ವಿಜಾಪುರ: ಬೇಸಿಗೆಯ ನೀರಿನ ತಾಪವನ್ನು ನೀಗಿಸಲು ಹೊಸ ಕೊಳವೆ ಬಾವಿ ಕೊರೆಯುವ ಬದಲು ಹಳೆಯ ಕೊಳವೆ ಬಾವಿಯ ಕೈಪಂಪ್‌ಗಳನ್ನು ಬದಲಾಯಿಸಿ ಸಿಂಗಲ್ ಫೇಸ್ ಮೋಟರ್ ಅಳವಡಿಸಬೇಕು, ಉದ್ಯೋಗ ಖಾತ್ರಿಯಡಿ ಕುಡಿಯುವ ನೀರಿನ ಬಾವಿ, ಕರೆಗಳ ಹೂಳೆತ್ತುವ ಕುರಿತಂತೆ ತುರ್ತು ಕ್ರಮ ವಹಿಸಲು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲೆಯ ಬರ ಪರಿಹಾರ ಕಾರ್ಯಗಳ ಕುರಿತಂತೆ ಜಿಲ್ಲಾ ಹಾಗೂ ವಿವಿಧ ತಾಲ್ಲೂಕು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಅಂತರ್ಜಲ ಮಟ್ಟ ಕುಸಿತದಿಂದ ಕೈಪಂಪ್ ಪ್ರಯೋಜನವಾಗುವುದಿಲ್ಲ. ಹೊಸ ಕೊಳವೆ ಬಾವಿ ಕೊರೆದು, ಕೈಪಂಪ್ ಅಳವಡಿಸಿದರೂ ಪ್ರಯೋಜನ ವಾಗದು. ಇದರ ಬದಲು ಹಳೆ ಕೊಳವೆ ಬಾವಿಗೆ ಕೈಪಂಪು ಬದಲಾಯಿಸಿ ಸಿಂಗಲ್ ಫೇಸ್ ಮೋಟರ್ ಅಳವಡಿಸಿ ದರೆ ಎಂಜಿನಿಯರ್‌ಗಳ ವರದಿಯಂತೆ  ನೀರಿನ ಸಮಸ್ಯೆ  ನಿವಾರಿಸಬಹುದಾಗಿದೆ ಎಂದು ಹೇಳಿದರು.
ತಾಲ್ಲೂಕುವಾರು ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ನೀರಿನ ಸಮಸ್ಯಾತ್ಮಕ  ಗ್ರಾಮಗಳಿಗೆ ತಕ್ಷಣದಲ್ಲಿ ನೀರು ಪೂರೈಸಲು ಆದ್ಯತೆಯ ಮೇಲೆ ಕ್ರಮ ವಹಿಸಬೇಕು. ನೀರು ಪೂರೈಕೆಯ ವ್ಯವಸ್ಥೆ ಕುರಿತಂತೆ ಚರ್ಚಿಸಿ ಕ್ರಿಯಾ ಯೋಜನೆಯನ್ನು ಸಲ್ಲಿಸಿದರೆ, ಜಿಲ್ಲಾಡಳಿತ ಅಗತ್ಯ ಅನುದಾನ ಬಿಡುಗಡೆ ಮಾಡುತ್ತದೆ ಎಂದು ಹೇಳಿದರು. 
ಗ್ರಾಮೀಣ ಪ್ರದೇಶದ ಖಾಸಗಿ ಕೊಳವೆ ಬಾವಿ  ಮಾಲೀಕರ ಮನವೊಲಿಸಿ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ವಹಿಸಬೇಕು. ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವುದು ಕೊನೆಯ ಅಸ್ತ್ರವಾಗಬೇಕು. ಕುಡಿಯುವ ನೀರು, ಮೇವು ಪೂರೈಕೆಯಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶ ಇರಬಾರದು. ಬೋಗಸ್ ಬಿಲ್‌ಗೆ ಅವಕಾಶವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಹೂಳೆತ್ತಿ: ಈಗಾಗಲೇ ಸೂಚನೆ ನೀಡಿದಂತೆ ಉದ್ಯೋಗ ಖಾತ್ರಿ ಯೋಜನೆ ಯಡಿ ಕೆರೆ, ಬಾವಿಗಳ ಹೂಳೆತ್ತಲು ಕೆಲವು ಅಧಿಕಾರಿಗಳು ಕ್ರಮ ವಹಿಸಿ ದ್ದಾರೆ. ಎಲ್ಲರೂ ಗ್ರಾಮಗಳ ಕೆರೆ ಬಾವಿಗಳ ಹೂಳೆತ್ತುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಈ ಕುರಿತಂತೆ ಕ್ರಿಯಾಯೋಜನೆ ರೂಪಿಸಿದರೆ ತಕ್ಷಣ ಅನುಮೋದಿಸಲಾಗುವುದು ಎಂದು ಹೇಳಿದರು. 
