ADVERTISEMENT

ಜಲಾಶಯ ಎತ್ತರ ಹೆಚ್ಚಳಕ್ಕೆ ಅಪಸ್ವರ ಬೇಡ

ಯರನಾಳ ಸ್ವಾಮೀಜಿ, ಕೃಷ್ಣ ಕೊಲ್ಹಾರಕುಲಕರ್ಣಿ ಮನವಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:23 IST
Last Updated 6 ಜನವರಿ 2014, 5:23 IST

ವಿಜಾಪುರ: ‘ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಕುರಿತು ಅಪಸ್ವರ ಎತ್ತುವುದು ಸರಿಯಲ್ಲ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿ 130 ಟಿಎಂಸಿ ಅಡಿ ನೀರು ಸಂಗ್ರಹಿಸಿಕೊಳ್ಳದಿದ್ದರೆ ವಿಜಾಪುರ ಜಿಲ್ಲೆಯ ಯಾವೊಂದು ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲು ಸಾಧ್ಯವಿಲ್ಲ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಯಾರೂ ಇಂತಹ ಹೇಳಿಕೆ ನೀಡಬಾರದು’ ಎಂದು ನೀರಾವರಿ ತಜ್ಞ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ, ಅವಳಿ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಪ್ರಮುಖರಾದ ಯರನಾಳದ ಗುರು ಸಂಗನಬಸವ ಸ್ವಾಮೀಜಿ ಹೇಳಿದರು.

‘ರಾಜ್ಯ ಸರ್ಕಾರ ಕೃಷ್ಣಾ ಎರಡನೆಯ ನ್ಯಾಯಮಂಡಳಿಯ ತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಲಭ್ಯವಾಗಿರುವ ನೀರಿನ ತ್ವರಿತ ಬಳಕೆಗಾಗಿ ತಕ್ಷಣವೇ ಕಾಮಗಾರಿ ಆರಂಭಿಸಬೇಕು. ನಮ್ಮ ರಾಜ್ಯಕ್ಕೆ ಮಾರಕವಾಗಿರುವ ಅಂಶಗಳ ಕುರಿತು ಸುಪ್ರೀಂ ಕೋರ್ಟ್‌ ಮೊರೆ ಹೋಗಿ ನ್ಯಾಯ ಪಡೆಯಬೇಕು’ ಎಂದು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿಯೇ ಹೋರಾಟ ಸಮಿತಿ ಇದೆ. ಈ ಸಮಿತಿಯೊಂದಿಗೆ ಚರ್ಚಿಸದೇ ಯಾರೂ ಹೇಳಿಕೆ ನೀಡಬಾರದು. ರಾಜ್ಯ ಸರ್ಕಾರ ತಕ್ಷಣವೇ ಅವಳಿ ಜಿಲ್ಲೆಯ ನೀರಾವರಿ ಹೋರಾಟ ಸಮಿತಿಯ ಸಭೆ ಕರೆದು ತಪ್ಪು ಅಭಿಪ್ರಾಯಗಳನ್ನು ನಿವಾರಿಸಬೇಕು’ ಎಂದು ಯರನಾಳ ಸ್ವಾಮೀಜಿ ಸಲಹೆ ನೀಡಿದರು.

‘ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ತೀವ್ರ ವಿರೋಧದ ನಡುವೆಯೂ ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಎತ್ತರಿಸಲು ಅನುಮತಿ ನೀಡಲಾಗಿದೆ. 130 ಟಿಎಂಸಿ ಅಡಿ ಹೆಚ್ಚುವರಿ ನೀರು ಹಂಚಿಕೆ ಮಾಡಿ ಯುಕೆಪಿ–3ನೇ ಹಂತದ ಯೋಜನೆ ಕಾರ್ಯಗತಗೊಳಿಸಲು ಅನುಮೋದನೆ ನೀಡಿದೆ. ತುಂಗಭದ್ರಾ ಉಪ ಕಣಿವೆಯ ತುಂಗಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಮತ್ತು ಸಿಂಗಟಾಲೂರ ಯೋಜನೆಗಳಿಗೆ ಒಟ್ಟಾರೆ ಹೆಚ್ಚುವರಿಯಾಗಿ 36 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ನ್ಯಾಯಮಂಡಳಿಯ ತೀರ್ಪಿನ ಅತ್ಯಂತ ಮಹತ್ವದ ಅಂಶಗಳಿವು’ ಎಂದು ಕುಲಕರ್ಣಿ ಹೇಳಿದರು.

