ADVERTISEMENT

ಬಹುಮುಖ ಪ್ರತಿಭೆ ಚಂದ್ರಶೇಖರ ಪತ್ತಾರ

ವಿ.ಮ.ಗಡೇದ
Published 7 ಜುಲೈ 2013, 11:07 IST
Last Updated 7 ಜುಲೈ 2013, 11:07 IST
ಮುದ್ದೇಬಿಹಾಳದಲ್ಲಿ ನಡೆದ ಭಾರತ ನಿರ್ಮಾಣ ಕಾರ್ಯಕ್ರಮದಲ್ಲಿ ಸಂಗೀತ ಸೇವೆ ನೀಡುತ್ತಿರುವ ಚಂದ್ರಶೇಖರ ಪತ್ತಾರ.
ಮುದ್ದೇಬಿಹಾಳದಲ್ಲಿ ನಡೆದ ಭಾರತ ನಿರ್ಮಾಣ ಕಾರ್ಯಕ್ರಮದಲ್ಲಿ ಸಂಗೀತ ಸೇವೆ ನೀಡುತ್ತಿರುವ ಚಂದ್ರಶೇಖರ ಪತ್ತಾರ.   

ವಿದ್ಯೆಯೆಂಬುದು ರಕ್ತದಲ್ಲಿರುತ್ತದೆ ಎನ್ನುವದಕ್ಕೆ ಮುದ್ದೇಬಿಹಾಳ ಪಟ್ಟಣದಲ್ಲಿ ವಿಶ್ವಕರ್ಮ ಸಂಗೀತ ಪಾಠಶಾಲೆಯ ಪ್ರಾಚಾರ್ಯರಾಗಿರುವ ಚಂದ್ರಶೇಖರ ಪತ್ತಾರ ಅವರೇ ಉದಾಹರಣೆ. 

ಇವರ ತಂದೆ ಬಸಣ್ಣ ಶೇಷಪ್ಪ ಪತ್ತಾರ ಈ ಹಿಂದೆಯೇ ಗುಲಬರ್ಗಾ ಆಕಾಶವಾಣಿಯಲ್ಲಿ ಶಾಸ್ತ್ರೀಯ ಸಂಗೀತ ಹಾಡುವ ಮೂಲಕ ಪ್ರಸಿದ್ಧರಾದವರು. ಹೀಗೆ ರಕ್ತಗತವಾಗಿ ಬಂದ ಬಳುವಳಿಯನ್ನು ಕೆಲದಿನಗಳವರೆಗೆ ಗುಪ್ತವಾಗಿ ಬಚ್ಚಿಟ್ಟಿದ್ದ ಇವರು ಸುಮಾರು ವರ್ಷಗಳ ಕಾಲ ತಮ್ಮ ಸಂಪ್ರದಾಯದ ವೃತ್ತಿ ಪತ್ತಾರಿಕೆ ಹಾಗೂ ಬಡಿಗತನವನ್ನೇ ಮುಂದುವರೆಸಿಕೊಂಡು ಬಂದಿದ್ದರು.

ತಾಳಿಕೋಟಿಯ ಖಾಸ್ಗತೇಶ್ವರ ಸಂಗೀತ ಪಾಠಶಾಲೆಯಲ್ಲಿ  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದದಲ್ಲಿ ಸೀನಿಯರ್ ಪರೀಕ್ಷೆ ಬರೆದು ಅತ್ಯುತ್ತಮ ದರ್ಜೆಯಲ್ಲಿ ಪಾಸಾಗಿರುವ ಇವರು ನಂತರ ಬಹುವರ್ಷಗಳ ಕಾಲ ಸಂಗೀತದ ಅಭ್ಯಾಸವನ್ನೇ ವೃತ್ತಿಯ ಗಡಿಬಿಡಿಯಲ್ಲಿ ಮರೆತು ಬಿಟ್ಟಿದ್ದರು. ಚಂದ್ರಶೇಖರ ಪತ್ತಾರ ಅವರು ಕಟ್ಟಿಗೆಯಲ್ಲಿ ಸುಳು ಕೆತ್ತನೆ ಕೆಲಸದಲ್ಲಿ ಪರಿಣಿತರು.

ಎಲ್ಲ ತರಹದ ದೇವರ ಮೂರ್ತಿಗಳು ಹಾಗೂ ಕಲಾತ್ಮಕ ಕೆತ್ತನೆಯಲ್ಲಿ ಅವರದು ಪರಿಣಿತಿಯ ಕೈ ಚಳಕ. ಆದರೆ ತಮ್ಮಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಸಂಗೀತದವನ್ನು  ಹವ್ಯಾಸವಾಗಿ `ಮನೆಯಲ್ಲಿ ಮಹಾಮನೆ'ಯ ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ ಜೀವಂತವಾಗಿಟ್ಟಿದ್ದರು.

