಲೋಕಪ್ಪ ಕೊಪ್ಪದ, ಗೀತಾ ಗುಡ್ಡದ, ಅನುಸೂಯಾ ಕುಪ್ಪಸ್ತ, ಸುಶೀಲಾ ಗಣಿ, ಯಶೋಧಾ ಹಡ್ಲಗೇರಿ, ಮಾನಂದಾ ಹವೇಲಿ, ಲಕ್ಷ್ಮೀಬಾಯಿ ಹೆಬ್ಬಾಳ, ಗೀತಾ ಗುಳೇದಗುಡ್ಡ, ಯಶೋಧಾ ಡಬ್ಬಣದ, ಸಂಪತ್ ಪವಾರ, ಕಾಳವ್ವ ಮನಗೂಳಿ, ಈರಣ್ಣ ಮಲಘಾಣ, ಗಂಗಾಧರ ಗಣಿ, ಶಂಕರಲಿಂಗ ರಕ್ಕಸಗಿ, ಬಸಮ್ಮೋ ಬಳಬಟ್ಟಿ ಮೊದಲಾದವರು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಮಾದರಿ ಬಡಾವಣೆ ನಿವಾಸಿಗರಿಗೆ ವಾರದೊಳಗೆ ಸಮರ್ಪಕ ನೀರು ಪೂರೈಕೆ ಮತ್ತು ಎರಡು ತಿಂಗಳಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ ನಿರ್ಮಸಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷ ಬಂದೇನವಾಜ ಬಿಜಾಪುರ ಭರವಸೆ ನೀಡಿದರು.
ಪಿಡಿಒ ಎಸ್.ಜೆ. ಉದಯಕುಮಾರ ಮಾತನಾಡಿ, ಬಡಾವಣೆಗೆ ತುರ್ತಾಗಿ ಟ್ಯಾಂಕರ್‌ಮೂಲಕ ನೀರು ಪೂರೈಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ ಗುಳೇದಗುಡ್ಡ, ಸದಸ್ಯರಾದ ಸುರೇಶ ದಳವಾಯಿ, ಶಾರದಾ ಯಂಕಂಚಿ, ಮಲ್ಲಿಕಾರ್ಜುನ ಕೂಡಗಿ, ಮಹೆಬೂಬ ಅತಾವಾಲೆ, ಬಸೀರ ಅಹ್ಮದ ಹತ್ತರಕಿಹಾಳ, ಮಲ್ಲು ರಾಠೋಡ, ಬಸವರಾಜ ಮಲಘಾಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.