ಸಿಂದಗಿ: ಎಲ್ಲ ದಾನಗಳಲ್ಲಿ ರಕ್ತದಾನವೇ ಶ್ರೇಷ್ಠ. ಇದು ಜೀವದಾನಕ್ಕೆ ಸಮಾನ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಸ್.ವಿ. ಹಾವಿನಾಳ ಹೇಳಿದರು.
ಸೋಮವಾರ ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಘಟಕ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ರಕ್ತ ನಿಧಿ ಅಧಿಕಾರಿ ಡಾ. ಸುಮಾ ಮಮದಾಪೂರ, ದೇಶದಲ್ಲಿಂದು 4 ಕೋಟಿ ಯೂನಿಟ್ ರಕ್ತದ ಅಗತ್ಯವಿದೆ. ಆದರೆ ಈಗ ನಮ್ಮಲ್ಲಿ ಸಂಗ್ರಹವಿರುವ ರಕ್ತ ಕೇವಲ 40 ಲಕ್ಷ ಯೂನಿಟ್ ಎಂದು ವಿಷಾದಿಸಿದರು.
ರಕ್ತ ಕೇವಲ ದಾನದಿಂದ ಮಾತ್ರ ದೊರಕುವಂತಹದು. ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ ಯುವಕರು ಸ್ವಯಂಪ್ರೇರಣೆಯಿಂದ ನಿಯಮಿತವಾಗಿ ರಕ್ತದಾನ ಮಾಡಿದರೆ ಒಳ್ಳೆಯದು. ರಕ್ತದಾನದಿಂದ ಜ್ಞಾಪಕ ಶಕ್ತಿ ಮತ್ತು ಕಾರ್ಯ ದಕ್ಷತೆ ವೃದ್ಧಿಸುತ್ತದೆ ಎಂದು ವಿವರಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕದ ಚೇರಮನ್ ಬಿ.ಎಂ.ಬಿರಾದಾರ, ಪಟ್ಟಣದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ ಅಗತ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು. ದಂತ ವೈದ್ಯ ರಮೇಶ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನ್ಮಾನ ಸಮಾರಂಭ: ಇದೇ ಸಂದರ್ಭದಲ್ಲಿ ಮೂರು ಬಾರಿ ರಕ್ತದಾನ ಮಾಡಿರುವ ಕೋರವಾರ ಗ್ರಾ.ಪಂ. ಅಧ್ಯಕ್ಷ ರಮೇಶ ಚವ್ಹಾಣ, ಐದು ಬಾರಿ ರಕ್ತದಾನ ಮಾಡಿದ ಸಾರ್ವಜನಿಕ ಆಸ್ಪತ್ರೆ ಲ್ಯಾಬ್ ಟೆಕ್ನಿಶಿಯನ್ ರಾಜು ನರಗೋದಿ, ಎಸ್.ಐ. ರೊಟ್ಟಿ, ಎಂ.ಡಿ.ಮೋತಿಬಾಯಿ, ಗ್ರಾ.ಪಂ. ಸದಸ್ಯ ಬಸನಗೌಡ ಬಿರಾದಾರ ಅವರನ್ನು ಆರೋಗ್ಯ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಬೆಂಗಳೂರಿನಿಂದ ಸಿಂದಗಿಗೆ ಬಂದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಕ್ತನಿಧಿ ಬಸ್‌ನಲ್ಲಿ ಒಟ್ಟು 40 ಯುವಕರು ರಕ್ತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.