ADVERTISEMENT

ಗ್ರಾಮೀಣ ಸೊಗಡಿನ ದೀಪಾವಳಿಯ ಸಡಗರ

ಪ್ರಕಾಶ ಮಸಬಿನಾಳ
Published 20 ಅಕ್ಟೋಬರ್ 2017, 9:54 IST
Last Updated 20 ಅಕ್ಟೋಬರ್ 2017, 9:54 IST

ಬಸವನಬಾಗೇವಾಡಿ: ಗ್ರಾಮೀಣರ ದೀಪಾವಳಿ ಸಂಭ್ರಮ ವಿಶಿಷ್ಟವಾದುದು. ಹಲ ನಿರೀಕ್ಷೆಗಳ ಜತೆಯಲ್ಲೇ ಇಡೀ ಕುಟುಂಬವೇ ಪರಿಸರದ ಜತೆ ಬೆಸೆದುಕೊಂಡು ಸಡಗರವನ್ನು ನೂರ್ಮಡಿ ಮಾಡಿಕೊಳ್ಳುವ ಹಬ್ಬವಿದು. ಹಬ್ಬದ ದಿನ ಸಹೋದರರಿಗಷ್ಟೇ ಅಲ್ಲದೇ ಮನೆಯ ಜಾನುವಾರಿಗೂ ಆರತಿ ಬೆಳಗುವುದು ದೀಪಾವಳಿಯ ವಿಶೇಷ. ಉದ್ದನೆ ಹುಲ್ಲಿನಲ್ಲಿ ಐದು ಹೆಡೆಯ ಸರ್ಪದಾಕೃತಿ ಮಾಡಲಾಗುತ್ತದೆ.

ಅವರಿ ಹುಲ್ಲಿನಿಂದ ಅಲಂಕರಿಸಿದ ಹೆಡೆಯಲ್ಲಿ ಪಣತೆಯನ್ನಿಟ್ಟು ‘ಚೈ ಚೈ ಚಜ್ಜಿ ಕೊಯ್ಯೋ, ನಾಳಿಗೆ ಬಂದು ಕೂಲಿ ಒಯ್ಯೋ, ನಾಡಿದ್ದು ಬಂದು ಕುಡಗೋಲು ಒಯ್ಯೋ, ಆನಿ ಪಿನಿ ಜಾಣಗೊ, ನಮ್ಮ ಆಡಿನ ಪೀಡಾ ಹೋಗಲೋ’ ಎಂದು ಹಾಡುತ್ತಾ ಆಡುಗಳಿಗೂ ಆರತಿ ಬೆಳಗಲಾಗುತ್ತದೆ.

‘ಎಮ್ಮಿ ಗಿಮ್ಮಿ ಹೆಂಗಿರಬೇಕು. ಸರ್‌ಗುರ್‌ ಹಿಂಡಿರಬೇಕು. ಒಲಿಮ್ಯಾಗ ಇಟ್ಟಿರಬೇಕು. ಬೆಕ್ಕ ಬಂದ ಕುಡಿದಿರಬೇಕು. ಆಯಿ ಬಂದ ಹೊಡದಿರಬೇಕು. ಮುತ್ಯಾ ಬಂದು ಬಿಡಿಸಿರಬೇಕು. ಆನಿ ಪಿನಿ ಜಾಣಗೋ. ನಮ್ಮ ಎಮ್ಮಿ ಪೀಡಾ ಹೋಗಲೋ’ ಎಂಬಿತ್ತ್ಯಾದಿ ಹಾಡುಗಳೊಂದಿಗೆ ಜಾನುವಾರುಗಳಿಗೆ ಆರತಿ ಬೆಳಗುವ ರೈತರ ಸಂಭ್ರಮದಲ್ಲಿ ಪ್ರಾರ್ಥನೆಯೂ ಅಡಕಗೊಂಡಿದೆ. ವರ್ಷವಿಡಿ ಜಾನುವಾರುಗಳಿಗೆ ರೋಗ–ರುಜಿನ ಬಾಧಿಸಬಾರದು ಎಂಬುದೇ ಈ ಆರತಿಯ ಹಿಂದಿನ ವೈಶಿಷ್ಟ್ಯ ಎನ್ನುತ್ತಾರೆ ಇಲ್ಲಿಯ ರಮೇಶ ಪೂಜಾರಿ.

