ADVERTISEMENT

ಜನವರಿ ಅಂತ್ಯಕ್ಕೆ ಕಾಯಕಲ್ಪ

ಕೃಷಿ ಮಾರುಕಟ್ಟೆ ನಿಯಮಾವಳಿ: ಸಚಿವ ಬೆಳ್ಳುಬ್ಬಿ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 9:04 IST
Last Updated 27 ಡಿಸೆಂಬರ್ 2012, 9:04 IST

ವಿಜಾಪುರ: `ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಪಾರದರ್ಶಕ ನೀತಿ- ನೆರವು ಒದಗಿಸಲು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದೆ. ಕೃಷಿ ಮಾರುಕಟ್ಟೆ ನಿಯಮಾವಳಿಗೆ ಜನವರಿ ಅಂತ್ಯಕ್ಕೆ ಕಾಯಕಲ್ಪ ನೀಡಲಾಗುವುದು' ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಸಹಾಯಧನದಲ್ಲಿ ತೋಟಗಾರಿಕಾ ಬೆಳೆಗಳ ವಹಿವಾಟಿಗಾಗಿ ನಗರದಲ್ಲಿ ನಿರ್ಮಿಸಿರುವ ಆನ್‌ಲೈನ್ ವಹಿವಾಟು ವಾಣಿಜ್ಯ ಸಂಕೀರ್ಣವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಷ್ಟ್ರಮಟ್ಟದಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಹೊಸ ರೂಪ ನೀಡಲು, ರಾಷ್ಟ್ರದ ವಿವಿಧ ರಾಜ್ಯಗಳ ಕೃಷಿ ಮಾರುಕಟ್ಟೆ ಸಚಿವರ ಎಂಟು ಸಭೆಗಳನ್ನು ಈಗಾಗಲೇ ನಡೆಸಲಾಗಿದೆ.

9ನೇ ಹಾಗೂ ಅಂತಿಮ ಸಭೆ ಜನವರಿಯಲ್ಲಿ ಜರುಗಲಿದೆ. ಇಡೀ ರಾಷ್ಟ್ರದ ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಏಕರೂಪ ನಿಯಮಾವಳಿ, ರೈತರಿಗೆ ಅನುಕೂಲವಾಗುವ ಮಾರುಕಟ್ಟೆ ವ್ಯವಸ್ಥೆ, ವೈಜ್ಞಾನಿಕ ಬೆಲೆ ನಿಗದಿ, ಪರಸ್ಪರ ನೆರವು, ಸಹಕಾರ, ತತ್ವದ ಮೇಲೆ ಹೊಸ ನಿಯಮಾ ವಳಿಗಳನ್ನು ಅಂತಿಮಗೊಳಿಸಿ ಪ್ರಧಾನ ಮಂತ್ರಿಗಳ ಒಪ್ಪಿಗೆಯ ಮೇರೆಗೆ ಜಾರಿಗೊಳಿಸಲು ಸಮಿತಿ ನಿರ್ಧರಿಸಿದೆ. ಇದರಿಂದ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಾರುಕಟ್ಟೆ, ವೈಜ್ಞಾನಿಕ ಬೆಲೆ, ತಾಂತ್ರಿಕ ನೆರವು ನಮ್ಮ ರೈತರಿಗೆ ದೊರಕಲಿದೆ ಎಂದು ಹೇಳಿದರು.

ವಿಜಾಪುರದಲ್ಲಿ ರಾಜ್ಯದಲ್ಲೇ ಮೊಟ್ಟಮೊದಲ ಆನ್‌ಲೈನ್ ವಹಿವಾಟು ಕೇಂದ್ರ ಆರಂಭಿಸಲಾಗಿದೆ. ಇದರಿಂದ ದ್ರಾಕ್ಷಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆ ಹಾಗೂ ಸ್ಪರ್ಧಾತ್ಮಕ ಬೆಲೆ ರೈತರಿಗೆ ದೊರಕಲಿದೆ. ರಾಜ್ಯದ ಇತರೆಡೆಯೂ ಇಂತಹ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.

ಸೆಸ್ ಕಡಿತ : ದ್ರಾಕ್ಷಿ ಬೆಳೆಗಾರರ ಬೇಡಿಕೆಯಂತೆ ಮಹಾ ರಾಷ್ಟ್ರ ಮಾದರಿಯಲ್ಲಿ ಕರ್ನಾಟಕದ ದ್ರಾಕ್ಷಿ ಬೆಳೆಗಾರರಿಗೆ ಸೆಸ್‌ನಿಂದ ರಿಯಾಯಿತಿ ನೀಡುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಈ ಕುರಿತಂತೆ ಘೋಷಣೆ ಮಾಡಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ನಾಂದ್ರೇಕರ್ ಮಾತನಾಡಿ, ಕರ್ನಾಟಕ ಸರ್ಕಾರ ದ್ರಾಕ್ಷಿ ವಹಿವಾಟಿನ ಮೇಲಿದ್ದ ಶೇ.14 ತೆರಿಗೆಯನ್ನು ಶೇ.2ಕ್ಕೆ ಕಡಿವೆು ಮಾಡಿದೆ.

ಮಹಾರಾಷ್ಟ್ರ ಮಾದರಿಯಲ್ಲಿ ಪೂರ್ಣ ತೆರಿಗೆ ವಿನಾಯಿತಿ ಮಾಡಿದರೆ ರೈತರು ಸ್ಥಳೀಯವಾಗಿಯೇ ದ್ರಾಕ್ಷಿಯನ್ನು ಮಾರಾಟ ಮಾಡುತ್ತಾರೆ. ಇದರಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ರೂ.200 ಕೋಟಿ ಲಾಭಾಂಶ ಬರುತ್ತದೆ. ಇಲ್ಲವಾದರೆ ನಮ್ಮ ರಾಜ್ಯದ ದ್ರಾಕ್ಷಿ ಬೆಳೆ ಹೊರ ರಾಜ್ಯಗಳ ಮಾರುಕಟ್ಟೆಗೆ ಹೋಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠ್ಠಲ ಕಟಕಧೋಂಡ, ದ್ರಾಕ್ಷಿ ಮೇಲಿನ ಮಾರಾಟ ತೆರಿಗೆಯನ್ನು  ರದ್ದುಪಡಿಸುವ ಕುರಿತಂತೆ ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವುದಾಗಿ ಹೇಳಿದರು.

ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಪಿಎಂಸಿ ಅಧ್ಯಕ್ಷ ಅಶೋಕ ಕೆ. ಪಾಟೀಲ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಎಪಿಎಂಸಿ ಮಾಜಿ ಅಧ್ಯಕ್ಷ ಕೋರಡ್ಡಿ,  ಸದಸ್ಯರು ಉಪಸ್ಥಿತರಿದ್ದರು. ಎಪಿಎಂಸಿ ಉಪಾಧ್ಯಕ್ಷ ಅರ್ಜುನ ರಾಠೋಡ ಸ್ವಾಗತಿಸಿದರು. ಕಾರ್ಯದರ್ಶಿ ಆರ್.ಎಂ. ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT