ADVERTISEMENT

ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆ: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 5:35 IST
Last Updated 4 ಮಾರ್ಚ್ 2014, 5:35 IST

ವಿಜಾಪುರ: ಜಿಲ್ಲೆಯ ಇಂಡಿ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳ ವಿವಿಧೆಡೆ ಸೋಮವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾ ಗಿದೆ. ಇಂಡಿ ತಾಲ್ಲೂಕು ತೆನ್ನೆಳ್ಳಿ ಗ್ರಾಮ ದಲ್ಲಿ ಸಿಡಿಲು ಬಡಿದು ಗೋಪಾಲ ನಾಗಪ್ಪ ಹೂವನಗೋಳ (25) ಎಂಬ ಯುವಕ ಮೃತಪಟ್ಟಿದ್ದಾನೆ.

ಸಂಜೆ ಹೊಲದಲ್ಲಿ ಕಣಕಿ ಸಂಗ್ರಹಿ ಸುತ್ತಿದ್ದಾಗ ಸಿಡಿಲು ಬಡಿದು ಈ ಯುವಕ ಸ್ಥಳದಲ್ಲಿಯೇ ಮೃತಪಟ್ಟಿ ದ್ದಾನೆ.

ಇಂಡಿ ತಾಲ್ಲೂಕಿನ ಬರಡೋಲ, ಭತಗುಣಕಿ, ಚಡಚಣ, ಬಳ್ಳೊಳ್ಳಿ, ಗುಂದವಾನ, ಅಂಜುಟಗಿ, ಝಳಕಿ, ಧೂಳಖೇಡ ಹಾಗೂ ಸುತ್ತಲಿನ ಗ್ರಾಮ ಗಳಲ್ಲಿ ಸೋಮವಾರ ಸಂಜೆ ಆಲಿಕಲ್ಲು ಮಳೆಯಾಗಿದ್ದು, ದ್ರಾಕ್ಷಿ, ಬಿಳಿ ಜೋಳ ಮತ್ತಿತರ ಬೆಳೆ ಸಂಪೂರ್ಣ ಹಾನಿಯಾ ಗಿದೆ.
ಸಿಂದಗಿ ತಾಲ್ಲೂಕಿನ ಆಲಮೇಲದಲ್ಲಿ ಹಾಕಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮಂಟಪ ಮಳೆ–ಗಾಳಿಗೆ ಕಿತ್ತು ಹೋಗಿದೆ. ಆಲಿಕಲ್ಲು ಬಿದ್ದಿದ್ದರಿಂದ ಬರಡೋಲ ಒಂದೇ ಗ್ರಾಮದಲ್ಲಿ ಒಂದು ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ದ್ರಾಕ್ಷಿ ಸಂಪೂರ್ಣ ನೆಲ ಕಚ್ಚಿದೆ.

‘ಬರಡೋಲ, ದೇವರ ನಿಂಬರಗಿ, ಜೇವೂರ ಮತ್ತಿತರೆಡೆ ಒಂದು ಗಂಟೆಗೂ ಹೆಚ್ಚುಕಾಲ ಆಲಿಕಲ್ಲು ಸಹಿತ ಮಳೆ ಯಾಗಿದೆ. ನಮ್ಮೂರಲ್ಲಂತೂ ಆಲಿಕಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿ ಬಿದ್ದು, ನಮ್ಮ 50 ಎಕರೆ ಸೇರಿದಂತೆ ಗ್ರಾಮದಲ್ಲಿ ಸಾವಿರ ಎಕರೆಯಷ್ಟು ಕಟಾವಿಗೆ ಬಂದಿದ್ದ ಅಂದಾಜು ₨10 ಕೋಟಿ ಮೌಲ್ಯದ  ದ್ರಾಕ್ಷಿ ಬೆಳೆ ಹಾನಿ ಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀಶೈಲಗೌಡ ಬಿರಾದಾರ ಹೇಳಿದರು.

