ADVERTISEMENT

ಮಾಗಿಯ ಚಳಿಗೆ ನಡುಗಿದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:53 IST
Last Updated 24 ಡಿಸೆಂಬರ್ 2013, 6:53 IST
ಮಾಗಿಯ ಚಳಿಗೆ ನಸುಕಿನಲ್ಲಿ ಆಲಮಟ್ಟಿಯ ಮನಮೋಹಕ ದೃಶ್ಯ
ಮಾಗಿಯ ಚಳಿಗೆ ನಸುಕಿನಲ್ಲಿ ಆಲಮಟ್ಟಿಯ ಮನಮೋಹಕ ದೃಶ್ಯ   

ಆಲಮಟ್ಟಿ: ಮಾಗಿಯ ಚಳಿ...ಚಳಿಗೆ ಆಲಮಟ್ಟಿಯ ಸುತ್ತಮುತ್ತಲಿನ ಜನ ಗಡ ಗಡ ನಡಗುತ್ತಿದ್ದಾರೆ.

ಕಳೆದ ಐದಾರು ದಿನಗಳಿಂದ ಬೀಸುತ್ತಿ ರುವ ತಂಪು ಗಾಳಿ, ಕಡಿಮೆ ಮಟ್ಟಕ್ಕಿಳಿದ ಉಷ್ಣಾಂಶ ಇದರಿಂದ ಜನತೆ ಕಂಗೆಟ್ಟಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಅಘೋಷಿತ ಕರ್ಫ್ಯೂ ವಿಧಿಸಿದ ರೀತಿಯಲ್ಲಿ ಜನ ತಿರುಗುವುದು ಕಡಿಮೆಯಾಗಿದೆ.

ಆಲಮಟ್ಟಿಯಲ್ಲಿ ಭಾನುವಾರ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್,  ಗರಿಷ್ಠ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 

ಆಲಮಟ್ಟಿಯ ಸುತ್ತಲೂ ಕೃಷ್ಣಾ ನದಿ ಇದೆ. ಮಧ್ಯಾಹ್ನದ ಬಿಸಿಲಿಗೆ ನೀರು ಕಾಯ್ದು ಸಂಜೆಯ ವೇಳೆಗೆ ಬಿಸಿ ಗಾಳಿ ಬೀಸಿದರೂ ನಸುಕಿನ ವೇಳೆಯಲ್ಲಿ ಈ ಚಳಿ ಸಾಕಷ್ಟು ಜನರನ್ನು ಕಾಡುತ್ತಿದೆ. ಸಮೀಪದ ವಿಜಾಪುರದಲ್ಲಿ ಮಾತ್ರ 8 ಡಿಗ್ರಿ ಸೆಲ್ಸಿಯಸ್‌ ವರೆಗೂ ಉಷ್ಣಾಂಶ ದಾಖಲಾಗಿದ್ದರೂ, ಆಲಮಟ್ಟಿಯಲ್ಲಿ ಮಾತ್ರ ಇನ್ನೂವರೆಗೂ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್ ಕ್ಕಿಂತ ಕಡಿಮೆಯಾಗಿಲ್ಲ. ಇದಕ್ಕೆ ಕಾರಣ ಆಲಮಟ್ಟಿಯ ಹಿನ್ನೀರು. ಏಕೆಂದರೇ ಆಲಮಟ್ಟಿಯ ಜಲಾಶಯದ ಹಿನ್ನೀರು ಬೆಳಿಗ್ಗೆಯಿಂದ ಸಂಜೆಯ ವರೆಗೂ ಸೂರ್ಯನ ಪ್ರಖರತೆಗೆ ಕಾಯ್ದು ಸಂಜೆ ಶಾಖವನ್ನು ಬಿಟ್ಟು ಕೊಡುವುದರಿಂದ ಉಷ್ಣಾಂಶ ವಿಜಾಪುರ ದಷ್ಟು ಕಡಿಮೆಯಾಗಿಲ್ಲ ಎನ್ನುತ್ತಾರೆ ಕರ್ನಾಟಕ ಪ್ರಕೃತಿ ವಿಕೋಪ ಕೇಂದ್ರದ ನಿರ್ದೇಶಕ ಡಾ ವಿ.ಎಸ್. ಪ್ರಕಾಶ.

