ADVERTISEMENT

ತೋಟಗಾರಿಕೆ ಕಚೇರಿ: ಮತ್ತೊಂದು ಬಾರಾಕಮಾನ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 5:32 IST
Last Updated 5 ಆಗಸ್ಟ್ 2013, 5:32 IST

ವಿಜಾಪುರ: ಇಲ್ಲಿಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಮೂರು ವರ್ಷಗಳಿಂದ ಅರ್ಧಕ್ಕೆ ನಿಂತಿದ್ದು, `ಇದು ವಿಜಾಪುರದ ಮತ್ತೊಂದು ಬಾರಾಕಮಾನ್' ಎಂದು ರೈತರು ತಮಾಷೆ ಮಾಡುತ್ತಿದ್ದಾರೆ.

ಸ್ಥಳೀಯ ಐತಿಹಾಸಿಕ ಸಂರಕ್ಷಿತ ಸ್ಮಾರಕ ಆನಂದ ಮಹಲ್ (ಹಳೆಯ ಜಿಲ್ಲಾ ಪಂಚಾಯಿತಿ ಕಟ್ಟಡ) ಹತ್ತಿರ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಇದೆ. ಅಂದಾಜು 50 ವರ್ಷಗಳ ಹಿಂದೆ ನಿರ್ಮಿಸಿರುವ ಹಳೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಅದು ವಾಸಕ್ಕೆ ಯೋಗ್ಯವಿಲ್ಲ. ಅದನ್ನು ನೆಲಸಮ ಮಾಡುವಂತೆ ಇಲಾಖೆ ಸೂಚನೆ ನೀಡಿದೆ.

ಇದಕ್ಕೆ ಪರ್ಯಾಯವಾಗಿ ಈ ಕಚೇರಿ ಆವರಣದಲ್ಲಿಯೇ ಸುಸಜ್ಜಿತವಾದ ಹೊಸ ಕಟ್ಟಡ ನಿರ್ಮಿಸಲು ಜಿಲ್ಲಾ ಪಂಚಾಯಿತಿಯವರು ನೀಲನಕ್ಷೆ ತಯಾರಿಸಿದ್ದರು. ಈ ಕಾಮಗಾರಿಯನ್ನು ಕರ್ನಾಟಕ ಭೂ ಸೇನಾ ನಿಗಮಕ್ಕೆ ವಹಿಸಿ ಕೊಟ್ಟಿದ್ದು, ಈ ವರೆಗೆ ರೂ.47.19 ಲಕ್ಷ ರೂಪಾಯಿ ಅವರಿಗೆ ಪಾವತಿಸಿದ್ದಾರೆ. ಭೂ ಸೇನಾ ನಿಗಮದವರು ಅರ್ಧ ಕಾಮಗಾರಿ ಕೈಗೊಂಡು, ಕೆಲ ಕೊಠಡಿಗಳಿಗೆ ಬಾಗಿಲನ್ನೂ ಕೂಡ್ರಿಸಿದ್ದಾರೆ.

ADVERTISEMENT

`ಈ ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲಿ  `ಪ್ರಾಚ್ಯವಸ್ತು ಸಂರಕ್ಷಣಾ ಕಾಯ್ದೆ-2010' ಜಾರಿಗೆ ಬಂತು. ತೋಟಗಾರಿಕೆ ಇಲಾಖೆಯ ಕಚೇರಿ ಪಕ್ಕದಲ್ಲಿರುವ ಆನಂದ ಮಹಲ್ ಐತಿಹಾಸಿಕ ಸಂರಕ್ಷಿತ ಸ್ಮಾರಕ. ಸಂರಕ್ಷಿತ ಸ್ಮಾರಕದ ಆವರಣ ಗೋಡೆಯಿಂದ 100 ಮೀಟರ್ ವ್ಯಾಪ್ತಿ ನಿಷೇಧಿತ ಪ್ರದೇಶವಾಗಿದ್ದರಿಂದ ಈ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆಯವರು ನೋಟಿಸ್ ಜಾರಿ ಮಾಡಿದರು. ಈ ಕಾಯ್ದೆಯ ಸಕ್ಷಮ ಪ್ರಾಧಿಕಾರ ಆಗಿರುವ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲಾಯಿತು. ಅವರೂ ಸಹ ಕಾಮಗಾರಿ ಮುಂದುವರಿಕೆಗೆ ಅವಕಾಶ ನೀಡಲಿಲ್ಲ' ಎಂಬುದು ಇಲಾಖೆಯವರ ಮಾಹಿತಿ.