‘ದ್ರಾಕ್ಷಿ ಕಟಾವಿಗೆ ಬಂದಿತ್ತು. ಒಣ ದ್ರಾಕ್ಷಿ ತಯಾರಿಸಲು ಸಿದ್ಧತೆ ಮಾಡಿ ಕೊಂಡಿದ್ದೆವು. ಒಂದು ಎಕರೆಗೆ ₨ 3 ಲಕ್ಷ ವರೆಗೆ ಆದಾಯ ಬರುತ್ತಿತ್ತು. ಈಗ ಬೆಳೆದು ನಿಂತ ಬೆಳೆ ಎಲ್ಲವೂ ಹಾನಿ ಯಾಗಿ’ ಎಂದು ಆ ಗ್ರಾಮದ ರೈತರು ಆತಂಕ ವ್ಯಕ್ತಪಡಿಸಿದರು.

‘ಭತಗುಣಗಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲುಗಳು ಬಿದ್ದ ರಭಸಕ್ಕೆ ದ್ರಾಕ್ಷಿ, ಜೋಳದ ಬೆಳೆ ಸಂಪೂರ್ಣ ಹಾಳಾಗಿದೆ. ಈ ಭಾಗದಲ್ಲಿ ಹುಣಸೆ ಮರಗಳಲ್ಲಿಯ ಹುಣಸೆ ಹಣ್ಣುಗಳೂ ಸಹ ಉದುರಿ ಬಿದ್ದಿವೆ’ ಎಂದು ಭತಗುಣಕಿಯ ರೈತರಾದ ದಯಾನಂದ ಕುಂಬಾರ, ಮಲ್ಲಿಕಾ ರ್ಜುನ ನಿಂಗಪ್ಪ ಹಳಕೆ, ಸಾವಳಸಂಗ ಗ್ರಾಮ ಪಂಚಾಯಿತಿ ಸದಸ್ಯ ರಾಜೇಂದ್ರ ಮೋರೆ ಹೇಳಿದರು.

ಪರಿಹಾರಕ್ಕೆ ಕ್ರಮ: ‘ಇಂಡಿ ತಾಲ್ಲೂಕಿ ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಅಲ್ಲಿ ಬೆಳೆದಿರುವ ದ್ರಾಕ್ಷಿ ಬೆಳೆಗೆ ಹಾನಿ ಯಾಗಿದೆ ಎಂಬ ಮಾಹಿತಿ ದೊರೆತಿದೆ. ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ಕಲೆಹಾಕಿ ವರದಿ ನೀಡುವಂತೆ ತೋಟ ಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು’ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಅಧಿಕಾರಿಗಳ ತಂಡದೊಂದಿಗೆ ಸಮೀಕ್ಷೆ ಆರಂಭಿಸಿದ್ದು, ಬರಡೋಲ ಸುತ್ತಲಿನ 15ಕ್ಕೂ ಹೆಚ್ಚು ಗ್ರಾಮ ಗಳಲ್ಲಿಯ ದ್ರಾಕ್ಷಿ ಬೆಳೆ ಹಾನಿಯಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಇನಾಮ ದಾರ ಹೇಳಿದರು.

ತಾಳಿಕೋಟೆ ವರದಿ
‘ಮುತ್ತು ಕಂಡೆನವ್ವ ನಾನೊಂದ...’ ಎಂದು  ಹಾಡಿದ ದಾಸರು ಪಟ್ಟಣದ ಸುತ್ತ ಇಂದು ಮಳೆರಾಯ ಬಿತ್ತಿದ ಮುತ್ತಿನ (ಆಲಿಕಲ್ಲು) ಮಳೆ ಕಂಡು ಉದ್ಗರಿಸಿದರೋ ಎಂದು ಭಾಸವಾಯಿತು.

ಸಮೀಪದ ಕೊಣ್ಣೂರನಿಂದ–ಬಳಗಾ ನೂರವರೆಗೆ 10 ಕಿ.ಮೀ. ಅಧಿಕ ರಸ್ತೆಯ ಎಡ–ಬಲಗಳ ಆ ಕಪ್ಪು ಜಮೀನಿನಲ್ಲಿ ಆಲಿಕಲ್ಲುಗಳು ರಾಶಿರಾಶಿಯಾಗಿ ಸುರಿ ಯುತ್ತಿದ್ದರೆ,  ಸಣ್ಣ–ದೊಡ್ಡ ಆಲಿಕಲ್ಲು ಗಳು ಮುತ್ತುಗಳನ್ನು ರಸ್ತೆ, ಜಮೀನಿ ನೆಲ್ಲೆಡೆ ಚೆಲ್ಲಾಡಿದಂತೆ, ಬಿತ್ತನೆ ಮಾಡಿ ದಂತೆ ಗೋಚರಿಸಿದವು. ನಂತರ ಈ ಭಾಗದಲ್ಲಿ ಭರ್ಜರಿ ಮಳೆಯಾಯಿತು.

