ADVERTISEMENT

ರಂಜಿಸಿದ ರನ್ನ ಸಾಂಸ್ಕೃತಿಕ ವೈಭವ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 9:09 IST
Last Updated 27 ಡಿಸೆಂಬರ್ 2012, 9:09 IST

ಬಾಗಲಕೋಟೆ: ಮುಧೋಳ ಪಟ್ಟಣದ ರನ್ನ ಕ್ರೀಡಾಂಗಣದಲ್ಲಿ ಬುಧವಾರ ನಡೆದ `ರನ್ನ ವೈಭವ'ದ ಕೊನೆಯ ದಿನದ ಸಾಂಸ್ಕೃತಿಕ  ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.

ಹಂಸಲೇಖ ಉಣಬಡಿಸಿದ ಸಂಗೀತ ಸುಧೆ, ಪತ್ರಕರ್ತ, ಹೊಳೆ ಆಲೂರಿನ ಶಿವಾನಂದ ಕೆಲೂರ ನೇತೃತ್ವದ ಅಂಧ ಮಕ್ಕಳ ತಂಡ ನಡೆಸಿಕೊಟ್ಟ ಆಕರ್ಷಕ ನಾಟ್ಯ ಯೋಗ, ಬೆಂಗಳೂರಿನ ಮಂಜುಳಾ ಪರಮೇಶ್ ನೇತೃತ್ವದ ಸಪ್ತಸ್ವರ ಆರ್ಟ್ ಕ್ರಿಯೇಶನ್ಸ್‌ನವರು ನಡೆಸಿಕೊಟ್ಟ ನೃತ್ಯ ಸಂಭ್ರಮ, ಹಾವೇರಿಯ ವಿರೇಶ ಬಡಿಗೇರ ತಂಡದ ಜಾನಪದ ಸಂಗೀತ, ಗುಜರಾತ್‌ನ ಧಕ್ಷಾ ಜೋಶಿ ತಂಡದ ಗರ್ಭಾ ನೃತ್ಯ, ಚೆನ್ನೈನ ಎಸ್.ಬಾಲೇಶ್ ತಂಡದ ವಾದ್ಯ ಸಂಗಮ ಹಾಗೂ ರನ್ನ ವೈಭವದ ಕೊನೆಯ ಕಾರ್ಯಕ್ರಮವಾಗಿ ಬೆಂಗಳೂರ ನಾಟಕ ಅಕಾಡೆಮಿ ಬಸವರಾಜ ಪಂಚಗಲ್ಲ ತಂಡ ಪ್ರದರ್ಶಿಸಿದ `ಧರ್ಮಾಧಿಕಾರಿ' ನಾಟಕ ಪ್ರೇಕ್ಷರ ಮನಸೂರೆಗೊಂಡಿತು.

ಕಲಾವಿದ ನಟರಾಜ ಮಹಾಜನ ಅವರು ಮೂಗಿನಲ್ಲಿ ಶಹನಾಯಿ ವಾದನ ಹೊಮ್ಮಿಸುವ ಮೂಲಕ ಕೊನೆಯ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ವೈಭವವನ್ನು ಇಮ್ಮಡಿಗೊಳಿಸಿದರು.

ಉತ್ಸವದ ಅಂಗವಾಗಿ ಪ್ರತಿ ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಲಕ್ಷಾಂತರ ಪ್ರೇಕ್ಷಕರು ವೀಕ್ಷಿಸಿ ಆನಂದಿಸಿದರು. ಮೈಕೊರೆಯುವ ಚಳಿಯನ್ನು ಲೆಕ್ಕಿಸದೇ ಸಂಜೆಯಾಗುತ್ತಿದ್ದಂತೆ ಬೈಕ್, ಕಾರು, ಬಸ್ ಏರಿ ರನ್ನ ಕ್ರೀಡಾಂಗಣದತ್ತ ಸಾವಿರಾರು ಜನರು ಆಗಮಿಸುತ್ತಿದ್ದ ಕಾರಣ ಮುಧೋಳ ಪಟ್ಟಣದ ರಸ್ತೆ ಜನ-ವಾಹನ ದಟ್ಟಣೆಯಿಂದ ತುಂಬಿತುಳುಕುತ್ತಿತ್ತು.

