ADVERTISEMENT

ನೌಕರ ವರ್ಗಕ್ಕೆ ಬಿಸಿ ಮುಟ್ಟಿಸಿದ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 5:35 IST
Last Updated 4 ಜೂನ್ 2013, 5:35 IST
ನೌಕರ ವರ್ಗಕ್ಕೆ ಬಿಸಿ ಮುಟ್ಟಿಸಿದ ಅಧಿಕಾರಿ
ನೌಕರ ವರ್ಗಕ್ಕೆ ಬಿಸಿ ಮುಟ್ಟಿಸಿದ ಅಧಿಕಾರಿ   

ಮುದ್ದೇಬಿಹಾಳ: ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದಿರುವ ಬಗ್ಗೆ ಜನತೆ ಅಲ್ಲಲ್ಲಿ ಆಕ್ರೋಶ ವ್ಯಕ್ತ ಪಡಿಸಿದ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ವಿಜಾಪುರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ  ತಾಲ್ಲೂಕು  ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಅಕ್ಕಮಹಾದೇವಿ ಹೊಕ್ರಾಣಿ ಅವರು ಸೋಮವಾರ  ವಿವಿಧ ಇಲಾಖೆಗೆ ದಿಢೀರ್ ಭೇಟಿ ನೀಡಿ ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದರು. 

ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವಿ. ಹೊಸೂರ ಅವರು ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಹಾಗೂ ಸರ್ಕಾರಿ ವಾಹನವನ್ನು ತಮ್ಮ ಸ್ವಂತಕ್ಕೆ ಬಳಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಲ್ಲಿಯ ಬಿ.ಇ.ಒ ಕಾರ್ಯಾಲಯಕ್ಕೆ ಭೇಟಿ ನೀಡಿದಾಗ ಅವರು ಕಾರ್ಯಾಯಲದಲ್ಲಿ ಗೈರು ಹಾಜರಿದ್ದುದನ್ನು ಗಮನಿಸಿದ  ಅವರು ಅನುಪಸ್ಥಿತಿ ಬಗ್ಗೆ ಕೇಳಿದಾಗ ತಾಲ್ಲೂಕಿನ ತಂಗಡಗಿ ಗ್ರಾಮದ ಶಾಲೆಗೆ ಭೇಟಿ ನೀಡಲು ಹೋಗಿದ್ದಾರೆ ಎಂದು ಹೇಳಿದರು.

ಆದರೆ ಇ.ಒ ಅವರು ದೂರವಾಣಿ ಮೂಲಕ ತಂಗಡಗಿ ಶಾಲಾ ಮುಖ್ಯಶಿಕ್ಷಕರಿಗೆ ಸಂಪರ್ಕಿಸಿದಾಗ ಬಿಇಒ ಅವರು ಅಲ್ಲಿಗೆ ಭೇಟಿ ನೀಡದೇ ಇರುವುದು ತಿಳಿದು ಬಂದಿತು. ಇಲಾಖೆಯ ಸಿಬ್ಬಂದಿ ಅವರು ತಪ್ಪು ಮಾಹಿತಿ ಬಗ್ಗೆ ತಲೆ ಕೆಡಿಸಿಕೊಳ್ಳದ ಇ.ಒ ಅವರು ತಕ್ಷಣ ಬಿ.ಇ.ಒ ಅವರ ದಿನನಿತ್ಯದ ಡೈರಿ ಹಾಗೂ ಟಿ.ಪಿ.ಯನ್ನು ಒಪ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಮತ್ತೊಂದು ಕಚೇರಿಗೆ ತೆರಳಿದರು.