`ಈ ಕಟ್ಟಡ ನಿರ್ಮಾಣಕ್ಕೆ 2008ರಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. 26.8.2009 ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಿಕೊಟ್ಟರು. 80-87 ಅಡಿ ವಿಸ್ತೀರ್ಣದ ಈ ಕಟ್ಟಡದಲ್ಲಿ 10 ಕೊಠಡಿ, ಎರಡು ಶೌಚಾಲಯ, ಸಭಾಂಗಣ ನಿರ್ಮಿಸಲಾಗುತ್ತಿತ್ತು. ಈ ವರೆಗೆ ಈ ಕಾಮಗಾರಿಗೆ ರೂ.47.19 ಲಕ್ಷ ಪಾವತಿ ಮಾಡಲಾಗಿದೆ' ಎಂದು ಅವರು ಹೇಳುತ್ತಾರೆ.

`ಹೊಸ ಕಾನೂನು ಜಾರಿಗೂ ಮುನ್ನವೇ ಕಾಮಗಾರಿ ಆರಂಭಿಸಿದ್ದೇವೆ. ಮೇಲಾಗಿ ನೆಲ ಮಹಡಿ ಮಾತ್ರ ನಿರ್ಮಿಸುತ್ತಿದ್ದು, ನಮ್ಮ ಕಟ್ಟಡದಿಂದ ಪಕ್ಕದ ಸ್ಮಾರಕಕ್ಕೆ ಧಕ್ಕೆ ಇಲ್ಲ. ಈಗಾಗಲೇ ಅರ್ಧದಷ್ಟು ಮುಗಿದಿರುವ ಈ ಕಾಮಗಾರಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂಬ ಇಲಾಖೆಯ ಮನವಿಗೆ ಪುರಸ್ಕಾರ ದೊರೆಯುತ್ತಿಲ್ಲ' ಎನ್ನುತ್ತಾರೆ ಅವರು.

`ಈಗಿರುವ ಕಟ್ಟಡ ಶಿಥಿಲಗೊಂಡಿದ್ದು, ಮಳೆಯಾದರೆ ಸೋರುತ್ತದೆ. ಕಡತಗಳು ಮಳೆಯಲ್ಲಿ ತೊಯ್ಯುತ್ತಿವೆ. ಕೂಡ್ರಲು ಸ್ಥಳಾವಕಾಶ ಸಹ ಇಲ್ಲ. ಇಲಾಖೆಯ ಕಟ್ಟಡ ವಿಭಾಗದವರು ಇದನ್ನು ನೆಲಸಮಗೊಳಿಸುವಂತೆ ಸೂಚನೆ ನೀಡಿ ಮೂರು ವರ್ಷ ಕಳೆದಿದ್ದು, ಅದು ಯಾವಾಗ ಬೀಳುತ್ತದೋ ಗೊತ್ತಿಲ್ಲ.
ಇನ್ನೊಂದೆಡೆ ಹೊಸ ಕಟ್ಟಡಕ್ಕಾಗಿ ರೂ.50 ಲಕ್ಷ ಮಣ್ಣಲ್ಲಿ ಹಾಕಿದಂತಾಗಿದೆ. ಇದು ಸಾಮಾನ್ಯ ಮೊತ್ತ ಅಲ್ಲ. ಈಗಿರುವ ಸ್ಥಳ ಬಸ್ ನಿಲ್ದಾಣಕ್ಕೆ ಹತ್ತಿರವಾಗಿದ್ದು, ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸಬೇಕು. ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು' ಎಂದು ಕೆಲ ರೈತರು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.