ಒಂದು ಲಕ್ಷ ಮಂದಿ ಊಟ ಸವಿದರು!
ಮೂರು ದಿನಗಳ `ರನ್ನ ವೈಭವ' ಅಕ್ಷರಶಃ ಧರ್ಮಛತ್ರವಾಗಿ ಮಾರ್ಪಟ್ಟಿತ್ತು. ಸುಮಾರು ಒಂದು ಲಕ್ಷ ಮಂದಿ  ತಿಂಡಿ, ಊಟದ ರುಚಿ ನೋಡಿದ್ದಾರೆ.
ಪ್ರಥಮ ದಿನ 30 ಸಾವಿರ, ಎರಡನೇ ದಿನ 35 ಸಾವಿರ ಮತ್ತು ಮೂರನೇ ದಿನ 35ರಿಂದ 40 ಸಾವಿರ ಜನ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ತಿಂಡಿ ಮತ್ತು ಊಟ ಸೇವಿಸಿದ್ದಾರೆ ಎಂಬುದು ಆಹಾರ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಲೆಕ್ಕಾಚಾರ.

ಈ ಕುರಿತು ಬುಧವಾರ `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಅವರು,  ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮತ್ತು ಕೆಎಫ್‌ಸಿಯ 50 ಸಿಬ್ಬಂದಿ ಆಹಾರ ವಿಭಾಗದ ಉಸ್ತುವಾರಿ ನೋಡಿಕೊಂಡಿದ್ದೇವೆ ಎಂದರು.

ಗುಳೇದಗುಡ್ಡದ ದಿನೇಶಗೌಡ ನೇತೃತ್ವದ 400 ಬಾಣಸಿಗರು ಅಡುಗೆ ತಯಾರಿಕೆಯಲ್ಲಿ ನಿರತರಾಗಿದ್ದರು. ಅಡುಗೆ ಬಡಿಸಲು ಮತ್ತು ಸಹಾಯಕ್ಕಾಗಿ  ಪ್ರತಿದಿನ 100 ಮಂದಿ ಅಂಗನವಾಡಿ ಕಾರ್ಯಕರ್ತರು, 50 ಮಂದಿ ಬಿಸಿಯೂಟ ತಯಾರಕರು, ಮುಧೋಳದ ವಿವಿಧ ಕಾಲೇಜಿನ 100 ಮಂದಿ ಡಿ.ಇಡಿ, ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರು ಹಾಗೂ 60 ಮಂದಿ ಮಹಾಲಿಂಗಪುರದ ಮಹಿಳಾ ಸಂಘದ ಸದಸ್ಯರು ಪ್ರತಿ ದಿನ ರನ್ನ ವೈಭವ ವೀಕ್ಷಣೆಗೆ ಆಗಮಿಸುವರ ಊಟದ ವ್ಯವಸ್ಥೆಯನ್ನು ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗದಿಂದ 70 ಸಾವಿರ ಅಡಿಕೆ ಹಾಳೆ ತಟ್ಟೆಗಳನ್ನು ತರಿಸಲಾಗಿತ್ತು. ಕೊರತೆಯಾದ ಕಾರಣ ಮತ್ತೆ 30 ಸಾವಿರ ಅಡಿಕೆ ಹಾಳೆ ತಟ್ಟೆಗಳನ್ನು ಸ್ಥಳೀಯವಾಗಿ ಖರೀದಿಸಲಾಯಿತು ಎಂದರು.

ಗಮನಸೆಳೆದ ಕಾಂಡೋಮ್ ಪ್ರಚಾರ!
ಮುಧೋಳದಲ್ಲಿ ನಡೆಯುತ್ತಿರುವ ರನ್ನ ವೈಭವದ ಕೊನೆಯ ದಿನವಾದ ಬುಧವಾರ ಯುವಜನರನ್ನು ಅತಿಯಾಗಿ ಸೆಳೆದದ್ದು ಕಾಂಡೋಮ್!
ಹಿಂದೂಸ್ತಾನ್ ಲಿವರ್ ಲಿಮಿಟೆಡ್(ಎಚ್‌ಎಲ್‌ಎಲ್) ಪ್ರಾಯೋಜಿತ `ಕಾಂಡೋಮ್' ಬಳಕೆ ಬಗ್ಗೆ ಯುವ ಸಮೂಹಕ್ಕೆ ಆಕರ್ಷಕ ಕಾಮೆಂಟ್ರಿ ಮೂಲಕ ತಿಳಿಸಿಕೊಡಲಾಯಿತು.

`ಕಾಂಡೋಮ್ ಒಂದು, ಲಾಭ ಮೂರು' ಎಂಬ ನಾಮಫಲಕವನ್ನು ತೂಗುಹಾಕಿಕೊಂಡು ಕಾಂಡೋಮ್ ಬಳಸುವುದರಿಂದ ಆಗುವ ಲಾಭದ ಜೊತೆಗೆ ಲೈಂಗಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ನೂರಾರು ಯುವ ಜನರು ಕುತೂಹಲದಿಂದ ಕಾಂಡೋಮ್ ಬಳಕೆ ಬಗ್ಗೆ ತಿಳಿದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.