ADVERTISEMENT

ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

ಕೆ.ಎಸ್.ಗಿರೀಶ್
Published 21 ಡಿಸೆಂಬರ್ 2013, 4:59 IST
Last Updated 21 ಡಿಸೆಂಬರ್ 2013, 4:59 IST

ಮೂಡುಬಿದಿರೆ: ಜನಪದ ಶೈಲಿಯ ವೇಷ ಧರಿಸಿದ ಕಲಾವಿದರು ತಮ್ಮ ಶಕ್ತಿಯನ್ನೆಲ್ಲಾ ತಮ್ಮ ಡೊಳ್ಳಿನ ಮೇಲೆ ಪ್ರಯೋಗ ಮಾಡುತ್ತಿದ್ದರೆ, ಅತ್ತ ಸಭಾಂಗಣದಲ್ಲಿದ್ದ ವೀಕ್ಷಕರು ಅದಕ್ಕೆ ತಕ್ಕಂತೆ ಕುತ್ತಿಗೆ ಕುಣಿಸುತ್ತಿದ್ದ ದೃಶ್ಯಕ್ಕೆ ಇಲ್ಲಿನ ರತ್ನಾಕರವರ್ಣಿ ವೇದಿಕೆ ಗುರುವಾರ ಸಾಕ್ಷಿಯಾಯಿತು.

ಸಮಾರಂಭ ಉದ್ಘಾಟನೆಯ ನಂತರ ರಾತ್ರಿ ನಿಗದಿತ ಸಮಯಕ್ಕೆ ಸರಿಯಾಗಿ ವೇದಿಕೆ ಏರಿದ ಡೊಳ್ಳು ಕಲಾವಿದರು ವಿವಿಧ ವಿನ್ಯಾಸಗಳಲ್ಲಿ ಡೊಳ್ಳು ಬಾರಿ­ಸುವ ಮೂಲಕ ತಮ್ಮ ಜಾನಪದ ಪ್ರತಿಭೆಯನ್ನು ಅನಾವರಣ­ಗೊಳಿಸಿ­ದರು.

ನಂತರ ನಡೆದ ಬೀಸು ಕಂಸಾಳೆ ನೃತ್ಯ ಇಡೀ ಸಭಿಕರಿಗೆ ರೋಮಾಂಚನವನ್ನೇ ಉಂಟು ಮಾಡಿತು. ‘ತಂದಾನನ ತಂದನ್ನ ತಾನನ ತಂದೇನಾನ ತಂದಾನನ ತಂದನ್ನ ತಾನನ’ ಎಂಬ ಪುನರಾ­ವರ್ತನೆಯ ಸಾಲುಗಳು ಜಾಳಾಗಿ ಕೇಳದೆ, ಒಂದು ವಿಧದ ಪ್ರಾಸಬದ್ಧತೆ­ಯನ್ನು ತಂದಿತು. ಒಬ್ಬರ ಮೇಲೊಬ್ಬರು, ಅವರ ಮೇಲೊಬ್ಬರು ಹತ್ತಿ ಹಾಡಿಗೆ ತಕ್ಕಂತೆ ಕಂಸಾಳೆ ಬೀಸುತ್ತಾ ಹಾಕುತ್ತಿದ್ದ ಹೆಜ್ಜೆಗೆ ಇಡೀ ಸಭೆ ರೋಮಾಂಚನಗೊಂಡಿತು. ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಲಿತವಿರುವ ಈ ಕುಣಿತ ಇಂದು ಕರಾವಳಿಯ ಜನತೆ ರಸದೌತಣವನ್ನೇ ನೀಡಿತು.

ವೀರಗಾಸೆ ವೇಷ ತೊಟ್ಟ ಹತ್ತಾರು ಕಲಾವಿದರು ಕೈಯಲ್ಲಿ ಖಡ್ಗವನ್ನು ಹಿಡಿದು ಏಕಕಾಲಕ್ಕೆ ವೇದಿಕೆಯೇರಿ ನಿಂತು, ಆರ್ಭಟಿಸುತ್ತಾ ಕುಣಿತಕ್ಕೆ ಹೆಜ್ಜೆ ಹಾಕಿ ಮಾಡಿದ ನೃತ್ಯವು ಸಭಿಕರಿಗೆ ಮೋಡಿ ಮಾಡಿತು.

ಒಂದು ಕಡೆ ಈ ರೀತಿ ರಾಜ್ಯದ ವಿವಿಧ ಭಾಗದ ಜನಪದ ನೃತ್ಯಗಳು ನಡೆಯು­ತ್ತಿದ್ದರೆ, ಡಾ.ವಿ.ಎಸ್. ಆಚಾರ್ಯ ವೇದಿ­ಕೆಯಲ್ಲಿ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರೇ ಬರೆದು ನಿರ್ದೇ­ಶಿಸಿದ ಶರಶಯ್ಯೆ ನಾಟಕ ಕಲಾಸಕ್ತರಿಗೆ ಭರಪೂರ ಮನರಂಜನೆಗೆ ಕಾರಣ­ವಾಯಿತು. ಅದರಲ್ಲೂ ಮುಂಬೈಯ ಕಲಾ­ಜಗತ್ತು ತಂಡದ ಕಲಾವಿದರ ಮನೋಜ್ಞ ಅಭಿನಯ ನೆರೆದಿದ್ದವರ ಕರತಾಡನವನ್ನು ಪಡೆಯುವಲ್ಲಿ ಯಶ ಕಂಡಿತು.

ಮತ್ತೊಂದು ವೇದಿಕೆಯಾದ ಕೆ.ವಿ. ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಹೆಗ್ಗೋಡಿನ ನೀನಾಸಂ ತಂಡದವರು ಪ್ರಸ್ತುತಪಡಿಸಿದ ನಟರಾಜ ಹೊನ್ನವಳ್ಳಿ ಅವರ ನಿರ್ದೇಶನದ ಜುಗಾರಿ ಕ್ರಾಸ್ ಅಪರೂಪದ ನಾಟಕವೊಂದನ್ನು ರಸಿಕರು ಆಸ್ವಾದಿಸುವಂತೆ ಮಾಡಿತು.

ಏಕಕಾಲಕ್ಕೆ ಮೂರು ವೇದಿಕೆಗಳಲ್ಲಿ ಅಪರೂಪದ ನಾಟಕಗಳು, ಜನಪದ ನೃತ್ಯಗಳು ಮೂಡಿ ಬರುತ್ತಿದ್ದರೆ ಕೆಲವರು ಯಾವುದನ್ನು ನೋಡುವುದು ಯಾವುದನ್ನು ಬಿಡುವುದು ಎಂದು ಎಡತಾಕುತ್ತಿದ್ದ ದೃಶ್ಯವೂ ಕಾಲೇಜಿನ ಆವರಣದಲ್ಲಿ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.