ADVERTISEMENT

ತೆರೆಯದ ವಸತಿ ನಿಲಯ: ವಿದ್ಯಾರ್ಥಿಗಳಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 6:05 IST
Last Updated 21 ಜೂನ್ 2011, 6:05 IST

ಇಂಡಿ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಹಿಂದುಳಿದ ವರ್ಗಗಳ, ಅಲ್ಪ ಸಂಖ್ಯಾತ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಾಲಕ ಮತ್ತು ಬಾಲಕಿಯರ ಸರಕಾರಿ ವಸತಿ ನಿಲಯಗಳು ತಿಂಗಳು ಕಳೆದರೂ ಆರಂಭವಾಗಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಆಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಗತಿಸಿದೆ. ಪಿಯು ಕಾಲೇಜು, ಪ್ರೌಢ ಶಾಲೆ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಪರ‌್ಯಾಯ ವ್ಯವಸ್ಥೆ ಇಲ್ಲ. ಪ್ರತಿದಿನವೂ ಹಳ್ಳಿಯಿಂದ ಓಡಾಡುವುದು ಕಷ್ಟ ಮತ್ತು ಆರ್ಥಿಕವಾಗಿಯೂ ಹೊರೆಯಾಗಿದೆ ಎಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಕರು ಎಂದು ದೂರಿದ್ದಾರೆ.

ಶಾಲೆಗಳು ಪ್ರಾರಂಭವಾಗಿ 20 ದಿನ ಕಳೆದಿವೆ. ಪಠ್ಯಪುಸ್ತಕಗಳ ವಿತರಣೆಯಾಗಿ, ಪಾಠವೂ ಪ್ರಾರಂಭವಾಗಿವೆ. ವಿದ್ಯಾರ್ಥಿಗಳು ವಸತಿ ನಿಲಯಕ್ಕಾಗಿ ಕಾಯುತ್ತಿದ್ದಾರೆ. ಕೆಲವರು ವಸತಿ ನಿಲಯ ಆರಂಭವಾಗದ ಹಿನ್ನೆಲೆಯಲ್ಲಿ ಶಾಲೆಗೆ ಹೋಗುತ್ತಿಲ್ಲ. ಒಂದು ತಿಂಗಳ ಅಭ್ಯಾವಸವೂ ಆಗಿಲ್ಲ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಸಮಸ್ಯೆಗೆ ಮುಂಚಿತವಾಗಿಯೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ, ನಿರ್ಲಕ್ಷ್ಯ ತೋರಿದ್ದರಿಂದ ಈ ಸಮಸ್ಯೆಯಾಗಿದೆ ಎಂದರು.

ಇಂಡಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತ ಇಲಾಖೆಯಿಂದ 12 ಮೆಟ್ರಿಕ್ ಪೂರ್ವ ವಸತಿ ನಿಲಯಗಳಿವೆ. 667 ವಿದ್ಯಾರ್ಥಿಗಳಿಗೆ  ಪ್ರವೇಶ ಅವಕಾಶವಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ತಾಲ್ಲೂಕಿನಲ್ಲಿ ಎಸ್‌ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ 16 ವಸತಿ ನಿಲಯಗಳಿವೆ. ಆಶ್ರಮ ಶಾಲೆಗೆ 3 ವಸತಿ ನಿಲಯಗಳಿವೆ. ಇವೆಲ್ಲವೂ ಸೇರಿ ಒಟ್ಟು 19 ವಸತಿ ನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು, 1,515 ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕಿದೆ ಎಂಬುದು ಇಲಾಖೆ ಅಧಿಕಾರಿಗಳ ವಿವರಣೆ.

ಶಾಲೆ ಆರಂಭಕ್ಕೆ ಮುನ್ನವೇ ವಸತಿ ನಿಲಯಗಳಿಗೆ ಪ್ರವೇಶ ಪಡೆಯಲಾಗುತ್ತಿತ್ತು. ಇದರಿಂದ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಪ್ರತಿದಿನವೂ ಶಾಲೆಗೆ ಬಂದು ಹೋಗುವುದು ಕಷ್ಟ ಎನಿಸುತ್ತಿರಲ್ಲಿ. ಈ ವರ್ಷ ಯಾವುದೇ ವ್ಯವಸ್ಥೆ ಮಾಡಿಲ್ಲ. ಇದರಿಂದ ಹಳ್ಳಿಯಿಂದ ಬಂದು ಪಾಠ ಕೇಳಿ ವಾಪಸ್ ಹೋಗುವುದಷ್ಟೇ ಕೆಲಸ ಆಗುತ್ತದೆ. ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಲು ಸಹಾಯ ಆಗಲ್ಲ ಎಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ.

ಮುಂದಿನ ಸೋಮವಾರದ ಒಳಗಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭವಿಸಿ, ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ಎಸ್‌ಎಫ್‌ಐ ಮುಖಂಡ ಶಿವಾನಂದ ಅಂಗಡಿ, ಜೆಡಿಎಸ್ ತಾಲ್ಲೂಕು ಯುವ ಘಟಕದ ಮುಖಂಡ ಶ್ರೀಶೈಲಗೌಡ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.