ADVERTISEMENT

ಚುನಾವಣೆ ಮುಗಿದರೂ, ತಪ್ಪದ ಶಿಕ್ಷಕರ ಗೋಳು!

ಮತದಾರರ ಪಟ್ಟಿ ಪರಿಷ್ಕರಣೆಗೆ ಒಂದೇ ಶಾಲೆಯ 7 ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 29 ಮೇ 2018, 10:22 IST
Last Updated 29 ಮೇ 2018, 10:22 IST

ವಿಜಯಪುರ: ಬೇಸಿಗೆಯ ರಜೆ ಮುಗಿದು ಶೈಕ್ಷಣಿಕ ವರ್ಷ ಆರಂಭಗೊಂಡ ಬಳಿಕವೂ; ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆಗೆ ಬಳಸಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಶೈಕ್ಷಣಿಕ ವರ್ಷದ ವೇಳಾಪಟ್ಟಿಯಂತೆ ಇದೀಗ ಶಾಲೆ ಆರಂಭವಾಗಿವೆ. ಮಕ್ಕಳಿಗೆ ಕಲಿಸುವ ಜತೆಗೆ ದಿನಚರಿ, ಅಂದಾಜು ಪತ್ರಿಕೆ, ವಾರ್ಷಿಕ ಕ್ರಿಯಾ ಯೋಜನೆ, ಸೇತು ಬಂಧ... ಹೀಗೆ ಹತ್ತು ಹಲವು ಕೆಲಸ ಕಾರ್ಯಗಳನ್ನು ಮಾಡಬೇಕು. ಇಂತಹ ನಸನ್ನಿವೇಶದಲ್ಲಿ ಒಂದೇ ಶಾಲೆಯ ಏಳು ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ ನಿಯೋಜಿಲಾಗಿದೆ.

‘ನಗರ ವ್ಯಾಪ್ತಿಯಲ್ಲಿ ಮತದಾರರ ಮಾಹಿತಿ ಕಲೆ ಹಾಕಲು ನಮ್ಮ ಶಾಲೆಯ ಒಂಬತ್ತು ಶಿಕ್ಷಕರ ಪೈಕಿ, ಏಳು ಶಿಕ್ಷಕರನ್ನು ಬಿಎಲ್‌ಒಗಳನ್ನಾಗಿ ನಿಯೋಜನೆ ಮಾಡಿದ್ದಾರೆ. ಇದು ಮಕ್ಕಳ ಕಲಿಕೆಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ನಮಗೆ ಗೊತ್ತಿರುವಂತೆ ಬಹುತೇಕ ಶಾಲೆಗಳಲ್ಲಿ ಒಬ್ಬರೂ ಶಿಕ್ಷಕರನ್ನು ನೇಮಿಸಿಲ್ಲ. ಪ್ರತಿ ಶಾಲೆಯ ಒಂದಿಷ್ಟು ಶಿಕ್ಷಕರನ್ನು ಬಳಸಿಕೊಂಡರೆ ಒಳ್ಳೆಯದು’ ಎಂದು ನಗರದ ನಮ್ಮ ಸರ್ಕಾರಿ ಮಾದರಿಯ ಕನ್ನಡ ಗಂಡು ಮಕ್ಕಳ ಶಾಲೆ ನಂಬರ್‌ 5ರ ಮುಖ್ಯ ಶಿಕ್ಷ ಪಿ.ಎಲ್.ಹಂಚಿನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮುಂಬರುವ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ವಾರ್ಡ್‌ ವಿಂಗಡಿಸುತ್ತಿರುವ ಹಿನ್ನೆಲೆ, ವಾರ್ಡ್‌ ನಂಬರ್‌ 9, 10ರ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿರುವವರು, ಸದ್ಯ ಯಾವ ಪ್ರದೇಶದಲ್ಲಿ ವಾಸಿಸುತ್ತಾರೆ ಎಂಬುವ ವರದಿ ಸಂಗ್ರಹಿಸಿ ಮೇ 31ರೊಳಗಾಗಿ ಸಲ್ಲಿಸಲು ಸೂಚಿಸಿದೆ. ಈ ಕೆಲಸದೊಂದಿಗೆ ಮಕ್ಕಳಿಗೆ ಕಲಿಸಲು ತುಂಬಾ ಕಷ್ಟವಾಗುತ್ತದೆ’ ಎಂದು ಸರ್ವೆಗೆ ನಿಯೋಜನೆಗೊಂಡ ಶಿಕ್ಷಕ ಬಿ.ಎ.ಪಾಟೀಲ ತಿಳಿಸಿದರು.

ನಿರಂತರ ಕಾರ್ಯ: ‘ಚುನಾವಣಾ ಸಮಯದಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದಲ್ಲದೆ, ವರ್ಷ ಪೂರ್ತಿ ಗ್ರಾಮದ ಜನಸಂಖ್ಯೆಯ ಆಧಾರದ ಮೇಲೆ ಬಿಎಲ್‌ಒಗಳನ್ನು ನೇಮಿಸಿ, ಮತದಾರರ ಪಟ್ಟಿಗೆ ಹೊಸ ಸೇರ್ಪಡೆ, ಮೃತಪಟ್ಟವರ ಹೆಸರು ತೆಗೆಯುವುದು, ವರ್ಗಾವಣೆ ಮಾಡುವ ಕೆಲಸ ಮಾಡುತ್ತಾರೆ. ಮತದಾರರ ಪಟ್ಟಿ ಪರಿಷ್ಕರಣೆ ಸಭೆಗೆ ಆಗಾಗ ಹೋಗಬೇಕು. ಈ ಕೆಲಸಕ್ಕೆ ಶಾಲೆಯಲ್ಲಿರುವ ಮೂವರು ಶಿಕ್ಷಕರಲ್ಲಿ ಇಬ್ಬರನ್ನು ನೇಮಿಸಲಾಗಿದೆ. ಇದರಿಂದ ಮಕ್ಕಳಿಗೆ ಕಲಿಸಲು ತುಂಬಾ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ನಾಲತವಾಡ ದೇಶಮುಖ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಮಹಾಂತೇಶ.

**
ಶಿಕ್ಷಕರನ್ನು ನಿಯೋಜಿಸಿರುವುದು ಗಮನಕ್ಕೆ ಬಂದಿಲ್ಲ. ಮಕ್ಕಳ ಕಲಿಕೆಗೆ ತೊಂದರೆಯಾಗುವಂತೆ ಒಂದೇ ಶಾಲೆಯ ಶಿಕ್ಷಕರನ್ನು ಬಳಸಿ<br/>ಕೊಳ್ಳುವುದು ಸರಿಯಲ್ಲ. ವಿಚಾರಿಸುವೆ
ಎಸ್‌.ಎಂ.ನದಾಫ್‌, ನಗರ ಕ್ಷೇತ್ರ ಶಿಕ್ಷಣಾಧಿಕಾರಿ, ವಿಜಯಪುರ 

ಬಾಬುಗೌಡ ರೋಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.