ADVERTISEMENT

ಭಗತ್‌ಸಿಂಗ್ ಯುವಜನತೆಗೆ ಆದರ್ಶವಾಗಲಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 10:15 IST
Last Updated 7 ಅಕ್ಟೋಬರ್ 2011, 10:15 IST

ವಿಜಾಪುರ: ನಗರದ ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆಯಲ್ಲಿ ಎ.ಐ.ಡಿ.ಎಸ್.ಓ. ಸಂಘಟನೆಯ ವತಿಯಿಂದ ದೇಶದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ  ಭಗತ್‌ಸಿಂಗ್ ಅವರ 104ನೇ  ಜನ್ಮದಿನಾಚರಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬುಧವಾರ, ಸೂಕ್ತಿ ಹಾಗೂ ಛಾಯಾ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಪ್ರದರ್ಶನದಲ್ಲಿ ಮಹಿಳಾ ವಿಶ್ವ ವಿದ್ಯಾಲಯದ ಎಂ.ಎಸ್.ಡಬ್ಲ್ಯೂ ವಿಭಾಗದ ಉಪನ್ಯಾಸಕ ಸಂಜೀವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವಜನರ ಎದುರು ಕೇವಲ ಸಿನಿಮಾ ನಟ- ನಟಿಯರು, ಕ್ರೀಡಾಪಟುಗಳೇ ನಮ್ಮ ಆದರ್ಶ ನಾಯಕರೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ ದೇಶಕ್ಕೋಸ್ಕರ ಹಗಲಿರುಳು ಹೋರಾಡಿ ನಗುನಗುತ್ತಾ ಗಲ್ಲುಗಂಬವೇರಿದ ಭಗತ್ ಸಿಂಗ್ ಅವರು ಈಗಿನ ವಿದ್ಯಾರ್ಥಿಗಳಿಗೆ, ಯುವಜನರಿಗೆ ನಿಜಕ್ಕೂ ಆದರ್ಶವಾಗಬೇಕು ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ವಿಚಾರಗಳ ಮೂಲಕ ಶ್ರೇಷ್ಠ ನಾಯಕರಾದ ಭಗತ್ ಸಿಂಗ್ ರವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅವರ ವಿಚಾರಗಳನ್ನು ಎಲ್ಲೆಲ್ಲೂ ಹರಡಬೇಕೆಂದು ಹೇಳಿದರು.

ಎಸ್.ಯು.ಸಿ.ಐ.ನ  ಜಿಲ್ಲಾ ಕಾರ‌್ಯದರ್ಶಿ ಬಿ. ಭಗವಾನರೆಡ್ಡಿ ಮಾತನಾಡಿ, ಉಪವಾಸ, ಸತ್ಯಾಗ್ರಹಗಳಂತಹ ಸಂಧಾನಪರ ಹೋರಾಟದಲ್ಲಿ ಸೊರಗಿ ಹೋಗುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪರ್ಯಾಯವಾಗಿ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದ ಕ್ರಾಂತಿಕಾರಿ ವ್ಯಕ್ತಿ `ಭಗತ್‌ಸಿಂಗ್~. ಆದರೆ ಅವರ  ವಿಚಾರಗಳನ್ನು ಮುಚ್ಚಿಡಲಾಗುತ್ತಿದೆ ಎಂದು ವಿಷಾದಿಸಿದರು.

ಎ.ಐ.ಯು.ಟಿ.ಯು.ಸಿ. ಜಿಲ್ಲಾ ಸಂಚಾಲಕರಾದ ಮಲ್ಲಿಕಾರ್ಜುನ ಎಚ್.ಟಿ ಮಾತನಾಡಿ, ಭಗತ್‌ಸಿಂಗ್ ಅವರು ಕೇವಲ ವಿದ್ಯಾರ್ಥಿ- ಯುವಜನರ ನಾಯಕರಲ್ಲ, ಎಲ್ಲಾ ಶೋಷಿತರ, ಬಡವರ ಹಾಗೂ ನಿರುದ್ಯೋಗಿಗಳ ನಾಯಕರು ಎಂದರು.

ಹಲವು ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗತ್‌ಸಿಂಗ್ ಅವರ ಭಾವಚಿತ್ರ ಹಾಗೂ ಸೂಕ್ತಿಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಎ.ಐ.ಡಿ.ಎಸ್.ಓ.ನ ಉಪಾಧ್ಯಕ್ಷ ವಿದ್ಯಾನಂದ ಬಸರಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾಕಾರರಾದ ಗುರುರಾಜ, ಮಂಜು ಚೌಧರಿ, ಮಂಜು ಬಂದಾಳ, ಆನಂದ, ಶ್ರೀಧರ್, ದಯಾನಂದ ಹಾಗೂ ಸಂಘಟನೆಯ ಹಲವು ಮುಖಂಡರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.