ADVERTISEMENT

ಚಪ್ಪಾಳೆ ಬೇಡ, ಮತ ಹಾಕಿ: ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:32 IST
Last Updated 25 ಏಪ್ರಿಲ್ 2013, 6:32 IST

ವಿಜಾಪುರ: `ಕೇವಲ ಚೆಪ್ಪಾಳೆ ಹೊಡೆಯಬೇಡಿ, ಮತ ಹಾಕಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ'.ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಇಂಡಿಯಲ್ಲಿ ಮತದಾರರಿಗೆ ಮಾಡಿಕೊಂಡ ಮನವಿ ಇದು.

ಸವದತ್ತಿ ಸಮಾರಂಭ ಮುಗಿಸಿಕೊಂಡು ಹೆಲಿಕಾಪ್ಟರ್‌ನಲ್ಲಿ ಇಂಡಿಗೆ ಬಂದಿಳಿದ ಅವರು, ಅಲ್ಲಿಯೇ ಊಟ ಮಾಡಿ ಕೆಲಹೊತ್ತು ವಿಶ್ರಾಂತಿ ಪಡೆದರು. ಉರಿಬಿಸಿಲಿನಲ್ಲಿಯೇ ಮಧ್ಯಾಹ್ನ 3ಕ್ಕೆ ವೇದಿಕೆಗೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಂತರ ಹುಬ್ಬಳ್ಳಿ ವರೆಗೆ ಹೆಲಿಕಾಪ್ಟರ್‌ನಲ್ಲಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.

ಅದೇ ಬಿಳಿ ಬಟ್ಟೆ, ಕರಿ ಕೋಟು ತೊಟ್ಟಿದ್ದ ಅವರು ಬಿಸಿಲಿಗೆ ಬಳಲಿದಂತೆ ಕಂಡು ಬರಲಿಲ್ಲ. ಪ್ರಧಾನಿ ಡಾ.ಮನಮೋಹನ್ ಸಿಂಗ್ ದುರ್ಬಲ ಎಂದು ಹೇಳುವ ಸಂದರ್ಭದಲ್ಲಿ ದೇವೇಗೌಡ ಪ್ರಧಾನಿಯಾಗಿದ್ದಾಗ ಶಕ್ತಿಶಾಲಿ ಆಡಳಿತ ನಡೆಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಾಜಪೇಯಿ, ರಾಮಕೃಷ್ಣ ಹೆಗಡೆ, ದೇವೇಗೌಡರು ಸೇರಿದಂತೆ ತಮ್ಮನ್ನೆಲ್ಲ ಜೈಲಿಗೆ ತಳ್ಳಿದ್ದನ್ನು ನೆನಪಿಸಿಕೊಂಡು, `19 ತಿಂಗಳ ಕಾಲ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕಳೆದಿದ್ದೇನೆ. ನನಗೆ ಕರ್ನಾಟಕ ಎಂದರೆ ಅಚ್ಚುಮೆಚ್ಚು' ಎಂದರು.

`ರಥ ಯಾತ್ರೆ, ಚುನಾವಣೆ ಪ್ರಚಾರಕ್ಕಾಗಿ ದೇಶದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಸವದತ್ತಿ ಮತ್ತು ಇಂಡಿ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿದ್ದು ಖುಷಿ ತಂದಿದೆ' ಎಂದು ಹೇಳಿ ಜನತೆಯನ್ನೂ ಖುಷಿ ಪಡಿಸಲು ಯತ್ನಿಸಿದರು.

`ಪ್ರಾಮಾಣಿಕ ವ್ಯಕ್ತಿಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಮತದಾರರು ಸರಿಯಾದ ವಿಶ್ಲೇಷಣೆ ಮಾಡಿ ಸೂಕ್ತ ನಿರ್ಧಾರ ಕೈಗೊಂಡು ಮತ ಚಲಾಯಿಸಬೇಕು. ಇಂಡಿ ಕ್ಷೇತ್ರದ ಅಭ್ಯರ್ಥಿ ಶ್ರೀಶೈಲಗೌಡ ಬಿರಾದಾರ ಅವರನ್ನು ಗೆಲ್ಲಿಸಿ, ಉತ್ತಮ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ' ಎಂದು ಅಡ್ವಾಣಿ ಹೇಳಿದರು.

ಮೂಗು ಕೊಯ್ಯಿಸಬೇಡಿ: `ಪಕ್ಷದಲ್ಲಿ ನನ್ನ ವರ್ಚಸ್ಸು ಹೆಚ್ಚಿಸಲು ಮತ್ತು ಇಂಡಿ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ನನ್ನ ಮರ್ಯಾದೆ ಉಳಿಸಬೇಕು. ಇಲ್ಲದಿದ್ದರೆ ಹಿರಿಯರು ನನ್ನ ಮೂಗು ಕೊಯ್ಯುತ್ತಾರೆ. ನನ್ನ ಮೂಗು ಕೊಯ್ದರೆ ಅದು ಇಂಡಿ ತಾಲ್ಲೂಕಿನ ಮೂಗು ಕೊಯ್ದಂತೆ' ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

`ನಾವು ಸುಮ್ಮನೆ ಮತ ಕೇಳಲು ಬಂದಿಲ್ಲ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಇಂಡಿ ತಾಲ್ಲೂಕು ಸಾಕಷ್ಟು ಅಭಿವೃದ್ಧಿ ಆಗಿವೆ. ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ' ಎಂದರು.

`ಜಗದೀಶ ಶೆಟ್ಟರ್ ಅವರನ್ನು ನಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಕಾಂಗ್ರೆಸ್‌ನವರು ಹರಿಜನ ಕೇರಿಗೆ ಹೋದಾಗ ಖರ್ಗೆ, ಹಾಲುಮತ ಸಮಾಜದ ಓಣಿಗೆ ಬಂದಾಗ ಸಿದ್ದರಾಮಯ್ಯ, ಲಿಂಗಾಯತರ ಗಲ್ಲಿಗೆ ಹೋದಾಗ ಶಾಮನೂರು ಶಿವಶಂಕರಪ್ಪ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಅವರ ನಾಟಕ ನಡೆಯುವುದಿಲ್ಲ' ಎಂದು ಲೇವಡಿ ಮಾಡಿದರು.

`ಇಂಡಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ. ಎಲ್ಲ ವರ್ಗದವರ ಸೇವೆಗಾಗಿ ನನ್ನನ್ನು ಆಯ್ಕೆ ಮಾಡಬೇಕು. ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಮುಂದುವರೆಯಲು ಅವಕಾಶ ಕಲ್ಪಿಸಬೇಕು' ಎಂದು ಅಭ್ಯರ್ಥಿ ಶ್ರೀಶೈಲಗೌಡ ಬಿರಾದಾರ ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪೂರ, ನಾರಾಯಣಸಾ ಭಾಂಡಗೆ, ಶಿವಾನಂದ ಕಲ್ಲೂರ, ದಯಾಸಾಗರ ಪಾಟೀಲ, ರಾಜು ಮಗಿಮಠ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.