ADVERTISEMENT

ಪಾಕ್ ಧ್ವಜ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 8:45 IST
Last Updated 17 ಜನವರಿ 2012, 8:45 IST

ಸಿಂದಗಿ: ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಪಾಕ್ ಧ್ವಜ ಹಾರಿಸಿದ ಆರೋಪಿಗಳನ್ನು ಬರೀ ಗೂಂಡಾ ಕಾಯ್ದೆಯಡಿ ಶಿಕ್ಷಿಸದೇ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಶಿಕ್ಷಿಸಲಾಗುವುದು ಎಂದು ಪೋಲಿಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.

ಸೋಮವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪಾಕ್ ಧ್ವಜ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕೇವಲ ಮೂರೇ ದಿನಗಳಲ್ಲಿ ಕುಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು. ಯಾವುದೇ ಅಪರಾಧ ಸಹಿಸಬಹುದು, ಆದರೆ ಜಾತಿ, ಮತ, ಪಂಥ ಆಧಾರದ ಅಪರಾಧ ಎಂದಿಗೂ ಸಹಿಸಲಾಗದು. ಅಂಥ ಕಾರ್ಯ ಮಾಡಿದವರು ಯಾರೇ ಆಗಿರಲಿ ಅಂಥವರನ್ನು ಪೊಲೀಸರು ಸದೆ ಬಡೆಯುತ್ತಾರೆ. ಇದೊಂದು ಮಹಾನ್ ದೇಶದ್ರೋಹದ ಕಾರ್ಯ. ಈ ಪ್ರಕರಣವನ್ನು ಧಕ್ಷ ಅಧಿಕಾರಿಗಳಾದ ಉತ್ತರ ವಲಯ ಐ.ಜಿ.ಪಿ ಚರಣರೆಡ್ಡಿ ಅವರಿಗೆ ಚಾರ್ಜ್‌ಶೀಟ್ ಹಾಕಲು ವಹಿಸಿಕೊಡಲಾಗಿದೆ. ಈ ಅಪರಾಧಿಗಳಿಗೆ ನಿಶ್ಚತವಾಗಿ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದರು. ಸಾಮಾಜಿಕ ಭದ್ರತೆ, ಕೋಮು ಸಾಮರಸ್ಯ ಕಾಪಾಡುವುದು ಬರೀ ಪೊಲೀಸರ ಕಾರ್ಯ ಮಾತ್ರವಾಗಿರದೇ ಎಲ್ಲ ನಾಗರಿಕರ ಕರ್ತವ್ಯವೂ ಆಗಿದೆ ಎಂದರು.

ಸನ್ಮಾನಗಳ ಸುರಿಮಳೆ: ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ.ಸಿ.ಮನಗೂಳಿ, ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಅಖಿಲ ಭಾರತೀಯ ವೀರಶೈವ ಮಹಾಸಭೆ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಾರದ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಶರಣಪ್ಪ ವಾರದ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಗೋಲಗೇರಿ, ಬಸವರಾಜ ಕೋರಿ, ವೆಂಕಟೇಶ ರಾಜೂ ಗುತ್ತೇದಾರ, ದಸಂಸ ಪ್ರಮುಖರಾದ ಅರ್ಜುನ ಗುಡಿಮನಿ, ಹುಯೋಗಿ ತಳ್ಳೊಳ್ಳಿ ಮುಂತಾದ  ಗಣ್ಯರಿಂದ ಸನ್ಮಾನಗಳ ಸುರಿಮಳೆ ಹರಿಯಿತು.

ಮಾಜಿ ಸಚಿವ ಎಂ.ಸಿ.ಮನಗೂಳಿ ಮಾತನಾಡಿದರು. ಉತ್ತರ ವಲಯ ಐ.ಜಿ.ಪಿ ಚರಣರೆಡ್ಡಿ, ಇಂಡಿ ಡಿವೈಎಸ್‌ಪಿ ಮುತ್ತುರಾಜ್ ಎಂ. ಸಿಂದಗಿ ಸಿಪಿಐ ಚಿದಂಬರ ಎಂ, ವಿಜಾಪುರ ಸಿಪಿಐ ಸಿದ್ದೇಶ್ವರ, ಸಬ್ ಇನ್ಸ್‌ಪೆಕ್ಟರ್ ರಮೇಶ ರೊಟ್ಟಿ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.