ADVERTISEMENT

ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 5:55 IST
Last Updated 16 ಸೆಪ್ಟೆಂಬರ್ 2011, 5:55 IST

ತಾಳಿಕೋಟೆ: ಪಟ್ಟಣದಲ್ಲಿ ಎರಡು ಕಡೆ ತರಕಾರಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಬೇಕು. ರಸ್ತೆ ಪಕ್ಕದಲ್ಲಿ ಈ ಹಿಂದಿನಂತೆ ಕುಳಿತು ತರಕಾರಿ ಮಾರಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದ ತರಕಾರಿ ಮಾರಾಟಗಾರರು ಬುಧವಾರ ಪಟ್ಟಣದಲ್ಲಿ ತಮ್ಮ ತರಕಾರಿ ಮಾರಾಟವನ್ನು ಬಂದ್ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ನಡೆಸಿದರು.

ನಂತರ ಪುರಸಭೆಗೆ ಆಗಮಿಸಿದ ವ್ಯಾಪಾರಿಗಳು ತಮ್ಮ ಅಹವಾಲನ್ನು ಪುರಸಭೆಗೆ ಸಲ್ಲಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ಪಟ್ಟಣದಲ್ಲಿ ನಿರ್ಮಿಸಲಾಗಿರುವ ತರಕಾರಿ ಮಾರುಕಟ್ಟೆ ಮಳಿಗೆಗಳು ಚಿಕ್ಕವು ಮತ್ತು ತುಂಬಾ ಎತ್ತರದ ಕಟ್ಟೆಗಳಿವೆ.
 
ಪಕ್ಕದಲ್ಲಿಯೇ ಇರುವ ಮಾಂಸದಂಗಡಿಗಳು, ಅದರಿಂದ ಹೊರಬರುವ ಕೆಟ್ಟವಾಸನೆ, ಮಾರುಕಟ್ಟೆ ಆವರಣದಲ್ಲಿಯೇ ಹಾಕಲಾಗಿರುವ ಸಾರ್ವಜನಿಕ ತಿಪ್ಪೆಗುಂಡಿಗಳು, ಇರುವುದರಿಂದ ಇಲ್ಲಿ ಕುಳಿತು ತರಕಾರಿ ಮಾರಲು ಸಾಧ್ಯವಾಗುವುದಿಲ್ಲ. ಅಲ್ಲದೇ ಇದು ಸಾರ್ವಜನಿಕರಿಗೆ ದೂರವಾಗುತ್ತದೆ ಎಂದು ಅವರು ಮನವಿಯಲ್ಲಿ ಆರೋಪಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಪುರಸಭಾ ಸದಸ್ಯ ಮುತ್ತಪ್ಪ ಚಮಲಾಪುರ, ತರಕಾರಿ ವ್ಯಾಪಾರಿಗಳಿಗಾಗಿ ನಿರ್ಮಿಸಿರುವ ಪ್ರಾಂಗಣದಲ್ಲಿ ಅವಶ್ಯ ಬದಲಾವಣೆಗಳನ್ನು ಮಾಡಿಕೊಡಲು ಇದೇ 17ರಂದು ಜರುಗಲಿರುವ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ  ನಿರ್ಣಯ ಕೈಗೊಳ್ಳಲಾಗುವುದು. ಆದರೆ ರಸ್ತೆ ಪಕ್ಕದಲ್ಲಿ ಮಾರಾಟ ಮಾಡಲಾಗದು. ಇದು ಸಂಚಾರಕ್ಕೆ ವ್ಯತ್ಯಯವುಂಟುಮಾಡುವುದರಿಂದ ಅವಕಾಶ ನೀಡಲಾಗದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮರೆಪ್ಪ ದಾಯಿ, ಸದಸ್ಯರಾದ ಸುರೇಶ ಹಜೇರಿ, ಮುರ್ತುಜಾ ಅವಟಿ ಮೊದಲಾದವರು ಹಾಜರಿದ್ದರು. ರ‌್ಯಾಲಿಯಲ್ಲಿ ಭಾಗವಾನ ಸಮಾಜದ ಅಧ್ಯಕ್ಷ ಸದ್ದಾಮ್ ಹುಸೇನ್, ಬೀಳಗಿ, ಅಬ್ದುಲ್ ಲತೀಫ್ ಬೀಳಗಿ, ಲಾಡ್ಲೇಸಾಬ್ ಚೌದ್ರಿ, ಇಮಾಮ್‌ಸಾಬ್ ಚೌದ್ರಿ, ಅಲ್ಲಿಸಾ ಹೆಬ್ಬಾಳ, ರಫೀಕ್ ಸೌದಾಗರ, ಅಬ್ದುಲ್‌ಗನಿ ಚೌದ್ರಿ, ಶೌಕತ್ ಬೀಳಗಿ, ಮಕ್ತುಮಸಾಬ ಬಳಗಾನೂರ ಮೊದಲಾದವರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.