ವಿಜಾಪುರದಲ್ಲಿ 12–-12-–2013 ರಂದು ರಾತ್ರಿ ದಾಖಲೆಯಾದ ಅತಿ ಕನಿಷ್ಠ ಉಷ್ಣಾಂಶ 6.8 ಡಿಗ್ರಿ ಸೆಲ್ಸಿಯಸ್ ಕಳೆದ ವರ್ಷವೂ ದಾಖಲಾಗಿತ್ತು. 116 ವರ್ಷಗಳ ಹಿಂದೆ ಅಂದರೆ 1897 ರಲ್ಲಿ ಒಮ್ಮೆ ವಿಜಾಪುರ ದಲ್ಲಿ 6.7 ಡಿಗ್ರಿ ದಾಖಲಾಗಿದ್ದು ಇಲ್ಲಿಯವರೆಗಿನ ವಿಜಾಪುರ ಜಿಲ್ಲೆಯ ಮಟ್ಟಿಗೆ ಅತ್ಯಂತ ಕನಿಷ್ಠ ಉಷ್ಣಾಂಶ ವಾಗಿದೆ ಎನ್ನುತ್ತಾರೆ ಅವರು. ಮಕರ ಸಂಕ್ರಾಂತಿವರೆಗೂ ಈ ರೀತಿಯ ಚಳಿಯ ಅನುಭವ ಆಗುತ್ತಲೇ ಇರುತ್ತದೆ, ಆದರೂ ಬರ ಬರುತ್ತಾ ಉಷ್ಣಾಂಶ ಹೆಚ್ಚಾಗುತ್ತಾ ಸಾಗುತ್ತದೆ ಎನ್ನುತ್ತಾರೆ ಅವರು.

ಪ್ರತಿನಿತ್ಯವೂ ಆಲಮಟ್ಟಿಯ ಸುಂದರ ಉದ್ಯಾನವನದ ಪರಿಸರದಲ್ಲಿ ಕಾಲ್ನಡಿಗೆ, ವಿವಿಧ ವ್ಯಾಯಾಮ ಮಾಡುತ್ತಿದ್ದ ಜನರ ಸಂಖ್ಯೆ ಕಡಿಮೆಯಾಗಿದೆ.
ಬೆಳಿಗ್ಗೆ 7 ಗಂಟೆಯವರೆಗೂ ಉದ್ಯಾನದ ಪರಿಸರದಲ್ಲಿ ಮಂಜುಗಟ್ಟಿದ ವಾತಾವರಣವಿರುತ್ತದೆ. ಅಲ್ಲದೇ ಗಾಳಿಯಲ್ಲಿ ನೀರಿನ ತೇವಾಂಶವೂ ಕುಸಿದಿದ್ದು, ಇದರಿಂದಾಗಿಯೂ ಚಳಿಯ ಆರ್ಭಟ ಹೆಚ್ಚಾಗಿದೆ.

ಯಾವಾಗಲೂ ಬೇಸಿಗೆಯಲ್ಲಿಯೇ ಕಾಲಕಳೆಯುವ ಈ ಭಾಗದ ಜನತೆಗೆ ಈ ಥಂಡಿ ಅಕ್ಷರಶಃ ಹೊರಗೆ ಬಾರದಂತೆ ಮಾಡಿದೆ. ಆದರೆ ಹಳ್ಳಿಗರ ಕಡೆ ಹೋದರೆ, ಅಲ್ಲಿನ ರೈತರು ತಮ್ಮ ಕೃಷಿ ಚಟುವಟಿಕೆ ಯಲ್ಲಿ ಮಾತ್ರ ಮಗ್ನರಾಗಿದ್ದು, ರೈತನ ಕಠಿಣ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ. ಈ ಭಾಗದಲ್ಲಿ ಹೆಚ್ಚಾಗಿ ರೈತ ಬೆಳೆದ ತೊಗರಿ, ಕಡಲೆ, ಸಜ್ಜೆ, ಜೋಳಗಳಿಗೆ ಈ ಚಳಿ ತೇವಾಂಶ ಕಾಪಾಡಲು ನೆರವಾಗಿದೆ ಎಂದು ಹಲವು ರೈತರು ಅಭಿಪ್ರಾಯ ಪಡುತ್ತಾರೆ.

