ADVERTISEMENT

ದೇವಸ್ಥಾನ ಕಟ್ಟಿಸಿದ ಮುಸ್ಲಿಂ ಯುವಕ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 6:00 IST
Last Updated 8 ಅಕ್ಟೋಬರ್ 2011, 6:00 IST

ಸಿಂದಗಿ: ಪಟ್ಟಣದಲ್ಲಿ ಪ್ರಥಮ ಬಾರಿಗೆ ಮುಸ್ಲಿಂ ಯವಕನೊಬ್ಬ ಸಾಯಿಬಾಬಾ ದೇವಸ್ಥಾನ ಕಟ್ಟಿಸಿ ಸಾಯಿ ಮೂರ್ತಿ ಪ್ರತಿಷ್ಠಾಪನೆಗೊಳಿಸುವ ಮೂಲಕ  ಸೌಹಾರ್ದ ಮೆರೆದ ಅಪರೂಪದ ಘಟನೆ ಸ್ಥಳೀಯ ಸಾಯಿ ನಗರ ಬಡಾವಣೆಯಲ್ಲಿ ಗುರುವಾರ (ವಿಜಯದಶಮಿ) ದಂದು ನಡೆಯಿತು.

ಇಲ್ಲಿಯ ಸಾಯಿ ನಗರದಲ್ಲಿನ ಉದ್ಯಾನದಲ್ಲಿ ಅದೇ ನಗರದ ನಿವಾಸಿ ಮುಸ್ಲಿಂ ಯುವಕ, ಕರವೇ ನಗರ ಘಟಕ ಅಧ್ಯಕ್ಷ ತನ್ವೀರ ಭೈರಾಮಡಗಿ ಸ್ವಯಂಪ್ರೇರಣೆಯಿಂದ ಸ್ವಂತ ಖರ್ಚಿನಿಂದ ಸಾಯಿಬಾಬಾ ದೇವಸ್ಥಾನ ಕಟ್ಟಿಸಿದ. ಗುಡಿಯೇನೋ ನಿರ್ಮಾಣಗೊಂಡಿತು. ಆದರೆ ಗುಡಿಯಲ್ಲಿ ದೇವರಿಲ್ಲ ಎಂಬ ಕೊರಗು ಆತನಲ್ಲಿ ಕಾಡುತ್ತಿತ್ತು. ಕೊನೆಗೂ ಸ್ನೇಹಿತರ ಸಹಕಾರ ಪಡೆದುಕೊಂಡು ಶಿರಡಿಗೆ ತೆರಳಿ ಅಲ್ಲಿಂದ ಸಾಯಿಬಾಬಾ ಮೂರ್ತಿ ತಂದು ಇಂದು ಪ್ರತಿಷ್ಠಾಪನೆ ಮಾಡಿದರು.

ಸಾಯಿ ನಗರದಲ್ಲಿ ಗುರುವಾರ ಹಿಂದೂ- ಮುಸ್ಲಿಮರು ಒಂದಾಗಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯವನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ಪ್ರತಿಷ್ಠಾಪನಾ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಜಿ.ಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಯುವ ಧುರೀಣ ಅಶೋಕ ಮನಗೂಳಿ, ಪ್ರಭುಗೌಡ ಪಾಟೀಲ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಎನ್. ಕಿರಣರಾಜ್, ಕಾಂಗ್ರೆಸ್ ಅಲ್ಪಸಂಖ್ಯಾತರ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಮುನ್ನಾ ಭೈರಾಮಡಗಿ, ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಶ್ರೀಕಾಂತ ಬಿಜಾಪೂರ, ಮಹಿಬೂಬ ನಾಗಾವಿ, ಮಹಾಂತೇಶ ಸಾತಿಹಾಳ, ಫಾರೂಕ ಮುಲ್ಲಾ, ಮಹಿಬೂಬ ಆಳಂದ ಮುಂತಾದವರು ಪಾಲ್ಗೊಂಡಿದ್ದರು.
ಅತ್ಯಧಿಕ ಸಂಖ್ಯೆಯಲ್ಲಿ ಈ ಬಡಾವಣೆಯ ನಿವಾಸಿಗಳು ಒಂದಾಗಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.