ADVERTISEMENT

ಬಿಜೆಪಿ, ಕಾಂಗ್ರೆಸ್‌ ಸಮಬಲ; ಖಾತೆ ತೆರೆದ ಜೆಡಿಎಸ್‌

ಜಿಲ್ಲೆಯಲ್ಲಿ ಯಾರ ಪರವೂ ಬೀಸದ ಅಲೆ; ದಶಕದ ಬಳಿಕ ಜಾತ್ಯತೀತ ಜನತಾದಳಕ್ಕೆ ಒಲಿದ ಸ್ಥಾನ

ಡಿ.ಬಿ, ನಾಗರಾಜ
Published 16 ಮೇ 2018, 9:31 IST
Last Updated 16 ಮೇ 2018, 9:31 IST
ವಿಜಯಪುರದ ಸೈನಿಕ ಶಾಲೆಯಲ್ಲಿ ಮಂಗಳವಾರ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಿತು. ಫಲಿತಾಂಶಕ್ಕಾಗಿ ಹೊರಭಾಗದ ಅಥಣಿ ರಸ್ತೆಯಲ್ಲಿ ಜಮಾಯಿಸಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಸೈನಿಕ ಶಾಲೆಯಲ್ಲಿ ಮಂಗಳವಾರ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಿತು. ಫಲಿತಾಂಶಕ್ಕಾಗಿ ಹೊರಭಾಗದ ಅಥಣಿ ರಸ್ತೆಯಲ್ಲಿ ಜಮಾಯಿಸಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಮಂಗಳ ವಾರ ಪ್ರಕಟಗೊಂಡಿದ್ದು, ಜಿಲ್ಲೆಯ ಮತದಾರರು ಮೂರು ಪಕ್ಷಗಳಿಗೆ ಮನ್ನಣೆ ನೀಡಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಸಮಬಲ ಸಾಧಿಸಿದ್ದರೆ, ದಶಕದ ಬಳಿಕ ಜೆಡಿಎಸ್‌ ಜಿಲ್ಲೆಯಲ್ಲಿ ಖಾತೆ ತೆರೆದಿದೆ.

ಬಬಲೇಶ್ವರ, ಇಂಡಿ, ಬಸವನ ಬಾಗೇವಾಡಿ ಮತ್ತೊಂದು ಅವಧಿಗೆ ‘ಕೈ’ ವಶವಾದರೆ, ವಿಜಯಪುರ ನಗರ, ದೇವರಹಿಪ್ಪರಗಿ, ಮುದ್ದೇಬಿಹಾಳದಲ್ಲಿ ಮುದುಡಿದ್ದ ತಾವರೆ ಅರಳಿದೆ. ಇದೇ ಮೊದಲ ಬಾರಿಗೆ ಮುದ್ದೇಬಿಹಾಳದಲ್ಲಿ ಕಮಲ ಅರಳಿರುವುದು ಬಿಜೆಪಿ ಪಾಳೆ ಯದ ಸಂತಸಕ್ಕೆ ಪಾರವೇ ಇಲ್ಲವಾಗಿದೆ.

ದಶಕದಿಂದ ಶಾಸಕರನ್ನೇ ಹೊಂದಿರದ ಜೆಡಿಎಸ್‌ ಈ ಬಾರಿ ನಾಗಠಾಣ ಮೀಸಲು, ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಕಾರ್ಯಕರ್ತರಲ್ಲಿ ಖುಷಿ ನೂರ್ಮಡಿಗೊಂಡಿದೆ.

ADVERTISEMENT

ಸಮ್ಮಿಶ್ರ ಸರ್ಕಾರದ ದಿಕ್ಸೂಚಿ: ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿ ರಚನೆಯಾ ಗಲಿರುವ ಸಮ್ಮಿಶ್ರ ಸರ್ಕಾರದ ದಿಕ್ಸೂಚಿ ಯಂತಿದೆ. 2004ರ ವಿಧಾನಸಭಾ ಚುನಾವಣೆಯಲ್ಲೂ ಇದೇ ಫಲಿತಾಂಶ ಜಿಲ್ಲೆಯಿಂದ ಹೊರಹೊಮ್ಮಿತ್ತು. ಆಗ ಬಿಜೆಪಿ, ಕಾಂಗ್ರೆಸ್‌ ತಲಾ ಮೂರು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರೆ, ಜೆಡಿಎಸ್‌, ಪಕ್ಷೇತರರು ತಲಾ ಒಂದು ಕ್ಷೇತ್ರದಲ್ಲಿ ವಿಜಯಿಯಾಗಿದ್ದರು. ಆ ಸಂದರ್ಭವೂ ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌, ಜೆಡಿಎಸ್‌–ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

ಪ್ರಸ್ತುತ ಚುನಾವಣಾ ಫಲಿತಾಂಶವೂ ಸಹ 2004ರ ಫಲಿತಾಂಶದ ದಿಕ್ಸೂ ಚಿಯೇ ಆಗಿದೆ. ಈಗಲೂ ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಿವೆ. ಈ ಬಾರಿಯೂ ಬಿಜೆಪಿ, ಕಾಂಗ್ರೆಸ್‌ ಸಮಬಲ ಸಾಧಿಸಿದ್ದರೆ, ಜೆಡಿಎಸ್‌ ಮಾತ್ರ ಎರಡು ಕ್ಷೇತ್ರಗಳಲ್ಲಿ ವಿಜಯಿಯಾಗಿದೆ. 2008ರಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸಿತ್ತು. ಕಾಂಗ್ರೆಸ್‌ ಮೂರು ಸ್ಥಾನ ಗಳಿಸಿತ್ತು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