ಜಮೀನಿನಲ್ಲಿ ನೀರು ಹರಿದಾಡಿತು. ರಸ್ತೆಯುದ್ದಕ್ಕೂ ಮೋಟಾರ ಸೈಕಲ್‌ ಸವಾರರು ಆಲಿಕಲ್ಲುಗಳ ಹೊಡೆತಕ್ಕೆ ವಾಹನಗಳನ್ನು ರಸ್ತೆಯಲ್ಲಿ ಬಿಟ್ಟು ಆಶ್ರಯ ಪಡೆಯಲು ಓಡಿ ಹೋದರೆ, ಬಸ್‌ಗಿಂತ ಚಿಕ್ಕ ವಾಹನಗಳು ರಸ್ತೆ ಪಕ್ಕದಲ್ಲಿಯೇ ನಿಂತು ಬಿಟ್ಟಿದ್ದವು. ಟ್ರ್ಯಾಕ್ಟರ್‌ನಲ್ಲಿ ಹೊರಟಿದ್ದ ಕೂಲಿ ಕಾರರು ಟ್ರ್ಯಾಕ್ಟರ್‌ ನಿಲ್ಲಿಸಿ ಹಿಂದಿನ ಟ್ರ್ಯಾಲಿಯಡಿ ಆಶ್ರಯ ಪಡೆದು ವಿಶ್ರಮಿಸುತ್ತಿದ್ದುದು ಕಣ್ಣಿಗೆ ಬಿತ್ತು.

ಬಸ್ಸಿನ ಮೇಲೆ ಕಲ್ಲುಗಳ ಸುರಿಮಳೆ ಯಾದಂತೆ ಆಲಿಕಲ್ಲುಗಳು ಬೀಳುತ್ತಿದ್ದರೆ ಬಸ್‌ನಲ್ಲಿದ್ದವರು ಕೆಲವರು ಆತಂಕ ದಲ್ಲಿದ್ದರೆ, ಹೆಚ್ಚಿನವರು ಸೃಷ್ಟಿಯ ಅದ್ಭುತ ಕಂಡು ಸಂತಸದಿಂದ ಬೆರಗಾದರು. ಪೋಟೋ ಕ್ಲಿಕ್ಕಿಸುವವರಿಗೆ ಅವಕಾಶ ಕೊಡದಂತೆ ಚಾಲಕ ವಾಹನ ಓಡಿಸಿದ. ಪಟ್ಟಣದಲ್ಲಿ ಮಾತ್ರ  ಅಲ್ಪ ಮಳೆ ಬಿಟ್ಟರೆ ಆಲಿಕಲ್ಲಿನ  ಭಾಗ್ಯ ಕಾಣಲಿಲ್ಲ.

ರೈತರ ಆತಂಕ: ಬೇಸಿಗೆ ಮಳೆಯ ಅಬ್ಬರಕ್ಕೆ ಜಮೀನುಗಳಲ್ಲಿ ಜೋಳದ ಬೆಳೆಯನ್ನು ಕೊಯ್ದು ಹಾಕಿದವರು, ಕಡಲೆ ರಾಶಿ ಮಾಡಿ ಹೊಟ್ಟನ್ನು ಹೊಲ ದಲ್ಲಿಯೆ ಬಿಟ್ಟ ರೈತರು ಹಾಳಾಗುತ್ತಿದ್ದ ತಮ್ಮ ಬದುಕನ್ನು ಕಂಡು ಚಿಂತೆಗೀಡಾಗಿದ್ದರು.

ಮಧ್ಯಾಹ್ನ ಬಿಸಿಲಿನ ಬಿಸಿ ತಗ್ಗಿ ಸಂಜೆಗೆ ತಂಪು ವಾತಾವರಣ ಉಂಟಾಗಿತ್ತು. ಮೋಡ ಕವಿದ ವಾತಾವರಣ ಮುಂದು ವರೆದಿದ್ದು ರಾತ್ರಿ ಕೂಡ ಮಳೆ ಬರುವ ನಿರೀಕ್ಷೆಯಿದೆ.