ನಂತರ ಮಹಾಮನೆಯ ಸದಸ್ಯರ ಪ್ರೇರಣೆಯಂತೆ ಸಂಗೀತದ ವಿದ್ಯೆಯನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಬೇಡಿ, ಇಲ್ಲಿ ಸಂಗೀತದ ಪಾಠ ಹೇಳುವ ಶಾಲೆಗಳಿಲ್ಲ. ನೀವ್ಯಾಕೆ ಸಂಗೀತದ ತರಗತಿ ಆರಂಭಿಸಬಾರದು ಎಂಬ ಮಾತುಗಳಿಂದಲೇ ಪ್ರೇರಣೆಯಾಗಿ ಹುಟ್ಟಿದ್ದೇ ವಿಶ್ವಕರ್ಮ ಸಂಗೀತ ವಿದ್ಯಾಲಯ.

ಕೇವಲ ಇಬ್ಬರು ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ ಈಗ 50 ವಿದ್ಯಾರ್ಥಿಗಳು ಸಂಗೀತಾಭ್ಯಾಸ ಮಾಡುತ್ತಿದ್ದಾರೆ. `ನಾನು ಸಂಗೀತದ ಪಂಡಿತನಲ್ಲ' ಎಂದು ವಿನಯದಿಂದಲೇ ಮಾತು ಆರಂಭಿಸುವ ಇವರು `ನನ್ನೊಳಗಿನ ಸಂಗೀತಗಾರ ಸತ್ತು ಹೋಗಬಾರದು ಎಂದೇ ಸಂಗೀತ ವಿದ್ಯಾಲಯ ಪ್ರಾರಂಭಿಸಿದ್ದೇನೆ, ನಾನು ಮಕ್ಕಳಿಗೆ ಕಲಿಸುತ್ತಿದ್ದೇನೆ ಎನ್ನುವದು ದೊಡ್ಡತನವಾಗುತ್ತದೆ. ನಾನೂ ಕಲಿಯುತ್ತಲೇ ನನ್ನಲ್ಲಿರುವ ಸ್ವಲ್ಪ ವಿದ್ಯೆಯನ್ನು ಮಕ್ಕಳಿಗೆ ಕಲಿಸುತ್ತ ನಡೆದಿದ್ದೇನೆ, ನಮ್ಮ ತಂದೆಯಿಂದ ನಾನು ಹೆಚ್ಚು ಕಲಿತಿಲ್ಲ.

ಆದರೆ ತಾಳಿಕೋಟಿಯ ಪ್ರಸಿದ್ಧ ಗವಾಯಿಗಳಾದ ಪ್ರಭುದೇವ ಸಾಲಿಮಠ ಅವರ ಮನೆಗೆ ಹೋಗಿ ನಾನು ಪಾಠ ಕಲಿತಿದ್ದೇನೆ ಅವರ ಪ್ರಭಾವ ನನ್ನ ಮೇಲೆ ಬಹಳ. ರೇಡಿಯೋ ಕೇಳುವುದು ನನ್ನ ಹವ್ಯಾಸ. ಬಾಲ್ಯದಲ್ಲಿ  ಪಂಡಿತ ಜಸರಾಜ ಗವಾಯಿ, ಭೀಮಸೇನ ಜೋಶಿ, ಪ್ರಭಾ ಅತ್ರೆ, ಪರ್ವೀನ ಸುಲ್ತಾನ,  ಪಂಡಿತ ಎಂ. ವೆಂಕಟೇಶಕುಮಾರ್ ಅವರ ಶಾಸ್ತ್ರೀಯ ಸಂಗೀತವನ್ನು ಕೇಳುತ್ತ ಅದರೊಂದಿಗೆ ಹಾಡುತ್ತಿದ್ದೆ. ಮನೆಯಲ್ಲಿ ಮಕ್ಕಳಿಗೆ ಇಂದು  ಸುಗಮ ಸಂಗೀತ, ವಚನ ಗಾಯನ ಹಾಗೂ ದಾಸ ಸಾಹಿತ್ಯವನ್ನು ಮಕ್ಕಳಿಗೆ ಕಲಿಸುತ್ತಿದ್ದೇನೆ' ಎನ್ನುತ್ತಾರೆ ಪತ್ತಾರ

ಇವರ ಕೆಲ ವಿದ್ಯಾರ್ಥಿಗಳು ವೇದಿಕೆಯಲ್ಲಿ ಸ್ವತಂತ್ರವಾಗಿ ಹಾಡುವ ಶಕ್ತಿ ಪಡೆದಿದ್ದಾರೆ. ಚಂದ್ರಶೇಖರ ಹಲವು ಕಾರ್ಯಕ್ರಮಗಳನ್ನು ನೀಡಿದ್ದು, ದಿನಕರ ದೇಸಾಯಿ, ಕುವೆಂಪು, ದ.ರಾ. ಬೇಂದ್ರೆ, ಎನ್.ಎಸ್.ಲಕ್ಷ್ಮಿನಾರಾಯಣಭಟ್ ಅವರ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.   ಈಗ ಇವರ ವಿದ್ಯಾಲಯದಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿದ್ಯೆಯನ್ನು ಕಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.