ADVERTISEMENT

ಜೀರಂಕಲಗಿ: ಕುಡಿವ ನೀರಿಗಾಗಿ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 8:10 IST
Last Updated 14 ಫೆಬ್ರುವರಿ 2012, 8:10 IST
ಜೀರಂಕಲಗಿ: ಕುಡಿವ ನೀರಿಗಾಗಿ ಹಾಹಾಕಾರ
ಜೀರಂಕಲಗಿ: ಕುಡಿವ ನೀರಿಗಾಗಿ ಹಾಹಾಕಾರ   

ಚಡಚಣ: ಸಮೀಪದ ಜೀರಂಕಲಗಿ ಗ್ರಾಮದಲ್ಲಿ ಹಲವು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಗೊಂಡಿದ್ದರೂ ಜಿಲ್ಲಾಡಳಿತವಾಗಲಿ, ಗ್ರಾಮ ಪಂಚಾಯಿತಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸರ್ಕಾರ ಜೀರಂಕಲಗಿ ಗ್ರಾಮಕ್ಕೆ ಕುಡಿಯುವ ನೀರಿನ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕರವೇ ಜೀರಂಕಲಗಿ ಘಟಕದವರು ಆಗ್ರಹಿಸಿದ್ದಾರೆ.

ಬೇಸಿಗೆ ಮುಂಚೆಯೇ ಕುಡಿಯುವ ನೀರಿನ ಸಮಸ್ಯೆ ಆರಂಭಗೊಂಡಿದೆ. ಆದರೂ ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಗ್ರಾಮ ಪಂಚಾಯಿತಿ ಮಾತ್ರ ಇದು ತಮಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡತನ ಪ್ರದರ್ಶಿಸುತ್ತಿದೆ ಎಂದು  ಅಧ್ಯಕ್ಷ ಸಂಗಪ್ಪ ಇಂಡಿ, ಕಾರ್ಯದರ್ಶಿಗಳಾದ ಮಹಾದೇವ ಕರ್ಲಮಳ, ಬಸವರಾಜ ನಂದರಗಿ ಹಾಗೂ ಮಹಿಳಾ ಸಮುಖ್ಯ ಘಟಕದ ಅಧ್ಯಕ್ಷೆ ಸಾವಿತ್ರಿ ನಿಂಬರಗಿ ಆರೋಪಿಸಿದ್ದಾರೆ.

ಈ ಕುರಿತು  ಹಲವು ಬಾರಿ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜೀರಂಕಲಗಿ ಗ್ರಾಮದಲ್ಲಿ ವಾಸವಾಗಿರುವ ಜನ ಹನಿ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ.
 
ಇನ್ನು ಅಡವಿ ವಸತಿ ಪ್ರದೇಶಗಳಲ್ಲಿ ವಾಸವಾಗಿರುವ ರೈತರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಜಾನುವಾರುಗಳಿಗೆ ನೀರು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಜನರ ಸಮಸ್ಯೆಗೆ ಸ್ಪಂದಿಸದೇ ಇರುವದು ದುರದೃಷ್ಟಕರ ಎಂದಿದ್ದಾರೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನ ಪ್ರತಿನಿಧಿಗಳು ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ, ಕರವೇ ಕಾರ್ಯಕರ್ತರು, ಗ್ರಾಮಸ್ಥರೊಂದಿಗೆ  ಇಂಡಿ-ಚಡಚಣ ರಾಜ್ಯ ಹೆದ್ದಾರಿ ತಡೆ ನಡೆಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.