ತಾಕೀತು:   ಬರ ಉಸ್ತುವಾರಿಗಾಗಿ ನೇಮಕಗೊಂಡ ಕೆಲ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡದೆ ಇರುವುದನ್ನು ಅರಿತ ಜಿಲ್ಲಾಧಿಕಾರಿಗಳು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರನ್ನು ಭೇಟಿ ಮಾಡಿ, ಜನರ ಸಮಸ್ಯೆಯನ್ನು ಆಲಿಸಿ ಸಭೆಗಳನ್ನು ನಡೆಸಿ, ಗ್ರಾಮದ ವಾಸ್ತವಾಂಶವನ್ನು, ಟಿಪ್ಪಣಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಉಸ್ತುವಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು. 
92 ಹಳ್ಳಿ:  ಮಾಹಿತಿಯಂತೆ 92ಜನವಸತಿ, 56 ಗ್ರಾಮಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಅಗತ್ಯ ಕಂಡು ಬಂದರೆ ತಕ್ಷಣದಲ್ಲಿ ಕ್ರಮ ವಹಿಸುವಂತೆ ಸೂಚಿಸಿದರು. 
ಗೋಶಾಲೆ:  ಈಗಾಗಲೇ 10 ಗೋಶಾಲೆಗಳು ಕಾರ್ಯನಿರ್ವಹಿಸು ತ್ತಿದ್ದು, 2325 ಜಾನುವಾರುಗಳು ಆಶ್ರಯ ಪಡೆದಿದ್ದು, 376 ಮೆಟ್ರಿಕ್ ಟನ್ ಮೇವು ದಾಸ್ತಾನಿದೆ. ಹೊಸದಾಗಿ ಕುಮಟಗಿ, ಹೂವಿನಹಿಪ್ಪರಗಿ, ಕಲಕೇರಿ, ದೇವರಹಿಪ್ಪರಗಿಯಲ್ಲಿ ಗೋಶಾಲೆ ತೆರೆಯಲು ಜನರಿಂದ ಬೇಡಿಕೆ ಬಂದಿದೆ ಎಂದು ಸಭೆಗೆ ವಿವಿಧ ತಹಶೀಲ್ದಾರಗಳು ವಿವರಿಸಿದರು. 
ಬಾಗಲಕೋಟೆ ಮತ್ತು ಬೀಳಗಿಯಲ್ಲಿ ಜಾನುವಾರುಗಳಿಗೆ ಮೇವು ಖರೀದಿಸಲು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಹಶೀಲ್ದಾರಗಳಿಗೆ ಸೂಚಿಸಿದರು. ಹಾಗೂ ಕೃಷಿ ವಿವಿ ತೋಟಗಾರಿಕೆ ಫಾರ್ಮಗಳಲ್ಲಿ ಬೆಳೆಯಲಾದ ಹಸಿರು ಮೇವು ಲಭ್ಯವಿದ್ದು, ಇದನ್ನು ಬಳಸಿಕೊಳ್ಳಲು ಸೂಚಿಸಿದರು.
ವಿದ್ಯುತ್: ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಕಾರಣ ಹೇಳದೆ ತಕ್ಷಣದಲ್ಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು. ಬಾಕಿ ಉಳಿದಿರುವ ಕುಡಿಯುವ ನೀರಿನ ಯೋಜನೆಗಳಿಗೆ ಮಾರ್ಚ್‌ಯೊಳಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು. 
ಸಭೆಯಲ್ಲಿ ಉಪಕಾರ್ಯದರ್ಶಿ ಅಮರೇಶ ನಾಯಕ, ವಿಜಾಪುರ ಉಪ ವಿಭಾಗಾಧಿಕಾರಿ ಸುರೇಶ ಜಿರಲಿ, ಇಂಡಿ ಉಪವಿಭಾಗಾಧಿಕಾರಿ ಡಾ. ಬೂದೆಪ್ಪ, ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಪಾಟೀಲ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಎಂಜಿನಿಯರ್ ಪ್ರಸನ್ನಕುಮಾರ, ವಿವಿಧ ತಾಲ್ಲೂಕುಗಳ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಎಂಜಿನಿಯರ್‌ರು ಹಾಗೂ ಹೋಬಳಿವಾರು ಉಸ್ತುವಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.