ADVERTISEMENT

ಬಸ್‌ ನಿಲ್ದಾಣ: ಅವ್ಯವಸ್ಥೆ ಆಗರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 6:45 IST
Last Updated 15 ಡಿಸೆಂಬರ್ 2017, 6:45 IST
ಬಸ್‌ ನಿಲ್ದಾಣದಲ್ಲಿನ ಶೌಚಾಲಯದ ದುರವಸ್ಥೆ
ಬಸ್‌ ನಿಲ್ದಾಣದಲ್ಲಿನ ಶೌಚಾಲಯದ ದುರವಸ್ಥೆ   

ದೇವರಹಿಪ್ಪರಗಿ: ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳಿಲ್ಲದ ಕೋರವಾರ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿರುವ ಈ ನಿಲ್ದಾಣದ ಆವರಣದ ತುಂಬ ಮದ್ಯದ ಬಾಟಲಿಗಳೇ ಕಾಣಿಸುತ್ತವೆ. ರಾತ್ರಿಯಾದರೆ ಸಾಕು ಪ್ರಯಾಣಿಕರು ಇಲ್ಲಿ ಬರಲು ಭಯ ಪಡುವಂತಾಗಿದೆ. ಹೆಸರಿಗಷ್ಟೇ ಬಸ್ ನಿಲ್ದಾಣ ಎನ್ನುವಂತಿರುವ ಇಲ್ಲಿ ಸಾರಿಗೆ ನಿಯಂತ್ರಕರಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಆವರಣ ಕಸಕಡ್ಡಿ, ಕಲ್ಲು ಮಣ್ಣುಗಳಿಂದ ತುಂಬಿದೆ.

‘ಇನ್ನು ಕುಡಿಯಲು ನೀರು ಇಲ್ಲ. ನೀರಿನ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯ ಗಬ್ಬದ್ದು ಹೋಗಿದ್ದು, ಒಳಗೆ ಕಾಲಿಡಲು ಹೇಸಿಗೆ ಬರುತ್ತದೆ’ ಎಂದು ಕಾನೂನು ರಕ್ಷಣಾ ವೇದಿಕೆಯ ದೇವರಹಿಪ್ಪರಗಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಹಿಪ್ಪರಗಿ, ಮುಖಂಡ ರಾದ ಭೀಮರಾಯ ಗುಡದಿನ್ನಿ, ಮಹಾಂತೇಶ ತೆಲಗರ, ದಂಡಪ್ಪ ತಳವಾರ, ರವಿ ಗುಡದಿನ್ನಿ ದೂರುತ್ತಾರೆ.

‘ಶೌಚಾಲಯದಲ್ಲಿ ಮದ್ಯದ ಬಾಟಲಿಗಳು ಕಾಣಸಿಗುತ್ತವೆ. ಇನ್ನು, ಸಾರ್ವಜನಿಕರು ಬಯಲಿನಲ್ಲಿಯೇ ಶೌಚ ಮಾಡುವುದರಿಂದ ಗಬ್ಬೆದ್ದು ನಾರುತ್ತಿದೆ. ಬಸ್ ನಿಲ್ದಾಣಕ್ಕೆ ಬಂದರೆ ಸಾಕು ಮೂಗುಮುಚ್ಚಿಕೊಂಡು ಬರ ಬೇಕಾದ ಪರಿಸ್ಥಿತಿ ಬಂದೊದಗಿದೆ. ಬಸ್ ನಿಲ್ದಾಣದ ಆವರಣದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಸಾರಿಗೆ ನಿಯಂತ್ರಕರ ಕೋಣೆ ಭಯ ಮೂಡಿಸುವಂತಿದೆ’ ಎಂದರು.

ADVERTISEMENT

‘ಸಿಂದಗಿ, ತಾಳಿಕೋಟೆ, ದೇವ ರಹಿಪ್ಪರಗಿ, ಪುಣೆ, ಮುಂಬೈಗಳಿಗೆ ತೆರಳುವ ಬಸ್‌ಗಳು ಪಟ್ಟಣದ ಮೂಲಕ ಸಂಚರಿಸುತ್ತಿದ್ದು, ನಿತ್ಯ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸಾರಿಗೆ ನಿಯಂತ್ರಕರ ನೇಮಕದಂತಹ ಬೇಡಿಕೆ ಗಳು ಈಡೇರದಿದ್ದರೆ ಪ್ರತಿಭಟನೆ ಮಾಡುವುದು ಅನಿವಾರ್ಯ ವಾಗು ವುದು’ ಎಂದೂ ಅವರು ಹೇಳಿದರು. ‘ಬಸ್ ನಿಲ್ದಾಣದಲ್ಲಿ ನಾಮಫಲಕ, ವೇಳಾಪತ್ರಿಕೆ ಅಳವಡಿಸಬೇಕು’ ಎಂದೂ ಅವರು ಆಗ್ರಹಿಸಿದರು.

* * 

ಕೋರವಾರ ಬಸ್ ನಿಲ್ದಾಣ ಸಿಂದಗಿ ಘಟಕದ ವ್ಯಾಪ್ತಿಗೆ ಬರುತ್ತಿದ್ದು, ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕ್ರಮ ಜರುಗಿಸಲು ಸೂಚಿಸುತ್ತೇನೆ
ಗಂಗಾಧರಪ್ಪ
ಸಾರಿಗೆ ನಿಯಂತ್ರಣಾಧಿಕಾರಿ, ಈಶಾನ್ಯ ಸಾರಿಗೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.