ADVERTISEMENT

ಕುರಿ ದೊಡ್ಡಿ ಪೂಜೆ: ಕುರಿಗಳೇ ನಮ್ಮ ಸಂಪತ್ತು (ಲಕ್ಷ್ಮೀ) ಎಂದುಕೊಂಡಿರುವ ಕುರಿಗಾಹಿಗಳು ಪಾಡ್ಯದ ದಿನ ಕುರಿಗಳು ಸೇರಿದಂತೆ ಕುರಿದೊಡ್ಡಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ದೊಡ್ಡಿಯ ನೆಲ ಹಾಸಿಗೆಯನ್ನು ಸೆಗಣಿಯಿಂದ ಸಾರಿಸಿ, ಕುರಿಗಳ ಮೈ ತೊಳೆದು ವಿವಿಧ ಬಣ್ಣ ಹಚ್ಚುತ್ತಾರೆ. ಚೆಂಡು ಹೂವು ಸೇರಿದಂತೆ ತಳಿರು ತೋರಣದಿಂದ ಅಲಂಕರಿಸಿದ ದೊಡ್ಡಿಗೆ ಪೂಜೆ ಸಲ್ಲಿಸುವ ಮೂಲಕ ಕುರಿಗಳ ಸಂತಾನ ವೃದ್ಧಿಯಾಗಲಿ, ಯಾವುದೇ ರೀತಿಯ ಕಂಟಕ ಬಾರದಿರಲಿ ಎಂದು ಬೇಡಿಕೊಳ್ಳುತ್ತಾರೆ.

ಪಗಡೆ ಆಟ: ಪಾಡ್ಯದ ದಿನ ಪಾಂಡವ–ಕೌರವ ಎಂದು ಎರಡು ಗುಂಪು ರಚಿಸಿಕೊಂಡು ಇಡೀ ರಾತ್ರಿ ಪಗಡೆಯಾಟ ಆಡುವುದು ಗ್ರಾಮೀಣ ಪ್ರದೇಶದಲ್ಲಿನ ದೀಪಾವಳಿಯ ವೈಶಿಷ್ಟ್ಯ. ಇದು ಇಂದಿಗೂ ಜೀವಂತ ವಿದೆ. ಬಸವನಬಾಗೇವಾಡಿಯ ಅನಂತಶಯನ ದೇವಸ್ಥಾನದ ಹತ್ತಿರ, ಪವಾಡ ಬಸವೇಶ್ವರ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಆಟದ ಸಂಭ್ರಮ ಜೋರಾಗಿರುತ್ತದೆ.

ಗುಳ್ಳವ್ವನ ಪೂಜೆ: ಪಾಂಡವರು 12 ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಮುಗಿಸಿದ ನಂತರ ಬನ್ನಿ ಗಿಡದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಪಾಡ್ಯದ ದಿನ ತೆಗೆದುಕೊಂಡು ಬಂದಿದ್ದರ ವಿಜಯೋತ್ಸವದ ಸಂಕೇತ ವಾಗಿ ಮನೆಯ ಆವರಣದಲ್ಲಿ ಗುಳ್ಳವ್ವನ ಪೂಜೆ ನಡೆಯುತ್ತದೆ.

ಪಾಂಡವರು ಕೌರವರನ್ನು ಸಂಹಾರ ಮಾಡಿದ ಚಿತ್ರ ಬಿಂಬಿಸುವಂತೆ ಸೆಗಣಿ ಯಲ್ಲಿ ಗೊಂಬೆಗಳನ್ನು ಮಾಡುತ್ತಾರೆ. ನಂತರ ಚೆಂಡು ಹೂವು, ತತ್ರಾಣಿ ಕಡ್ಡಿ, ಅವರಿ ಹೂವುಗಳಿಂದ ಅಲಂಕರಿಸಿ ಮೊಸರು ಸೇರಿದಂತೆ ನೈವೇದ್ಯದೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ.

ಆಕಾಶ ಬುಟ್ಟಿ: ಪ್ಲಾಸ್ಟಿಕ್‌ ಸೇರಿದಂತೆ ವಿವಿಧ ಅಲಂಕಾರಿಕ ಆಕಾಶ ಬುಟ್ಟಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಬಿದಿರಿನ ಕಡ್ಡಿ ಬಣ್ಣದ ಹಾಳೆಗಳಿಂದ ತಯಾರಿಸಿದ ಆಕಾಶ ಬುಟ್ಟಿ ಮಾಯ ವಾಗುತ್ತಿವೆ. ಹಳ್ಳಿಗಳಲ್ಲಿ ನಡೆಯುತ್ತಿದ್ದ ಆಕಾಶ ಬುಟ್ಟಿ ತಯಾರಿಸುವ ಸ್ಪರ್ಧೆಯೂ ಈಚೆಗೆ ಮರೆಯಾಗಿದೆ. ಆದರೆ ಬಸವನಬಾಗೇವಾಡಿಯ ಮಹಾರಾಜ ಮಠದ ಹತ್ತಿರದ ಬಸವರಾಜ ಪಟ್ಟಣಶೆಟ್ಟಿ ಮನೆ ಸೇರಿದಂತೆ ಹಳ್ಳಿಯ ಕೆಲವೆಡೆ ಬಿದಿರು ಹಾಗೂ ಬಣ್ಣದ ಹಾಳೆಯಿಂದ ತಯಾರಿಸಿದ ಆಕಾಶ ಬುಟ್ಟಿ ಹಾಕುತ್ತಿರುವುದು ವಿಶೇಷ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.