ಮುದ್ದೇಬಿಹಾಳ ವರದಿ
ಒಮ್ಮಿಂದೊಮ್ಮೆಲೆ ಸುಮಾರು  ಅರ್ಧ ಗಂಟೆಗಳ ಕಾಲ ಸುರಿದ ಆಲಿ ಕಲ್ಲಿನ ಮಳೆ ಪಟ್ಟಣದ ಇಡೀ ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸಿತು.

ಬಹಳ ವರ್ಷಗಳ ನಂತರ ಆಲಿಕಲ್ಲಿನ ಮಳೆ ಸುರಿದಿದ್ದನ್ನು ನೋಡಿ ಬಹಳಷ್ಟು  ಜನ ಆಸಕ್ತಿಯಿಂದ ಆಲಿಕಲ್ಲುಗಳನ್ನು ಎತ್ತಿಕೊಂಡು ಸಂಗ್ರಹಿಸುವ ಕೆಲಸ ಮಾಡಿದರೆ, ಕೆಲ ಹುಡುಗರು ಅವುಗಳನ್ನೇ ಚೆಂಡಿನಂತೆ ಒಗೆಯುವ, ಹಿಡಿಯುವ ಮೂಲಕ ಆಟವಾಡಿದರು.
ಆಲಿಕಲ್ಲುಗಳು ಎಷ್ಟೊಂದು ದೊಡ್ಡ ವಿದ್ದವೆಂದರೆ ಒಂದೊಂದು ಸುಮಾರು ಅರ್ಧ ಕಿಲೋಗಿಂತಲೂ ದೊಡ್ಡದಾಗಿದ್ದವು. ಕೆಲವರ ಕಾರಿನ ಗ್ಲಾಸುಗಳು, ದ್ವಿಚಕ್ರ ವಾಹನಗಳ ಕನ್ನಡಿ ಒಡೆದರೆ, ನಮ್ಮ ಮನೆ ಮೇಲಿನ ಸೋಲಾರ ಗ್ಲಾಸ್‌ಗಳು ಒಡೆದಿವೆ ಎಂದು ಸುಧೀರ ನಾವದಗಿ ಹೇಳಿದರು.

ಆಲಿಕಲ್ಲಿನ ಮಳೆಯ ದೃಶ್ಯಗಳನ್ನು ಅನೇಕರು ತಮ್ಮ ಮೊಬೈಲ್‌ ಸೆರೆ ಹಿಡಿದರು. ಈ ಅಕಾಲ ಮಳೆಯಿಂದ ಬಹಳಷ್ಟು ಹೊಲಗಳಲ್ಲಿ ಕಿತ್ತು ಜೋಳದ ತೆನೆಗಳು, ಮೇವು ಹಾಳಾಗುತ್ತವೆ ಎಂದು ಇಣಚಗಲ್ಲದ ರೈತ ಗುರಪ್ಪ ಗಂಗನಳ್ಳಿ ಬೇಸರದಿಂದ ಹೇಳಿದರು.

ತಾಲ್ಲೂಕಿನಾದ್ಯಂತ ಆಲಿಕಲ್ಲು ಮಳೆ ಸುರಿದ ಬಗ್ಗೆ ವರದಿಯಾಗಿದ್ದು, ಯಾವುದೇ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ.

ಇಂಡಿ ವರದಿ
ತಾಲ್ಲೂಕಿನ ಭತಗುಣಕಿ ಗ್ರಾಮದಲ್ಲಿ ಸೋಮವಾರ ಬಿದ್ದ ಸಿಡಿಲು ಸಮೇತ ಆಲಿಕಲ್ಲು ಮಳೆಯಿಂದ ದ್ರಾಕ್ಷಿ, ದಾಳಿಂಬೆ, ಗೋಧಿ, ಜೋಳದ ಬೆಳೆಗಳು ಸಂಪೂರ್ಣ ನಾಶ ಹೊಂದಿವೆ.

ವಿಠ್ಠಲ ಅಂಕಲಗಿ ಅವರ ತೋಟದಲ್ಲಿ ಬೆಳೆದಿರುವ ಸುಮಾರು 10 ಎಕರೆ ದ್ರಾಕ್ಷಿ ಬೆಳೆ ಆಲಿಕಲ್ಲು ಮಳೆಯಿಂದ ಒಡೆದು ಹೋಗಿರುವುದಲ್ಲದೇ ನೆಲಕ್ಕು ರುಳಿದೆ.

