ADVERTISEMENT

ಜಾಮಿಯಾ ಮಸೀದಿಗೆ ಬಂತು ಹೊಸ ಕಳೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 4:36 IST
Last Updated 8 ಜುಲೈ 2013, 4:36 IST

ವಿಜಾಪುರ: ಮುಖ್ಯ ಗೋಪುರದಲ್ಲಿ ಕಾಣಿಸಿಕೊಂಡಿದ್ದ ಬಿರುಕಿನಿಂದ ಆತಂಕ ಸೃಷ್ಟಿಸಿದ್ದ ಇಲ್ಲಿಯ ಇತಿಹಾಸ ಪ್ರಸಿದ್ಧ ಜಾಮಿಯಾ ಮಸೀದಿ ಈಗ ಹೊಸ ಕಳೆಯೊಂದಿಗೆ ಕಂಗೊಳಿಸುತ್ತಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಎಂಜಿನಿಯರರು, ಬಿರುಕು ಬಿಟ್ಟಿದ್ದ ಸ್ಥಳ ಪರಿಶೀಲಿಸಿ  `ಗೋಪುರದಲ್ಲಿ ಬಿಟ್ಟಿದ್ದು ಬಿರುಕು ಅಲ್ಲ; ಅದು ಗೊರಲೆ ಹುಳುವಿನ ಕಿತಾಪತಿ' ಎಂದು ಹೇಳಿದ ನಂತರ ಸಾರ್ವಜನಿಕರು ಮತ್ತು ಅಲ್ಲಿ ನಿತ್ಯ ಪ್ರಾರ್ಥನೆ ಸಲ್ಲಿಸುವ ಮುಸ್ಲಿಂ ಬಾಂಧವರಲ್ಲಿ ಉಂಟಾಗಿದ್ದ ಆತಂಕ ನಿವಾರಣೆಯಾಗಿದೆ.

ವಿಜಾಪುರದ ಅರಸ ಒಂದನೆಯ ಅಲಿ ಆದಿಲ್‌ಶಾಹಿ (1576ರಲ್ಲಿ) ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಮಸೀದಿ, 1.16 ಲಕ್ಷ ಚದುರ ಅಡಿ ವಿಸ್ತಾರವಾಗಿದೆ. 10 ಸಾವಿರಕ್ಕಿಂತ ಅಧಿಕ ಜನ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಷ್ಟು ಸ್ಥಳಾವಕಾಶ ಹೊಂದಿದೆ. ನಗರದ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿರುವ ಜಾಮಿಯಾ ಮಸೀದಿಯನ್ನು ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ.

ಮುಖ್ಯ ಗೋಪುರದಲ್ಲಿ ಬಿರುಕು ಬಿಟ್ಟಿದ್ದರಿಂದ `ಈ ಕಟ್ಟಡ ಬೀಳುವ ಸಂಭವ ಇದೆ' ಎಂಬ ಎಚ್ಚರಿಕೆಯ ಫಲಕವನ್ನೂ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯವರು ಅಲ್ಲಿ ಹಾಕಿದ್ದರು. `ಪ್ರಜಾವಾಣಿ'ಯಲ್ಲಿ ಜನವರಿ 16 ರಂದು ಪ್ರಕಟವಾಗಿದ್ದ ವರದಿ ಆಧರಿಸಿ, ತುಮಕೂರಿನ ಓದುಗರೊಬ್ಬರು ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದರು. ಈ ಸ್ಮಾರಕದ ಸುರಕ್ಷತೆಯ ವರದಿ ನೀಡುವಂತೆ ಮಾನವ ಹಕ್ಕುಗಳ ಆಯೋಗ ಸೂಚನೆ ನೀಡಿತ್ತು.

ಸವಾಲು: ಈ ಗೋಪುರದ ಒಳಭಾಗ 100 ಅಡಿ ಎತ್ತರವಿದೆ. ಅದನ್ನು ತಲುಪುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ರಮ್ಜಾನ್ ಹಬ್ಬದ ಒಳಗಾಗಿ ರಿಪೇರಿ ಮಾಡುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರು.

`25 ಜನ ಕಾರ್ಮಿಕರು 20 ದಿನಗಳ ಕಾಲ ನಿರಂತರವಾಗಿ ಕಬ್ಬಿಣದ ಪೈಪ್‌ಗಳಿಂದ ಮಂಪಟ ನಿರ್ಮಿಸಿದರು. ಮಂಟಪ ನಿರ್ಮಾಣವಾದ ನಂತರ ನಮ್ಮ ಇಲಾಖೆಯ ಧಾರವಾಡದ ಎಂಜಿನಿಯರ್ ಬಂದು ಪರಿಶೀಲನೆ ನಡೆಸಿದರು. ಸ್ಮಾರಕದ ಗೋಪುರದಲ್ಲಿ ಬಿರುಕು ಬಿಟ್ಟಿಲ್ಲ. ಅಲ್ಲಿ ಗೊರಲೆ ಹುಳು ಮನೆ ಮಾಡಿದೆ ಎಂಬುದು ಖಚಿತವಾಯಿತು. ಆ ಮೂಲಕ ನಮ್ಮಲ್ಲಿಯ ಆತಂಕವೂ ದೂರವಾಯಿತು' ಎನ್ನುತ್ತಾರೆ  ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ಆನಂದತೀರ್ಥ.

`ಧಾರವಾಡ ವಲಯದ ಪುರಾತತ್ವ ಅಧೀಕ್ಷಕ ಜಿ.ಎಸ್. ನರಸಿಂಹನ್ ಅವರೂ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಸಮಿತಿಯವರಿಗೂ ಈ ಕುರಿತು ಮನವರಿಕೆ ಮಾಡಿಕೊಟ್ಟು, ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಯಿತು. ಆ ನಂತರ ಸುಣ್ಣ-ಬಣ್ಣ ಬಳಿಯಲಾಯಿತು' ಎಂದು ಅವರು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.