ADVERTISEMENT

ನೀರಾವರಿ ಯೋಜನೆಗೆ ಒಪ್ಪಿಗೆ: ಸಂತಸ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 7:55 IST
Last Updated 5 ಜನವರಿ 2012, 7:55 IST

ವಿಜಾಪುರ: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕೆ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ, ಕೃಷ್ಣಾ-ಭೀಮಾ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ, ಕಾರ್ಯಾಧ್ಯಕ್ಷ ಪಂಚಪ್ಪ ಕಲಬುರ್ಗಿ, ಕಾರ್ಯದರ್ಶಿ ಬಸವರಾಜ ಕುಂಬಾರ ಸಂತಸ ವ್ಯಕ್ತ ಪಡಿಸಿದ್ದಾರೆ.

ಕೃಷ್ಣಾ ನ್ಯಾಯಮಂಡಳಿ ತೀರ್ಪು ಹೊರಬಂದು ಒಂದು ವರ್ಷದ ನಂತರ ಇದೀಗ ಕೈಗೆತ್ತಿಕೊಳ್ಳಬೇಕಾದ ವಿಸ್ತೃತ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ಮಹತ್ವದ ಹೆಜ್ಜೆಯನ್ನಿರಿಸಿದೆ. ಬರುವ ಬಜೆಟ್‌ನಲ್ಲಿ ಯೋಜನಾವಾರು ಹಣ ನಿಗದಿಗೊಳಿಸಬೇಕು. ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯವನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು. ಅದಕ್ಕೆ ಪ್ರತ್ಯೇಕ ಹಣ ಮೀಸಲಿಡಬೇಕು ಎಂದು ಶಾಸಕ ಎಂ.ಬಿ. ಪಾಟೀಲ ಒತ್ತಾಯಿಸಿದ್ದಾರೆ.

ಮಠಾಧೀಶರ ನೇತೃತ್ವದಲ್ಲಿ ಜನಪ್ರತಿನಿಧಿಗಳು, ನೀರಾವರಿ ಜಾಗೃತಿ ಹಾಗೂ ಅನುಷ್ಠಾನ ಸಮಿತಿ ಸದಸ್ಯರು ನಿರಂತರವಾಗಿ ಯೋಜನೆ ಜಾರಿಯಾಗುವವರೆಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ, ಸಚಿವರಾದ ಗೋವಿಂದ ಕಾರಜೋಳ, ವಿ.ಎಸ್ ಆಚಾರ್ಯ ಅವರಿಗೆ ಹಾಗೂ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯದ ಚರ್ಚೆಗೆ ಸಂಪೂರ್ಣ ಸಹಕಾರ ನೀಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರನ್ನು ಕೃಷ್ಣಾ-ಭೀಮಾ ಸಮಿತಿಯವರು ಅಭಿನಂದಿಸಿದ್ದಾರೆ.

ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
ವಿಜಾಪುರ:ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ  ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನ ನೀಡಲು ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ  ಅರ್ಜಿ ಆಹ್ವಾನಿಸಿದೆ.

ಆಸಕ್ತರು ಇದೇ 31ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ತಮ್ಮ ಕಚೇರಿ ಸಂಪರ್ಕಿಸಬೇಕು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಸಾಲ ಸೌಲಭ್ಯಕ್ಕಾಗಿ ಅರ್ಜಿ
ವಿಜಾಪುರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲೆಯ ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಕ್ರಿಶ್ಚಿಯನ್ ಜನಾಂಗದವರಿಗೆ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಅರ್ಜಿ ಅಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಇದೇ 10 ಕೊನೆಯ ದಿನವಾಗಿದ್ದು, ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಶಿವಣಗಿ ಬಿಲ್ಡಿಂಗ್, ಎಸ್.ಪಿ. ಕಚೇರಿ ಹಿಂಭಾಗ, ಹೊಸ ಕುಂಬಾರ ಓಣಿ, ಸೊಲ್ಲಾಪುರ ರಸ್ತೆ, ವಿಜಾಪುರ (ದೂ: 08352-222344) ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.