ADVERTISEMENT

`ಧರ್ಮ ಜಾಗೃತಿಯ ಸಾಮರಸ್ಯ ಸಹಬಾಳ್ವೆ ಅಗತ್ಯ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 7:09 IST
Last Updated 20 ಡಿಸೆಂಬರ್ 2012, 7:09 IST
ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ರೇವಣಸಿದ್ಧೇಶ್ವರ ಸಮುದಾಯ ಭವನದ ಭೂಮಿ ಪೂಜೆ ಹಾಗೂ ಪ್ರಸಾದ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾಪದರು ಮಾತನಾಡಿದರು. ರೇಣುಕ ಶಿವಾಚಾರ್ಯರು, ಬೃಂಗೀಶ್ವರಲಿಂಗ ಶಿವಾಚಾರ್ಯರು ಚಿತ್ರದಲ್ಲಿದ್ದಾರೆ.
ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ರೇವಣಸಿದ್ಧೇಶ್ವರ ಸಮುದಾಯ ಭವನದ ಭೂಮಿ ಪೂಜೆ ಹಾಗೂ ಪ್ರಸಾದ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾಪದರು ಮಾತನಾಡಿದರು. ರೇಣುಕ ಶಿವಾಚಾರ್ಯರು, ಬೃಂಗೀಶ್ವರಲಿಂಗ ಶಿವಾಚಾರ್ಯರು ಚಿತ್ರದಲ್ಲಿದ್ದಾರೆ.   

ಬಸವನಬಾಗೇವಾಡಿ: ಸಮಾಜದಲ್ಲಿ ಜಾತಿಗಿಂತ ಧರ್ಮದ ಜಾಗೃತಿ ಮೂಡಿಸಿ ಎಲ್ಲರೂ ಸಾಮರಸ್ಯದಿಂದ ಬಾಳುವ ಅಗತ್ಯವಿದೆ. ವಿಶ್ವ ಬಂಧುತ್ವ ಮತ್ತು ಲೋಕ ಕಲ್ಯಾಣ ಬಯಸಿದ್ದ ವೀರಶೈವ ಧರ್ಮ ಅತ್ಯಂತ ಪ್ರಾಚೀನವಾಗಿದೆ.

ಜಾತಿ ಪಂಗಡ ಕಿತ್ತೊಗೆಯಲು ಜನಾಂದೋಲನ ಮಾಡಿದ ರೇವಣಸಿದ್ಧರು ಜನರ ಮನದಲ್ಲಿ ಸದಾ ಹಸಿರಾಗಿದ್ದಾರೆ ಎಂದು ಬಾಳೆಹೊನ್ನೂರಿನ ರಂಭಾಪುರಿಪೀಠದ ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೇವಣಸಿದ್ಧೇಶ್ವರ ಸಮುದಾಯ ಭವನದ ಭೂಮಿ ಪೂಜೆ ಹಾಗೂ ಪ್ರಸಾದ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಇಂಗಳೇಶ್ವರ ಗ್ರಾಮದ ಚಾರಿತ್ರಿಕ ಇತಿಹಾಸದಲ್ಲಿ ರೇವಣಸಿದ್ಧೇಶ್ವರರ ಹೆಸರು ಅಜರಾಮರ. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ರೇವಣಸಿದ್ಧೇಶ್ವರರು ಮಾಡಿದ ಕಾರ್ಯವನ್ನು ಸ್ಮರಿಸಬೇಕು. ಅವರ ಸಾಂಸ್ಕೃತಿಕ ಹೆಜ್ಜೆಗಳನ್ನು ಗುರುತಿಸುವ ಮನೋಭಾವ ಬೆಳೆಯಬೇಕು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಜಿಲ್ಲಾ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಧರ್ಮದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗುವುದರಿಂದ ದೇಶದ ಪ್ರಗತಿ ಕುಂಟಿತವಾಗುತ್ತದೆ. ಜಾತಿ ವ್ಯವಸ್ಥೆ ಹೋಗಲಾಡಿಸಬೇಕು ಎಂದರು.
ಮುಂದಿನ ವರ್ಷದ ರಂಭಾಪುರಿ ಪೀಠದ ದಸರಾ ದರ್ಬಾರವನ್ನು ತಾಲ್ಲೂಕಿನಲ್ಲಿ ಆಚರಿಸಲಾಗುವುದು. ಗ್ರಾಮದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ ರೂ 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಸಿದ್ದಲಿಂಗಪ್ಪ ನಂದಿ ಪ್ರಾಸ್ತಾವಿಕ ಮಾತನಾಡಿದರು. ಜೈನಾಪುರದ ರೇಣುಕ ಶಿವಾಚಾರ್ಯರು, ಇಂಗಳೇಶ್ವರದ ಬೃಂಗೀಶ್ವರಲಿಂಗ ಶಿವಾಚಾರ್ಯರು, ಚಿಮ್ಮಲಗಿಯ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಜಿ.ಪಂ ಅಧ್ಯಕ್ಷೆ ಕಾವ್ಯಾ ದೇಸಾಯಿ, ಜಿ.ಪಂ ಸದಸ್ಯೆ ಶಾಂತಮ್ಮಗೌಡತಿ ನಾಡಗೌಡ, ಭೀರಪ್ಪ ಸಾಸನೂರ, ತಾ.ಪಂ ಸದಸ್ಯ ಮಲ್ಲೇಶಿ ಇಂಡಿ,  ವಿ.ಕೆ. ಬಿರಾದಾರ, ಕಲ್ಲು ದೇಸಾಯಿ, ಟ್ರಸ್ಟ್ ಅಧ್ಯಕ್ಷ ಭೋಜನಗೌಡ ಪಾಟೀಲ, ಎಸ್.ಎಸ್. ಗುಬ್ಬಾ  ಉಪಸ್ಥಿತರಿದ್ದರು.

ಮಧು ಉಕ್ಕಲಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಎಸ್.ಎಸ್. ಬಿರಾದಾರ ಸ್ವಾಗತಿಸಿದರು. ಪ್ರೊ. ಅರವಿಂದ ಪಾಟೀಲ ನಿರೂಪಿಸಿದರು. 

ಮೆರವಣಿಗೆ: ಗ್ರಾಮಕ್ಕೆ ಆಗಮಿಸಿದ ರಂಭಾಪುರಿ ಶ್ರೀಗಳನ್ನು ಕುಂಭ ಹೊತ್ತ ಸುಮಂಗಲೆಯರು ಹಾಗೂ ವಿವಿಧ ಜಾನಪದ ಕಲಾತಂಡಗಳು, ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರೋಟ್‌ನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.