ವಿಜಾಪುರ: `ಗ್ರಾಮೀಣ ರೋಜಗಾರ ಯೋಜನೆಯಡಿ ಇಲ್ಲಿಯವರೆಗೆ ರೂ.2.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಜನರು ಇಲ್ಲಿಯವರೆಗೆ ಯಾರೂ ಗುಳೆ ಹೋಗಿರುವುದು ಕಂಡು ಬಂದಿಲ್ಲ~ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.
ಮಂಗಳವಾರ ನಡೆದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಜಿಲ್ಲಾಧಿಕಾರಿಗಳು ಈ ಮಾಹಿತಿ ನೀಡಿದರು!
ಸೋಮವಾರದಿಂದ ಜಾರಿಯಾಗಿರುವ ಸಕಾಲ ಯೋಜನೆಯಡಿ 258 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 37 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಕಾಲ ಯೋಜನೆಯನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ 52 ಕೆರೆಗಳ ಹೂಳೆತ್ತುವ ಕಾರ್ಯಕ್ರಮ ಜಾರಿಯಲ್ಲಿದ್ದು, ಶೇ.99ರಷ್ಟು ಕಾಮಗಾರಿ ಮುಗಿದಿದೆ. ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತು ಯಾವುದೇ ಹಣದ ಕೊರತೆಯಿಲ್ಲ ಎಂದು ಹೇಳಿದರು.
ಜಿಲ್ಲೆಯ 62 ಗ್ರಾಮಗಳ 100 ಜನವಸತಿ ಪ್ರದೇಶಗಳಲ್ಲಿ 130 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ 508.9 ಮೀಟರ್‌ನಷ್ಟಿದ್ದು ಮೇ ಅಂತ್ಯದವರೆಗೆ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.
ಜಿ.ಪಂ. ಸಿಇಒ ಎ.ಎನ್. ಪಾಟೀಲ, ಉಪ ವಿಭಾಗಾಧಿಕಾರಿ ಸುರೇಶ ಜಿರಲಿ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ವಿಶ್ವ ಜಲ ದಿನಾಚರಣೆ: ವಿಜಾಪುರದ ಡಾ. ರಾಜೇಂದ್ರ ಪ್ರಸಾದ ಪ್ರಾಥಮಿಕ ಶಾಲೆಯಲ್ಲಿ ಸ್ಪಂದನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ವಿಶ್ವ ಜಲ ದಿನ ಆಚರಿಸಲಾಯಿತು.
ಎಸ್.ಎಂ. ಗೌರಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಈರಮ್ಮ ಮದರಿ, ಸ್ಪಂದನ ಸಂಸ್ಥೆಯ ಅಧ್ಯಕ್ಷೆ ಮಹಾದೇವಿ ಗೋಕಾಕ ಮುಖ್ಯ ಅತಿಥಿಯಾಗಿದ್ದರು. ನಿವೃತ್ತ ಶಿಕ್ಷಕ ಯಡಹಳ್ಳಿ, ರಾಧಾ ಶಿವಾಳೆ, ಗೋದಾಬಾಯಿ ನಲವಡೆ, ಸುಜಾತಾ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆ ಉಪನ್ಯಾಸ: ವಿಜಾಪುರದ ಎಂ.ಆರ್. ಪ್ರೌಢ ಶಾಲೆಯಲ್ಲಿ ಡಾ. ಸಿ.ವಿ. ರಾಮನ್ ಇಕೋ ಕ್ಲಬ್ ಅಡಿಯಲ್ಲಿ ಇತ್ತೀಚೆಗೆ ಪರಿಸರ ಸಂರಕ್ಷಣೆಗಾಗಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿ ತುಕಾರಾಮ ಚಂಚಲಕರ, ಎಸ್.ಆರ್. ಭೂಸರೆಡ್ಡಿ, ಮುಖ್ಯಾಧ್ಯಾಪಕ ಡಿ.ಎಂ. ಸೈಯ್ಯದ, ವಿಜ್ಞಾನ ಶಿಕ್ಷಕ ಎನ್.ಎಸ್. ಸೌದಾಗರ, ಜೆ.ಜೆ. ಅಂಜುಟಗಿ, ಪಿ.ಎಚ್. ನಾಯಕ, ವಿ.ಆರ್. ಪಟ್ಟಣ, ಆರ್.ಬಿ. ಕಾಖಂಡಕಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.