ಕಳೆದ ಒಂದು ತಿಂಗಳಿಂದ  ವಿಪರೀತ ಚಳಿಯಿಂದಾಗಿ ಶೀತ, ಕೆಮ್ಮು, ನೆಗಡಿ, ಜ್ವರ, ಆಸ್ತಮಾ ದಿಂದ ಬಳಲುವವರ ಸಂಖ್ಯೆಯೂ ವೃದ್ಧಿಯಾಗಿದೆ ಎನ್ನುತ್ತಾರೆ ಖಾಸಗಿ ವೈದ್ಯ ಡಾ ಸಿ.ಐ. ಕಾಜಗಾರ.

ಥರಗಟ್ಟುವ ಮಂಜಿನ ಚಳಿ ಯಲ್ಲಿಯೂ ಆಲಮಟ್ಟಿಯ ಉದ್ಯಾನ ವನದ ಬಳಿ ಮಂಜಿನ ನೋಟ ಮುದ ನೀಡುತ್ತಿದೆ. ಸಂಜೆ ಆರರಿಂದ ಬೆಳಿಗಿನ 9 ರವರೆಗೂ ಮೈಕೊರೆಯುವ ಚಳಿ ಇದ್ದರೇ, ಮಧ್ಯಾಹ್ನ ಮಾತ್ರ ಸುಡು ಸುಡು ಬಿಸಲಿನ ಅನುಭವ ಆಗುತ್ತಿದೆ. ನೆತ್ತಿ ಮೇಲೆ ಮಧ್ಯಾಹ್ನ ಸೂರ್ಯನ ಪ್ರಖರತೆ ಹೆಚ್ಚಾಗಿದೆ.
ವಿಪರೀತ ಚಳಿಯಿಂದಾಗಿ ಎಲ್ಲೆಡೆ ಹಸುರೀಕರಣ ಹೆಚ್ಚಾಗಿದ್ದು, ದನ ಕರುಗಳನ್ನು ಮೇಯಿಸಲು ಉತ್ತಮ ವಾಗಿದೆ, ಹೆಚ್ಚು ಹೆಚ್ಚು ತಾಜಾ ಹಸಿರು ಮೇವು ಸಿಗುತ್ತಿದೆ ಎಂದು ಅನೇಕ ಕುರಿಗಾರರು ಅಭಿಪ್ರಾಯಪಡುತ್ತಾರೆ .

ಹೃದಯರೋಗಿಗಳು, ರೋಗಿಗಳು, ಆಸ್ತಮಾದಿಂದ ಬಳಲುವವರು ಹಾಗೂ ಹಿರಿಯ ಜೀವಿಗಳು ಬೆಳಿಗಿನ ಜಾವ ವಾಕಿಂಗ್ ಮೊದಲಾದ ಹೊರ ಸಂಚಾರ ಮಾಡುವುದನ್ನು ಕಡಿಮೆ ಮಾಡಬೇಕು ಎನ್ನುತ್ತಾರೆ ಖಾಸಗಿ ವೈದ್ಯ ಡಾ ಎಸ್.ಎಸ್. ರೇವಡಿ.

ಆಲಮಟ್ಟಿಯ ಹಿನ್ನೀರಿಗೆ ಪ್ರತಿ ವರ್ಷವೂ ಬರುತ್ತಿದ್ದ ಅಪರೂಪದ ಪಕ್ಷಿಗಳ ಸಂಖ್ಯೆಯಲ್ಲಿಯೂ ಕಡಿಮೆ ಯಾಗಿದೆ ಎಂದು ಆತಂಕ ವ್ಯಕ್ತಪಡಿಸು ತ್ತಾರೆ ಆರ್ಎಫ್ಓ ಎಸ್.ಎಂ. ಖಣದಾಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.