ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ 350 ಡಯಾಲಿಸಿಸ್!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 3:15 IST
Last Updated 19 ಮಾರ್ಚ್ 2012, 3:15 IST
ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ 350 ಡಯಾಲಿಸಿಸ್!
ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ 350 ಡಯಾಲಿಸಿಸ್!   

ವಿಜಾಪುರ: ಮನುಷ್ಯರಲ್ಲಿ ಮೂತ್ರ ಕೋಶದ ಸೋಂಕು, ಮೂತ್ರ ಕೋಶ ವೈಫಲ್ಯದ ಪ್ರಕರಣಗಳು ಈಗ ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಕಲುಷಿತ ಹಾಗೂ ರಸಾಯನಿಕಯುಕ್ತ ನೀರು ಸೇವನೆಯಿಂದಾಗಿ ಈ ರೋಗ ಪೀಡಿತರ ಸಂಖ್ಯೆ ವೃದ್ಧಿಸುತ್ತಿದೆ.

ಮೂತ್ರ ಕೋಶ ರೋಗಕ್ಕೆ ತುತ್ತಾದ ವ್ಯಕ್ತಿಯ ಸಂಕಷ್ಟ ಹೇಳತೀರದು. ರಕ್ತದಲ್ಲಿ ಯೂರಿಯಾ (ಬ್ಲಡ್ ಯೂರಿಯಾ) ನಿಯಮಿತವಾಗಿ ಶೇಖರಣೆಯಾಗುತ್ತಿರುತ್ತದೆ. ರಕ್ತವನ್ನು ಸೋಸಿ, ಬ್ಲಡ್ ಯೂರಿಯಾ ಹೊರಹಾಕುವ ಡಯಾಲಿಸಿಸ್‌ನ್ನು ಆ ರೋಗಿ ನಿಯಮಿತವಾಗಿ ಮಾಡಿಸಿಕೊಳ್ಳುವುದು ಅನಿವಾರ್ಯ.

ಈ ರೋಗಕ್ಕೆ ತುತ್ತಾದ ವ್ಯಕ್ತಿ ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಒಮ್ಮೆ ಡಯಾಲಿಸಿಸ್ ಯಂತ್ರದ ಬೆಡ್ ಮೇಲೆ ಮಲಗಿದರೆ ನಾಲ್ಕು ಗಂಟೆಗಳ ಕಾಲ ಆತನ ರಕ್ತದ ಶುದ್ಧೀಕರಣ ಕಾರ್ಯ ಅಲ್ಲಿ ನಡೆಯುತ್ತಿರುತ್ತದೆ.

`ಒಂದು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಲ್ಲಿ 1500ರಿಂದ 2 ಸಾವಿರ ರೂಪಾಯಿ ವರೆಗೆ ಹಣ ತೆರಬೇಕಾಗುತ್ತದೆ. ಒಮ್ಮೆ ಡಯಾಲಿಸಿಸ್ ಆರಂಭವಾದರೆ ಅದಕ್ಕೆ ಅಂತ್ಯ ಎಂಬುದಿಲ್ಲ. ನಿಯಮಿತವಾಗಿ ಅದನ್ನು ಮಾಡಿಸಿಕೊಳ್ಳಲೇಬೇಕು~ ಎನ್ನುತ್ತಾರೆ ರೋಗಿಗಳ ಸಂಬಂಧಿಕರು.

`ಜಿಲ್ಲಾ ಆಸ್ಪತ್ರೆಗೆ ಡಯಾಲಿಸಿಸ್ ಮಾಡಿಸಿಕೊಳ್ಳಲು ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ತಿಂಗಳಿಗೆ ಸರಾಸರಿ 350 ಡಯಾಲಿಸಿಸ್ ಮಾಡಲಾಗುತ್ತಿದೆ. ತರಬೇತಿ ಹೊಂದಿದ ನೆಪ್ರಾಲಾಜಿಸ್ಟ್ ಡಾ.ಪ್ರಕಾಶ್ ಎಂಬ ವೈದ್ಯರನ್ನು ಸಂಪೂರ್ಣವಾಗಿ ಈ ಕೆಲಸಕ್ಕೇ ನಿಯೋಜಿಸಿದ್ದೇವೆ~ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ.ಆರ್.ಎಂ. ಸಜ್ಜನ.
`ನಮ್ಮಲ್ಲಿ ಆರು ಡಯಾಲಿಸಿಸ್ ಘಟಕಗಳಿವೆ. ಬೆಳಿಗ್ಗೆ 6ಗಂಟೆಯಿಂದ ನಾಲ್ಕು ಪಾಳಿಯಲ್ಲಿ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ವಿಜಾಪುರ ಜಿಲ್ಲೆ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರೋಗಿಗಳೂ ಸಹ ಬರುತ್ತಿದ್ದಾರೆ. ಅವರಲ್ಲಿ ಕಡು ಬಡವರೇ ಹೆಚ್ಚು. ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲರಿಗೂ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ. ಈ ರೋಗಿಗಳಿಗೆ ಅಗತ್ಯವಿರುವ ರಕ್ತವನ್ನು ಬೆಂಗಳೂರಿನಿಂದ ತರಿಸಿಕೊಂಡು ದಾಸ್ತಾನ ಮಾಡಿಟ್ಟುಕೊಳ್ಳಲಾಗುತ್ತಿದೆ~ ಎನ್ನುತ್ತಾರೆ ಅವರು.

`ಎಚ್‌ಐವಿ ಹಾಗೂ ಕಾಮಾಲೆ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಡಯಾಲಿಸಿಸ್ ಮಾಡಲು ಪ್ರತ್ಯೇಕ ಘಟಕ ಬೇಕು. ಈಗಿರುವ ಘಟಕಗಳಲ್ಲಿಯೇ ಅವರಿಗೆ ಡಯಾಲಿಸಿಸ್ ಮಾಡಿದರೆ ಅವರ ರೋಗ ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ.
 
ಅದಕ್ಕಾಗಿಯೇ ಪ್ರತ್ಯೇಕ ಘಟಕ ಹಾಗೂ ಪ್ರತ್ಯೇಕ ವಾರ್ಡ್ ಆರಂಭಿಸಲು ನಿರ್ಧರಿಸಿದ್ದು, ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ಅವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಹಣ ನೀಡುವುದಾಗಿ ತಿಳಿಸಿದ್ದಾರೆ. ಸಂಸದರ ನೆರವಿನಲ್ಲಿ ಇನ್ನೆರಡು ಘಟಕ ಖರೀದಿಸುವ ಪ್ರಯತ್ನ ನಡೆದಿದೆ~ ಎಂಬುದು ಅವರ ವಿವರಣೆ.

`ಮೂತ್ರ ಕೋಶದ ವೈಫಲ್ಯಕ್ಕೆ ವಯಸ್ಸಿನ ಮಿತಿ ಇಲ್ಲ. ನಮ್ಮಲ್ಲಿ 22 ವರ್ಷದ ಯುವಕ-ಯುವತಿಯರಿಂದ ಹಿಡಿದು 64 ವರ್ಷದ ವೃದ್ಧರ ವರೆಗೂ ಡಯಾಲಿಸಿಸ್‌ಗೆ ಬರುತ್ತಿದ್ದಾರೆ~ ಎನ್ನುತ್ತಾರೆ ಅಲ್ಲಿಯ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.