2013ರಲ್ಲಿ ಕಾಂಗ್ರೆಸ್‌ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. ರಾಜ್ಯದಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಿಜೆಪಿ ಒಂದು ಸ್ಥಾನಕ್ಕಷ್ಟೇ ತೃಪ್ತಿ ಪಟ್ಟುಕೊಂಡಿತ್ತು. ಇದೀಗ ಪ್ರಕಟಗೊಂಡಿರುವ ಫಲಿತಾಂಶ ಸಹ ರಾಜ್ಯ ಫಲಿತಾಂಶದ ದಿಕ್ಸೂಚಿಯಾಗಿದೆ.

1999ರಲ್ಲಿ ಕಾಂಗ್ರೆಸ್‌ ಐದು, ಬಿಜೆಪಿ ಎರಡು, ಪಕ್ಷೇತರರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ದಶಕದ ಬಳಿಕ ಜೆಡಿಎಸ್‌: 1994ರಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದ ಜೆಡಿಎಸ್‌, ಜಿಲ್ಲೆಯ ವ್ಯಾಪ್ತಿಯಲ್ಲಿ ಮತ್ತೆ ಖಾತೆ ತೆರೆದಿದ್ದು 2004ರಲ್ಲಿ. ಈ ಎರಡೂ ಅವಧಿ ರಾಜ್ಯದ ಚುಕ್ಕಾಣಿ ಹಿಡಿದಿದ್ದು ವಿಶೇಷ.

2008, 2013ರಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ ಶಾಸಕರೇ ಇರಲಿಲ್ಲ. ಬಳ್ಳೊಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆರ್‌.ಕೆ.ರಾಠೋಡ ಶಾಸಕರಾಗಿ ಆಯ್ಕೆ ಯಾಗಿದ್ದೇ ಕೊನೆಯಾಗಿತ್ತು.

2018ರಲ್ಲಿ ಜೆಡಿಎಸ್‌ ಮತ್ತೆ ತನ್ನ ಹಳೆಯ ಕ್ಷೇತ್ರಗಳಾದ ಸಿಂದಗಿ, ಆಗಿನ ಬಳ್ಳೊಳ್ಳಿ, ಈಗಿನ ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದೆ. ರಾಜ್ಯದಲ್ಲಿ ಈ ಬಾರಿಯೂ ಮತ್ತೆ ಅಧಿಕಾರದ ಚುಕ್ಕಾಣಿಯ ಸಮೀಪವಿರುವುದು ಸಹ ವಿಶೇಷವಾಗಿದೆ.

ರಾಷ್ಟ್ರೀಯ ನಾಯಕರ ಪ್ರಚಾರ; ಸೋಲಿನ ಸರಣಿ

ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರ, ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಪ್ರಚಾರ ನಡೆಸಿದರೂ, ಎರಡೂ ಕ್ಷೇತ್ರಗಳಲ್ಲಿ ಆಯಾ ಪಕ್ಷಗಳು ಗೆಲುವು ಸಾಧಿಸುವಲ್ಲಿ ವಿಫಲವಾಗಿವೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಬ್ಬರೂ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೂ, ಬಿಜೆಪಿ ಗೆಲುವು ಸಾಧಿಸಿಲ್ಲ. ಜಿಲ್ಲೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಕಾಂಗ್ರೆಸ್‌ ಇಲ್ಲಿ ಗೆಲುವು ದಾಖಲಿಸಿರುವುದು ಗಮನಾರ್ಹ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಂತಿರುವ, ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಚುನಾವಣಾ ಪ್ರಚಾರ ನಡೆಸಿದರೂ, ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ದಾಖಲಿಸಿಲ್ಲ. ವಿಜಯಪುರದಲ್ಲಿ ಬಿಜೆಪಿಯ ಬಾವುಟ ಹಾರಾಡಿದರೆ, ನಾಗಠಾಣದಲ್ಲಿ ಜೆಡಿಎಸ್‌ ದಶಕದ ಬಳಿಕ ಮತ್ತೆ ಖಾತೆ ತೆರೆದಿದೆ.

ಸೋನಿಯಾಗಾಂಧಿ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರ ನಡೆಸಿದ್ದು ವಿಜಯಪುರದಲ್ಲಿ ಮಾತ್ರ. ಮೋದಿ, ಶಾ ಬಬಲೇಶ್ವರಕ್ಕೆ ಬಂದು ಹೋದರೂ; ಜಿಲ್ಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಪರ ಹವಾ ಮತಗಳಾಗಿ ಪರಿವರ್ತನೆಯಾಗಿಲ್ಲ. ಮತದಾರರು ಮೂರು ಪಕ್ಷಗಳಿಗೆ ಮನ್ನಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.