ADVERTISEMENT

ಜಿಲ್ಲಾ ಆಡಳಿತ ವೆಬ್‌ಸೈಟ್‌ಗೇ ಮಾಹಿತಿ ಕೊರತೆ!

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 4:49 IST
Last Updated 25 ಜೂನ್ 2013, 4:49 IST

ವಿಜಾಪುರ: `ಜಿಲ್ಲೆಯ ಸಾಕ್ಷರತೆಯ ಪ್ರಮಾಣ ಕೇವಲ ಶೇ 56ರಷ್ಟು, ಅದ ರಲ್ಲೂ ಮಹಿಳಾ ಸಾಕ್ಷರತೆ ಶೇ 39.14ರಷ್ಟು ಮಾತ್ರ'!
ಹೌದು, ಇದನ್ನು ನೀವು ನಂಬಲೇ ಬೇಕು. ಏಕೆಂದರೆ ಜಿಲ್ಲಾ ಆಡಳಿತದ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ತಪ್ಪು ಮಾಹಿತಿ ಇದೆ.

2011ರ ಜನಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 12,57,742. ಅವರಲ್ಲಿ 7,39,873 ಜನ ಪುರುಷರು ಮತ್ತು 5,17,869 ಮಹಿಳೆಯರು ಇದ್ದಾರೆ. ಜಿಲ್ಲೆಯ ಒಟ್ಟು ಸಾಕ್ಷರತೆಯ ಪ್ರಮಾಣ ಶೇ.67.20. ಪುರುಷರ ಸಾಕ್ಷರತೆ ಶೇ.77.41ರಷ್ಟಿದ್ದರೆ, ಮಹಿಳಾ ಸಾಕ್ಷರತೆಯ ಪ್ರಮಾಣ ಶೇ.56.54ರಷ್ಟು.

ಜಿಲ್ಲಾ ಆಡಳಿತ ವೆಬ್‌ಸೈಟ್‌ನಲ್ಲಿ ಹಳೆಯ ಅಂಕಿಅಂಶ ಪ್ರಕಟಿಸಿರುವುದನ್ನು ಗಮನಿಸಿದ ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಅಧ್ಯಾಪಕ ರೊಬ್ಬರು `ನೋಡಿ, ಇದು ನಮ್ಮ ಜಿಲ್ಲೆಯ ಮರ್ಯಾದೆ ತೆಗೆಯುವ ಕೆಲಸ' ಎಂದು ದೂರಿದರು.

`ಡಿಡಿಡಿ.ಚಿಜ್ಜಿಟ್ಠ್ಟ.ಚ್ಟ.್ಞಜ್ಚಿ.ಜ್ಞಿ ವೆಬ್‌ಸೈಟ್‌ಗೆ ಲಾಗಿನ್ ಆದರೆ, ಈ ತಪ್ಪು ಮಾಹಿತಿ ಇರುವುದು ಖಚಿತವಾಗುತ್ತದೆ. ಜಿಲ್ಲೆಯ ಸಾಕ್ಷರತೆಯ ಪ್ರಮಾಣ ಶೇ 56ರಷ್ಟಿದ್ದು, ಇದು ರಾಜ್ಯದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ.55ಕ್ಕಿಂತ ಹೆಚ್ಚಿದೆ ಎಂಬ ಉಲ್ಲೇಖವೂ ಕಾಣಸಿಗುತ್ತದೆ' ಎನ್ನುತ್ತಾರೆ ಅವರು.

`ಈ ವೆಬ್‌ಸೈಟ್‌ನ ಶಿಕ್ಷಣ ವಿಭಾಗದಲ್ಲಿ ಈಗಾಗಲೆ ಬಂದ್ ಆಗಿರುವ ಯುನಾನಿ ಕಾಲೇಜಿನ ಉಲ್ಲೇಖವಿದೆ. ಆದರೆ, ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ವಿಶ್ವವಿದ್ಯಾಲಯ, ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಸ್ನಾತಕೋತ್ತರ ಕೇಂದ್ರ, ತೋಟಗಾರಿಕೆ, ಕೃಷಿ ಮತ್ತು ಮೀನು ಗಾರಿಕೆ ವಿವಿಗಳ ಸಂಶೋಧನಾ ಕೇಂದ್ರ ಗಳ ಮಾಹಿತಿಯೇ ಇಲ್ಲ' ಎಂಬುದು ಇನ್ನು ಕೆಲ ವಿದ್ಯಾರ್ಥಿಗಳ ದೂರು.

ಭಾವಚಿತ್ರ: `ಜಿಲ್ಲಾ ಪಂಚಾಯಿತಿ ವಿವರಗಳಲ್ಲಿ ಸಿಇಒ ಅವರ ಭಾವಚಿತ್ರ ಮಾತ್ರವಿದೆ. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಭಾವಚಿತ್ರ, ಅವರ ಸಂಪರ್ಕ ಸಂಖ್ಯೆ ನೀಡಿಲ್ಲ' ಎಂದು ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು ಅಸಮಾ ಧಾನ ವ್ಯಕ್ತಪಡಿಸಿದರು.

ಸಿಗದ ಬಡ್ತಿ: ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎಸ್.ಆರ್. ಪಾಟೀಲ ಅವರಿಗೆ ಈ ವೆಬ್‌ಸೈಟ್ ಇನ್ನೂ `ಬಡ್ತಿ ಸಿಕ್ಕಿಲ್ಲ' ಶಾಸಕರು- ಸಂಸದರ ಬಗೆಗಿನ ಮಾಹಿತಿಯಲ್ಲಿ ವಿಧಾನಸಭೆ, ಸಂಸತ್ ಭವನದ ಭಾವಚಿತ್ರವಿದೆ. ಆದರೆ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಭಾವಚಿತ್ರ ಇಲ್ಲ. ವಿಧಾನಸಭಾ ಸದಸ್ಯರ ಸಂಪರ್ಕ ಸಂಖ್ಯೆ ಮತ್ತು ವಿಳಾಸ ನೀಡಲಾಗಿದೆ.

ಆದರೆ, ನಾಲ್ವರು ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್. ಪಾಟೀಲ (ಈಗ ಸಚಿವರು), ಜಿ.ಎಸ್. ನ್ಯಾಮಗೌಡ, ಮಹಾಂತೇಶ ಕೌಜಲಗಿ, ಅರುಣ ಶಹಾಪೂರ ಅವರ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಇಲ್ಲ.

`ಪ್ರವಾಸೋದ್ಯಮ ಮಾಹಿತಿಯಲ್ಲಿ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಕ್ಷೇತ್ರದ ಭಾವಚಿತ್ರವಿದೆ. ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ನಿರ್ಮಿಸಿರುವ ಬಸವ ಸ್ಮಾರಕದ     ಉಲ್ಲೇಖವೇ ಇಲ್ಲ'  ಎನ್ನುತ್ತಾರೆ ಪ್ರವಾಸಿಗ ಬಸವರಾಜ್.

`ವೆಬ್‌ಸೈಟ್‌ನಲ್ಲಿ ಕೆಲ ಮಾಹಿತಿ ಹಳೆಯದಾಗಿವೆ. ಅವುಗಳನ್ನು ಪರಿಷ್ಕರಿ ಸಬೇಕಿದೆ' ಎನ್ನುವುದು ನ್ಯಾಷನಲ್ ಇನ್ಫಾರ್ಮೆಷನ್ ಸೆಂಟರ್‌ನ ಸಿಬ್ಬಂದಿ ಯೊಬ್ಬರ ಸಮಜಾಯಿಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.