‘ಬಚಾವತ್‌ ನ್ಯಾಯಮಂಡಳಿಯು ಕೃಷ್ಣಾ ಕೊಳ್ಳದಲ್ಲಿ ರಾಜ್ಯಕ್ಕೆ 734 ಟಿಎಂಸಿ ಅಡಿ ನೀರನ್ನು ಹಂಚುವಾಗ, ಅದನ್ನು ಬಳಸಿಕೊಳ್ಳಲು ಯಾವ ನಿರ್ಬಂಧ ಹೇರಿಲ್ಲ. ಅದರಲ್ಲಿ 173 ಟಿಎಂಸಿ ಅಡಿ ನೀರು ಆಲಮಟ್ಟಿಯಲ್ಲಿ ಈಗಾಗಲೇ ಸಂಗ್ರಹವಾಗುತ್ತಿದೆ. ಅದನ್ನು ಈ ಮೊದಲು ರೂಪಿಸಿರುವ ಯೋಜನೆಗಳ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹೊಸ ತೀರ್ಪಿನಂತೆ ಮತ್ತೆ 130 ಟಿಎಂಸಿ ಅಡಿ ನೀರು ಬಂದು ಸೇರಿಕೊಳ್ಳುತ್ತದೆ. ನಿರ್ಬಂಧ ಇಲ್ಲದ 173 ಟಿಎಂಸಿ ನೀರಿನಲ್ಲಿ ವಿಜಾಪುರ ಜಿಲ್ಲೆಯ 7 ಲಕ್ಷ ಎಕರೆ ಜಮೀನಿಗೆ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಸಬಹುದು’ ಎಂದರು.

‘ನದಿಗಳಲ್ಲಿ ನೈಸರ್ಗಿಕ ಹರಿವನ್ನು ಕಾಪಾಡಿಕೊಳ್ಳುವಲ್ಲಿ ನೀಡಿದ ತೀರ್ಪು ಅವೈಜ್ಞಾನಿಕವಾಗಿಲ್ಲ. ರಾಜ್ಯಕ್ಕೆ ಹಂಚಿದ 7 ಟಿಎಂಸಿ ಅಡಿ ಹೆಚ್ಚುವರಿ ನೀರಿನಲ್ಲಿ ರಾಜ್ಯದಲ್ಲಿ ಹರಿಯುವ ನದಿಗಳ ಹರಿವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೇ ವಹಿಸಿದ್ದು ಔಚಿತ್ಯಪೂರ್ಣ’ ಎಂದು ಹೇಳಿದರು.

‘ಶತಮಾನಗಳಿಂದ ನೀರಾವರಿ ಸೌಲಭ್ಯ ವಂಚಿತ ವಿಜಾಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಇದೀಗ ಅವಕಾಶ ದೊರೆತಿದೆ. ಸಂಕುಚಿತ ಭಾವನೆಯಿಂದ ಅದನ್ನು ತಡೆದರೆ ಅದರ ಬಹುದೊಡ್ಡ ಲಾಭ ಆಗುವುದು ಆಂಧ್ರಪ್ರದೇಶಕ್ಕೆ’ ಎಂದು ಎಚ್ಚರಿಸಿದರು.

‘ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಯುಕೆಪಿ–3 ಯೋಜನೆಗಳಿಗೆ ರೂ.30,000 ಕೋಟಿ ಬೇಕು. ಈ ವರ್ಷ ಕೊಟ್ಟಿರುವುದು ಕೇವಲ ರೂ.4,000 ಕೋಟಿ. ಹೆಚ್ಚಿನ ಹಣ ನೀಡಿ ಕಾಮಗಾರಿ ಮುಗಿಸಬೇಕು’ ಎಂದು ಕುಲಕರ್ಣಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.