ತಾಳಿಕೋಟೆ: ಸಮೀಪದ ಹಡಗಿನಾಳ ರಸ್ತೆಯಲ್ಲಿನ ಭಾಗಮ್ಮನ ದೇವಸ್ಥಾನದ ಬಳಿಯ ತಿರುವಿನಲ್ಲಿ ಶುಕ್ರವಾರ ಸಂಭವಿಸಿದ ಟ್ರ್ಯಾಕ್ಟರ್ ಅಪಘಾತದಲ್ಲಿ 24 ಮಹಿಳೆಯರು ಗಾಯಗೊಂಡ ಘಟನೆ ವರದಿಯಾಗಿದೆ.
ಬಿಳೇಭಾವಿಯಲ್ಲಿ ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಟ್ರ್ಯಾಕ್ಟರ್ ಟ್ರಾಲಿ ಕೊಂಡಿ ಕಳಚಿದ್ದರಿಂದ ಅಪಘಾತ ಸಂಭವಿಸಿದೆ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳೆಲ್ಲ ಮುದ್ದೇಬಿಹಾಳ ತಾಲ್ಲೂಕಿನ ಕಲದೇವನಹಳ್ಳಿಯವರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಳಿಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಲಕ ನೀರು ಪಾಲು
ಆಲಮಟ್ಟಿ: ಇಲ್ಲಿಯ ಸುಪ್ರಸಿದ್ಧ ಚಂದ್ರಗಿರಿ ಚಂದ್ರಮ್ಮೋ ದೇವಿ ಜಾತ್ರೆಗೆ ಆಗಮಿಸಿದ್ದ ಮುದ್ದೇಬಿಹಾಳದ ಬಾಲಕನೊಬ್ಬ ಕೃಷ್ಣಾ ನದಿ ಪಾಲಾದ ಘಟನೆ ಸಂಭವಿಸಿದೆ.
ಮುದ್ದೇಬಿಹಾಳ ಗ್ರಾಮದ ಮೌನೇಶ ರಾಮಚಂದ್ರ ಬಡಿಗೇರ (10) ಮೃತ ಬಾಲಕ.
ಮೌನೇಶನ ಪಾಲಕರು ಗುರುವಾವೇ ಮುದ್ದೇಬಿಹಾಳಕ್ಕೆ ಹೋಗಿದ್ದರು. ಆಗಲೇ ಆತ ಕಾಣೆಯಾಗಿದ್ದು, ಬೆಳಿಗ್ಗೆ ಶವ ಪತ್ತೆಯಾದಾಗ ವಿಚಾರ ಗೊತ್ತಾಗಿದೆ. ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ: ಇಲ್ಲಿಯ ಚಂದ್ರಗಿರಿ ಚಂದ್ರಮ್ಮೋದೇವಿ ಜಾತ್ರೆಗೆ ಆಗಮಿಸಿದ್ದ ಬಬಲೇಶ್ವರ ಗ್ರಾಮದ ವ್ಯಕ್ತಿಯೊರ್ವ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಆಲಮಟ್ಟಿಯಲ್ಲಿ ಜರುಗಿದೆ.
ಮೃತ ವ್ಯಕ್ತಿಯನ್ನು ವಿಜಾಪುರ ತಾಲ್ಲೂಕಿನ ಬಬಲೇಶ್ವರ ಗ್ರಾಮದ ರಾನಪ್ಪ ಮಾನಕಪ್ಪ ಹೊಸಮನಿ (40) ಎಂದು ಗುರುತಿಸಲಾಗಿದೆ.ಆಲಮಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದಲ್ಲಿ ಸಾವು
ವಿಜಾಪುರ: ತಾಲ್ಲೂಕಿನ ತಿಕೋಟಾ ಹತ್ತಿರ ಟ್ರ್ಯಾಕ್ಟರ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಸವಾರ ಬಾಬಾನಗರ ಗ್ರಾಮದ ಸಂಗಪ್ಪ ಸಿದ್ದಪ್ಪ ಮಾನೆಗೋಳ (25) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.