ಅಂಕಲಗಿ ಅವರು ಭತಗುಣಕಿ ಗ್ರಾಮದಲ್ಲಿರುವ ಕೆವಿಜಿಬಿ ಬ್ಯಾಂಕಿನಿಂದ ₨ 40 ಲಕ್ಷ ಸಾಲ ಪಡೆದುಕೊಂಡು ದ್ರಾಕ್ಷಿ ಬೆಳೆ ಬೆಳೆದಿದ್ದಾರೆ.
ಸುಮಾರು 5 ವರ್ಷಗಳಿಂದ ಬೆಳೆ ಯುತ್ತಿರುವ ದ್ರಾಕ್ಷಿ ಬೆಳೆಯಿಂದ ಕಳೆದ ಎರಡು ವರ್ಷಗಳಲ್ಲಿಯೂ ಸಾಕಷ್ಟು ನಷ್ಟ ಅನುಭವಿಸುತ್ತಲೇ ಬಂದಿದ್ದು, ಅಂತದರಲ್ಲಿಯೇ ₨ 10 ಲಕ್ಷ  ಸಾಲ ಮರುಪಾವತಿಸಿದ್ದಾರೆ.

ಇದಲ್ಲದೇ ಭತಗುಣಕಿ ಗ್ರಾಮ ದಲ್ಲಿರುವ ಶ್ರೀಮಂತ ವಾಲಿಕಾರ, ಸುರೇಶ ಜೇವರ್ಗಿ ಅವರ ದ್ರಾಕ್ಷಿ ಬೆಳೆಗೆ ಹಾನಿಯಾಗಿದ್ದಲ್ಲದೇ ಕೆಲವರ ದಾಳಿಂಬೆ ಬೆಳೆಗಳಿಗೂ ಮತ್ತು ಚಂದ್ರಕಾಂತ ವಿಠ್ಠಲ ನಡಿಗೇರಿ ಅವರ ತೋಟದಲ್ಲಿರುವ 3 ಎಕರೆ ಕಬ್ಬು ನೆಕ್ಕುರುಳಿ ಹಾನಿಯಾದ ಬಗ್ಗೆ ವರದಿಯಾಗಿದೆ.

ಭತಗುಣಕಿ, ಲೋಣಿ, (ಬಿಕೆ) ಅಂಜು ಟಗಿ, ಮೈಲಾರ, ಹಿಂಗಣಿ, ಹಿರೇ ಬೇವನೂರ, ಅಗರಖೇಡ, ಬಳ್ಳೊಳ್ಳಿ, ಗುಂದವಾನ, ಹೋರ್ತಿ ಮುಂತಾದ ಗ್ರಾಮಗಳಲ್ಲಿ ಬಿದ್ದ ಅಕಾಲಿಕ ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ,  ತಾಲ್ಲೂಕಿನ ಹಿರೇ ಬೇವನೂರ ಗ್ರಾಮದ ಜೆಕ್ಕಪ್ಪ ನರಳೆ ಅವರಿಗೆ ಸೇರಿದ ಒಂದು ಹಸು ಸಾವ ನ್ನಪ್ಪಿದೆ.

ಮೆಟಿಗಿ ವಸ್ತಿಯಲ್ಲಿಯ ಪತ್ರಾಸ್‌ ಹಾರಿ ಬಂದು ಹಸುವಿಗೆ ಬಡಿದ ಪರಿಣಾಮ  ಸ್ಥಳದಲ್ಲಿಯೇ ಮೃತಪಟ್ಟಿದೆ. ಈ ಅಕಾಲಿಕ ಮಳೆ ಯಿಂದ ತೋಟಗಾರಿಕಾ ಬೆಳೆಗಳು ಹೆಚ್ಚಿನ ಹಾನಿಗೊಳಗಾಗಿವೆ. ಹಾನಿಗೊಳ ಗಾದ ಬಗ್ಗೆ ಅಂದಾಜಿಸಲು ತೋಟಗಾ ರಿಕಾ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್‌ ಕಲ್ಯಾಣಕರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.