ನಂತರ ಕೃಷಿ ಇಲಾಖೆಗೆ ಭೇಟಿ ನೀಡಿದ ಅವರಿಗೆ ಮೇ 1 ಮತ್ತು 3ರಂದು ಕೃಷಿ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಕಾರ್ಯನಿರ್ವಹಣೆ ಮಾಡದಿರುವುದು ಕಂಡು ಬಂದಿತಲ್ಲದೇ, ಹಾಜರಿ ಪುಸ್ತಕದಲ್ಲಿ ಆದಿನಾಂಕದಂದು ಬರದೇ ಇರುವ ಸಿಬ್ಬಂದಿಯ ಹೆಸರಿನ ಮೇಲೆ ಮೇಮೊ ಬರೆಯಿರಿ ಇಲ್ಲವಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಇಲಾಖೆಯ ಸಿಬ್ಬಂದಿಗೆ ಎಚ್ಚರಿಸಿದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿದ ಅವರು, ಅಲ್ಲಿಯ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು. ನಂತರ ಸಭೆಗೆಂದು ಆಗಮಿಸಿದ್ದ ಮೇಲ್ವಿಚಾರಕರನ್ನು ಕರೆದು ತಾಲ್ಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ನಿತ್ಯ ಭೇಟಿ ನೀಡಿ ಸರಿಯಾಗಿ ಕಾರ್ಯನಿರ್ವಹಣೆಯನ್ನು ಮಾಡಬೇಕು ಹಾಗೂ ಅಂಗನವಾಡಿಗೆ ಬರುವ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರದ ಹಾಗೆ ನೋಡಿಕೊಳ್ಳಬೇಕು ಮತ್ತು ತಪ್ಪದೇ ಮಾಸಿಕ ಹಾಗೂ ವಾರಕ್ಕೊಮ್ಮೆ ಕಡ್ಡಾಯವಾಗಿ ಸಭೆಯನ್ನು ಮಾಡಲೇಬೇಕು ಎಂದು ಸೂಚಿಸಿದರು.

ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇ.ಒ ಅಕ್ಕಮಹಾದೇವಿ ಹೊಕ್ರಾಣಿ ಅವರು ತಾಲ್ಲೂಕಿನ  ಸರ್ಕಾರಿ ಇಲಾಖೆಗಳ ಬಹುತೇಕ  ಅಧಿಕಾರಿಗಳು ಸರಿಯಾಗಿ ಸಮಯಕ್ಕೆ ಕಾರ್ಯನಿರ್ವಹಣೆ ಮಾಡದಿರುವುದು, ವಿಜಾಪುರದಲ್ಲಿಯೇ ವಾಸ್ತವ್ಯ ಮಾಡುತ್ತ ಆಗಾಗ್ಗೆ ಇಲ್ಲಗೆ ಭೇಟಿ ನೀಡಿ ಏಕಕಾಲಕ್ಕೆ ಹಾಜರಿ ಹಾಕುವ ವಿಷಯ ಜಿಲ್ಲಾಧಿಕಾರಿಗಳಿಗೆ ತಿಳಿದು ಬಂದಿದ್ದು, ಅವರ ಆದೇಶದಂತೆ ವಿವಿಧ ಇಲಾಖೆಗಳಿಗೆ  ಭೇಟಿ ನೀಡಿದ್ದೇನೆ, ಇನ್ನೂ ಉಳಿದ ಕಚೇರಿಗಳಿಗೂ ಭೇಟಿ ನೀಡಿ ವರದಿಯನ್ನು ನೇರವಾಗಿ ಸಲ್ಲಿಸುತ್ತೇನೆ. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂದಿಸಿದಂತೆ ತಾಲ್ಲೂಕಿನಲ್ಲಿ ಒಟ್ಟೂ 405 ಅಂಗನವಾಡಿ ಕೇಂದ್ರಗಳಿದ್ದು, ಕೇವಲ 187 ಅಂಗನವಾಡಿ ಕಟ್ಟಡಗಳಿವೆ, ಇನ್ನೂ 218 ಅಂಗನವಾಡಿ ಕಟ್ಟಡಗಳನ್ನು ಕಟ್ಟಿಸಬೇಕಾಗಿದೆ. ಇದರಿಂದ ಮಕ್ಕಳಿಗೆ ಬೋಧನೆ ಮಾಡುವಲ್ಲಿ ಕಾರ್ಯಕರ್ತೆಯರಿಗೆ ತುಂಬಾ ತೊಂದರೆಯಾಗುತ್ತಿದ್ದು ತಕ್ಷಣ ಇದರ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.