ADVERTISEMENT

ನೀರಾವರಿ: ಜತ್ತನಲ್ಲಿ ಗಡಿ ಕನ್ನ ಡಿಗರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 8:36 IST
Last Updated 13 ಸೆಪ್ಟೆಂಬರ್ 2013, 8:36 IST

ವಿಜಾಪುರ: ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಪೂರ್ವಭಾಗದ 42 ಗ್ರಾಮಗಳನ್ನು ಮೈಸಾಳ ಆರನೇ ಹಂತದ ಏತ ನೀರಾವರಿ ಯೋಜನೆಯಿಂದ ಕೈಬಿಟ್ಟಿ­ರುವುದನ್ನು ಖಂಡಿಸಿ ಈ ಗ್ರಾಮ­ಗಳವರು ‘ಗಡಿನಾಡ ಕನ್ನಡಿಗರ ಸ್ವಾಭಿ­ಮಾನಿ ಶೇತ್ಕರಿ ಸಂಘಟನೆ’ ನೇತೃತ್ವದಲ್ಲಿ ಗುರುವಾರ ಜತ್ತನಲ್ಲಿ ಪ್ರತಿಭಟಿಸಿ ತಹಶೀ­ಲ್ದಾರ ಕಚೇರಿಗೆ ಮುತ್ತಿಗೆ ಹಾಕಿದರು.

ಸಂಖ, ಉಮದಿ, ತಿಕ್ಕುಂಡಿ, ಗುಡ್ಡಾಪುರ, ಬಬಲಾದಿ, ಹೊಸಪೇಟೆ, ಬಡಚಿ, ಅಂಕಲಗಿ, ಉಟಗಿ ಮತ್ತಿತರ ಗ್ರಾಮಗಳಿಂದ ಬಂದಿದ್ದ ರೈತರು ಹಾಗೂ ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಸಂಸ್ಥಾಪಕ, ಕೊಲ್ಹಾಪೂರ ಸಂಸದ ರಾಜು ಶೆಟ್ಟಿ, ಶೇತ್ಕರಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸದಾ ಭಾವು ಖೋತ ಮಾತನಾಡಿ, ‘ಕರ್ನಾಟಕ ಸರ್ಕಾರ ರೈತರಿಗೆ ಸಾಕಷ್ಟು ಅನುಕೂಲತೆ ಕಲ್ಪಿಸಿದೆ. ಈ ಭಾಗದ ಕನ್ನಡಿಗರು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎನ್ನುತ್ತಿ­ದ್ದಾರೆ. ಗಡಿ ಭಾಗದ ರೈತರಿಗೆ ಅನ್ಯಾಯ­ವಾಗುತ್ತಿದ್ದು, ಬೇಡಿಕೆ ಈಡೇರಿಸದಿದ್ದರೆ ಮಹಾರಾಷ್ಟ್ರ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದರು.

‘ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಸೋನಿಯಾ ಗಾಂಧಿ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಗಡಿ ವಿವಾದ ಬಗೆಹರಿಸಬೇಕು’ ಎಂದು ಖೋತ ಆಗ್ರಹಿಸಿದರು.

ನಾಲ್ಕು ದಿನ ಉಪವಾಸ ಸತ್ಯಾಗ್ರಹ ನಡೆಸಿ, ಈಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರೂ ಸಂಸದರು, ಶಾಸಕರು ಸೌಜನ್ಯಕ್ಕೂ ತಮ್ಮನ್ನು ಭೇಟಿಯಾಗಿಲ್ಲ, ಮಹಾಜನ್‌ ವರದಿ ಜಾರಿಯಾದರೆ ಈ ಭಾಗದ 42 ಹಳ್ಳಿಗಳು ಕರ್ನಾಟಕಕ್ಕೆ ಸೇರುತ್ತವೆ ಎಂಬ ಕಾರಣಕ್ಕೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಬಿಸಿ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಮೈಸಾಳ ಆರನೇ ಹಂತದ ಏತ ನೀರಾವರಿ ಯೋಜನೆಯನ್ನು ಈ ಪ್ರದೇಶಕ್ಕೂ ವಿಸ್ತರಿಸುವ ಕುರಿತು ಶೀಘ್ರ ಸಮೀಕ್ಷೆ ಆರಂಭಿಸುವುದಾಗಿ ಲಿಖಿತ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.