ADVERTISEMENT

ನಿವೇಶನ ಸಿಗುವವರೆಗೆ ಹೋರಾಟ: ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 4:30 IST
Last Updated 14 ಜೂನ್ 2012, 4:30 IST

ತಾಳಿಕೋಟೆ: “ನಾವು ಗಾಂಧಿವಾದಿಗಳು, ನ್ಯಾಯಕ್ಕಾಗಿ ಶಾಂತಿಯುತ ಹೋರಾಟ ನಡೆಸುತ್ತೇವೆ. ನ್ಯಾಯ ಸಿಗುವವರೆಗೆ  ಹೋರಾಟ ಮುಂದುವರೆಯುತ್ತದೆ” ಎಂದು ಸೋಲಾಪುರದ ನಿವೃತ್ತ ನ್ಯಾಯಾಧೀಶ ಎಸ್.ಡಿ.ಇನಾಮದಾರ(ಪುಣೆ) ಹೇಳಿದರು.

ತಾಳಿಕೋಟೆಯಲ್ಲಿ 1958 ಹಾಗೂ 1970ನೇ ಇಸ್ವಿಯಲ್ಲಿ ಪಟ್ಟಣದ ರಿ.ಸ.ನಂ.285/1ಎ ಜಮೀನಿನಲ್ಲಿ ಪ್ಲಾಟು ಹಂಚುವುದಾಗಿ ಸಾರ್ವಜನಿಕರಿಂದ ಹಣ ಪಾವತಿಸಿಕೊಂಡಿದ್ದ ಪುರಸಭೆ ಇಂದಿನವರೆಗೂ ನಿವೇಶನ ನೀಡದಿರುವುದನ್ನು ವಿರೋಧಿಸಿ, ಮುಂದೆ ಮಾಡಬೇಕಾದ ಹೋರಾಟದ ರೂಪ-ರೇಷೆ ಸಭೆಯಲ್ಲಿ ಮಾತನಾಡಿದರು.

ಈ ಬಗ್ಗೆ ಮುಖ್ಯಮಂತ್ರಿ ಮತ್ತು ಪೌರಾಡಳಿತ ಸಚಿವರನ್ನು ಭೇಟಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ. ನಿವೇಶನಕ್ಕಾಗಿ ಹಣ ಸಂದಾಯ ಮಾಡಿದ ಹಿರಿಯರಲ್ಲಿ ಅರ್ಧದಷ್ಟು ಜನ ಈಗ ಜೀವಂತವಾಗಿಲ್ಲ, ಆದರೆ ಅವರ ವಾರಸುದಾರರಿದ್ದಾರೆ.

ಹಣ ಸಂದಾಯ ಮಾಡಿದ ಬಗ್ಗೆ ರಶೀದಿ ಹೊಂದಿರುವವರನ್ನು ಬಿಟ್ಟು,  ರಶೀದಿ ಕಳೆದು ಹೋದ ಇಲ್ಲವೇ ನಾಶವಾಗಿರುವವರೂ ಸಹ ಈ ಬಗ್ಗೆ ಅಫಿಡಿವಿಟ್ ಸಲ್ಲಿಸಬಹುದು, ಈ ಮೂಲಕ ಅವರು ತಮ್ಮ ಹಕ್ಕು ಸಾಧಿಸಬಹುದು ಎಂದರು.

“ಹಣ ಸಂದಾಯ ಮಾಡಿದ ಎಲ್ಲರಿಗೂ ನಿವೇಶನ ದೊರೆಯುವವರೆಗೆ ಹೋರಾಟ ನಿಲ್ಲುವುದಿಲ್ಲ. ಹಣ ಸಂದಾಯ ಮಾಡಿದವರಲ್ಲಿ ಎಂಟು ಜನ ಪುರಸಭೆ ಸದಸ್ಯರಿದ್ದಾರೆ. ಆದರೆ ಅವರು ಹೋರಾಟದಲ್ಲಿ ಪಾಲ್ಗೊಳ್ಳದಿರುವುದು ವಿಷಾದಕರ. ಹಣ ಪಾವತಿಸಿದ ಮೂರು ವರ್ಷದಲ್ಲಿ ವಿಲೇವಾರಿಯಾಗದಿದ್ದರೆ ಆ ಹಣ ಲ್ಯಾಪ್ಸ್ ಆಗುತ್ತದೆ ಎಂದು ಪುರಸಭೆ ಹೇಳುತ್ತದೆ. ಆದರೆ ಈ ಬಗ್ಗೆ ಯಾವಾಗ, ಯಾರಿಗೆ ನೋಟಿಸ್‌ಕಳಿಸಿದ್ದಾರೆ ಆ ದಾಖಲೆ ನೀಡಬೇಕು ಎಂದು ಇನಾಮದಾರ ಆಗ್ರಹಿಸಿದರು.

ವೇದಿಕೆಯಲ್ಲಿದ್ದ  ಎ.ಎಸ್. ಬಿರಾದಾರ (ಕಾರಗನೂರ), ಎಸ್.ಬಿ. ಹಿರೇಮಠ, ತಿರುಪತಿ ಹಂಚಾಟೆ, ಡಾ.ಬಿ.ಎಸ್. ಯಾದವಾಡ,  ಪಂಪಾಜಿ ಜವಳಕರ ಮಾತನಾಡಿದರು.ಸಭೆಯಲ್ಲಿ ಡಾ.ವಿ.ಎಸ್.ಕಾರ್ಚಿ, ಡಾ.ಪಿ.ಎಸ್. ಅಗರವಾಲ, ಡಾ.ಆನಂದ ಭಟ್ಟ, ಡಾ.ನಜೀರ್ ಕೋಳ್ಯಾಳ, ಡಾ.ಎ.ಎಸ್.ಅಬಾಲೆ, ಘನಶ್ಯಾಮ ಚವ್ಹಾಣ, ಸಿ.ವಿ.ಮಹೀಂದ್ರಕರ, ಇಮಾಮ್‌ಸಾಬ್ ಚೌಧರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.